Home ಸಿನಿ ಮಿಲ್ಸ್ ಡಾ. ವಿಷ್ಣುವರ್ಧನ್ ಸ್ಮಾರಕ ರಾತ್ರೋರಾತ್ರಿ ನೆಲಸಮ: ಕಣ್ಣೀರಿಟ್ಟ ನಿರ್ದೇಶಕ

ಡಾ. ವಿಷ್ಣುವರ್ಧನ್ ಸ್ಮಾರಕ ರಾತ್ರೋರಾತ್ರಿ ನೆಲಸಮ: ಕಣ್ಣೀರಿಟ್ಟ ನಿರ್ದೇಶಕ

0

ಬೆಂಗಳೂರು: ಕನ್ನಡ ಚಿತ್ರರಂಗದ ಮೇರು ನಟ ಡಾ. ವಿಷ್ಣುವರ್ಧನ್ ಸ್ಮಾರಕದ ವಿಚಾರವಾಗಿ ಮೊದಲಿನಿಂದಲೂ ನೋವಿನಲ್ಲಿದ್ದ ಅವರ ಅಭಿಮಾನಿಗಳಿಗೆ ಈಗ ಮತ್ತೊಂದು ನೋವಿನ ಘಟನೆ ನಡೆದಿದೆ.

ಹೈಕೋರ್ಟ್‌ ಸೂಚನೆ ಮೇರೆಗೆ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಾಹಸಸಿಂಹ ಡಾ. ವಿಷ್ಣುವರ್ಧನ ಸ್ಮಾರಕವನ್ನು ರಾತ್ರೋರಾತ್ರಿ ನೆಲಸಮಗೊಳಿಸಲಾಗಿದೆ.

ಕೆಂಗೇರಿ ಬಳಿಯ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್‌ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಅಲ್ಲಿಯೇ ಅವರ ಸ್ಮಾರಕವನ್ನು ನಿರ್ಮಿಸಲಾಗಿದ್ದು, ಅಭಿಮಾನಿಗಳು ಅಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಆದರೆ, ಏಕಾಏಕಿ ತೆರವುಗೊಳಿಸಿದ್ದು ಅಭಿಮಾನಿಗಳು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ವಿಷ್ಣುವರ್ಧನ ಸ್ಮಾರಕ ತೆರವುಗೊಳಿಸಿರುವುದರಿಂದ ಆಕ್ರೋಶಗೊಂಡ ಅಭಿಮಾನಿಗಳು ರಾಜ್ಯ ಸರಕಾರ, ಪೊಲೀಸ್‌ ಇಲಾಖೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಅಪಾರ ಸಂಖ್ಯೆ ಅಭಿಮಾನಿ ಬಳಗವನ್ನು ಹೊಂದಿರುವ ಡಾ. ವಿಷ್ಣುವರ್ಧನ 35 ವರ್ಷಗಳ ಕಾಲ ಕಲಾಸೇವೆಯಲ್ಲಿ ತೊಡಗಿದ್ದರು. ಸುಮಾರು 200 ಚಿತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಯಜಮಾನನಾಗಿ ಮೆರೆದಿದ್ದರು.

ವಿಷ್ಣು ನಿಧನದ ಬಳಿಕ ಅಭಿಮಾನ್‌ ಸ್ಟುಡಿಯೋ ಬಳಿ ಅಂತ್ಯಸಂಸ್ಕಾರ ನೆರವೇರಿಸಿದ್ದು, ವಿಷ್ಣು ಸಮಾಧಿಯನ್ನು ಸಂರಕ್ಷಿಸಿ, ಅದನ್ನು ಸ್ಮಾರಕವಾಗಿ ಘೋಷಿಸಬೇಕೆಂಬ ಹೋರಾಟ ನಡೆಯುತ್ತಲೇ ಇತ್ತು. ಇದರ ಮಧ್ಯೆ ಹೈಕೋರ್ಟ್‌ ಸೂಚನೆ ಮೇರೆ ಗುರುವಾರ ರಾತ್ರೋರಾತ್ರಿ ಸಮಾಧಿಯನ್ನು ತೆರವುಗೊಳಿಸಲಾಗಿದೆ.

ಕಣ್ಣೀರು ಹಾಕಿದ ನಿರ್ದೇಶಕ ರವಿ ಶ್ರೀವತ್ಸ: ವಿಷ್ಣು ಸಮಾಧಿ ಸ್ಥಳದಿಂದಲೇ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದ ನಿರ್ದೇಶಕ ರವಿ ಶ್ರೀವತ್ಸ, “ನನಗೆ ಅನ್ನ ಕೊಟ್ಟಂತಹ, ನನಗೆ ಸೂರು ಕೊಟ್ಟಂತಹ, ನಮಗೆ ಹೆಸರು ತಂದುಕೊಟ್ಟಂತಹ ದೇವರ ಗುಡಿಯನ್ನು ಇಂದು ನೆಲಸಮ ಮಾಡಿದ್ದಾರೆ. ಇದು ನನ್ನ ಯಜಮಾನರು ಮಲಗಿದ್ದಂತಹ ಜಾಗ. ಅಲ್ಲೊಂದು ಪುಟ್ಟ ಗುಡಿ ಇತ್ತು. ಸಣ್ಣ ಗೋಪುರ ಇತ್ತು. ಆ ಗೋಪುರವನ್ನು ರಾತ್ರೋರಾತ್ರಿ ನೆಲಸಮ ಮಾಡಿದ್ದಾರೆ. ನಮ್ಮ ಯಜಮಾನರನ್ನು ನೋಡಲು ಬಂದರೆ ಗೇಟ್ ಕೂಡ ತೆಗೆಯುತ್ತಿಲ್ಲ. ಒಳಗಡೆ ಪೊಲೀಸರು ಸರ್ಪಗಾವಲು ಹಾಕಿಕೊಂಡು ಕೂತ್ತಿದ್ದಾರೆ. ಬ್ಯಾರಿಕೇಡ್‌ ಹಾಕಿದ್ದಾರೆ. ಸಮಾಧಿಯನ್ನೂ ಕಾಪಾಡಿಕೊಳ್ಳಲಾಗದ ಪರಿಸ್ಥಿತಿಗೆ ನಾವು ಬಂದಿದ್ದೇವೆ ಎಂದು ಕಣ್ಣೀರು ಹಾಕಿದ್ದಾರೆ.”

“ಇಂದು ನಮ್ಮ ಸಮಾಜ ನಮ್ಮನ್ನು ಅನಾಥರನ್ನಾಗಿ ಮಾಡಿದೆ. ಇಂದು ನಾವು ನಿಜವಾಗಿಯೂ ನಮ್ಮ ಯಜಮಾನನ್ನು ಕಳೆದುಕೊಂಡಿದ್ದೇವೆ. ನೆಮ್ಮದಿಯಾಗಿ ಮಲಗಿದ್ದ ನಮ್ಮ ಯಜಮಾನನ ಜಾಗ ತೆರವು ಮಾಡಲಾಗಿದೆ. ದೊಡ್ಡ ದೊಡ್ಡ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಎಲ್ಲಿದ್ದೀರ? ಬನ್ನಿ ಸ್ವಾಮಿ ಇಲ್ಲಿ ಏನಾಗಿದೆ ಅಂತಾ ನೋಡುವಿರಂತೆ” ಎಂದು ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ವಿಷ್ಣು ಸ್ಮಾರಕ: ಈಗಾಗಲೇ ಮೈಸೂರಿನಲ್ಲಿ ಡಾ. ವಿಷ್ಣುವರ್ಧನ ಅವರ ಸ್ಮಾರಕ ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 2.75 ಎಕರೆ ಪ್ರದೇಶದಲ್ಲಿ ಮ್ಯೂಸಿಯಂ, ವಿಷ್ಣು ಪುತ್ಥಳಿ, ಚಿತ್ರರಂಗದಲ್ಲಿ ಅವರ ಹೆಜ್ಜೆಗುರುತು, ಅಪರೂಪದ ಚಿತ್ರಗಳು ಸೇರಿದಂತೆ ಆಡಿಟೋರಿಯಂ, ಎರಡು ಕ್ಲಾಸ್‌ ರೂಮ್‌ಗಳ ನಿರ್ಮಾಣ ಮಾಡಲಾಗುತ್ತಿದೆ. ಈ ಸ್ಮಾರಕ ನಿರ್ಮಾಣಕ್ಕೆ ಬಿ.ಎಸ್‌. ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version