ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಸೇತುವೆ ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಜುಲೈ 14ರಂದು ಉದ್ಘಾಟನಾ ಕಾರ್ಯಕ್ರಮ ನಿಗದಿಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಖಾತೆ ಸಚಿವ ನಿತಿನ್ ಗಡ್ಕರಿಗೆ ಭಾನುವಾರ ಈ ಕುರಿತು ಪತ್ರವನ್ನು ಬರೆದಿದ್ದಾರೆ. ಸೋಮವಾರ ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ತಯಾರಿ ನಡೆದಿದ್ದು, ಮುಂದೇನು? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಸಿಗಂದೂರು ಸೇತುವೆ ಉದ್ಘಾಟನೆ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ನಡೆಯುತ್ತಿತ್ತು. ಐತಿಹಾಸಿಕವಾದ ಸೇತುವೆ ಶರಾವತಿ ಹಿನ್ನೀರಿನ ಜನರ ದಶಕಗಳ ಕನಸು. ಸೇತುವೆ ನಿರ್ಮಾಣಗೊಂಡು ಎಲ್ಲಾ ಪರೀಕ್ಷೆಗಳು ಮುಗಿದು ಉದ್ಘಾಟನೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ಈಗ ಉದ್ಘಾಟನೆ ದಿನಾಂಕ ಮುಂದೂಡಿಕೆ ಮಾಡಲು ರಾಜ್ಯದ ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ.
ಸಿದ್ದರಾಮಯ್ಯ ಪತ್ರದಲ್ಲಿ ಏನಿದೆ?: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಖಾತೆ ಸಚಿವಾಲಯ ವಿವಿಧ ಕಾಮಗಾರಿ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ಸಮಾರಂಭವನ್ನು ಜುಲೈ 14ರಂದು ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣೆ ನೆಹರು ಮೈದಾನದಲ್ಲಿ ಆಯೋಜನೆ ಮಾಡಿದೆ.
ಈ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದು, ಕರಡು ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಇರುವುದು ಸಹ ತಿಳಿದುಬಂದಿದೆ. ಆದರೆ ಈ ಕಾರ್ಯಕ್ರಮದ ಕುರಿತು ಮುಂಚಿತವಾಗಿಯೇ ನನಗೆ ಮಾಹಿತಿ ನೀಡಿಲ್ಲ. ವಿಜಯಪುರದಲ್ಲಿ ಇದೇ ದಿನ ನನ್ನ ಅಧ್ಯಕ್ಷತೆಯಲ್ಲಿ ವಿವಿಧ ಕಾರ್ಯಕ್ರಮಗಳು ನಿಗದಿಯಾಗಿವೆ.
ರಾಜ್ಯ ಮಟ್ಟದ ಯಾವುದೇ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೊದಲು ಸಚಿವಾಲಯ ರಾಜ್ಯ ಸರ್ಕಾರದ ಜೊತೆ ಮಾತುಕತೆ ನಡೆಸಬೇಕು. ಆದ್ದರಿಂದ ಕಾರ್ಯಕ್ರಮ ಆಯೋಜನೆ ಮಾಡುವ ಮೊದಲು ರಾಜ್ಯ ಸರ್ಕಾರದ ಜೊತೆ ಚರ್ಚಿಸಿ ಎಂದು ಮನವಿ ಮಾಡುತ್ತೇನೆ.
ಸೋಮವಾರ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡಬೇಕು. ನಿಮಗೆ ಅನುಕೂಲವಾಗುವಂತೆ ಕೆಲವು ದಿನಾಂಕವನ್ನು ನೀಡಿ. ಆ ದಿನಾಂಕದಂದು ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನನಗೂ ಸಹ ಅನುಕೂಲವಾಗುತ್ತದೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಮನವಿ ಮಾಡಿದ್ದಾರೆ.
473 ಕೋಟಿ ರೂ. ವೆಚ್ಚದಲ್ಲಿ ಸಿಗಂದೂರಿನಲ್ಲಿ ಶರಾವತಿ ಹಿನ್ನೀರಿನಲ್ಲಿ ಕೇಬಲ್ ಬ್ರಿಡ್ಜ್ ನಿರ್ಮಾಣ ಮಾಡಲಾಗಿದೆ. ಈ ಸೇತುವೆ ಉದ್ಘಾಟನೆ ಕಾರ್ಯಕ್ರಮ ಸೋಮವಾರಕ್ಕೆ ನಿಗದಿಯಾಗಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ, ಪ್ರಹ್ಲಾದ್ ಜೋಶಿ, ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮುಂತಾದವರನ್ನು ಆಹ್ವಾನಿಸಲಾಗಿದೆ.
ಸಾಗರ ತಾಲೂಕಿನ ಅಂಬಾರಗೋಡ್ಲು-ಕಳಸವಳ್ಳಿ (ಸಿಗಂದೂರು) ನಡುವೆ ಈ ಸೇತುವೆ ಸಂಪರ್ಕ ಕಲ್ಪಿಸಲಿದೆ. ಸೇತುವೆ ನಿರ್ಮಾಣದಿಂದ ಶರಾವತಿ ಹಿನ್ನೀರಿನಲ್ಲಿ ಲಾಂಚ್ ಮೂಲಕ ಸಾಗುವುದು, ವಾಹನಗಳನ್ನು ಸಾಗಣೆ ಮಾಡುವುದಕ್ಕೆ ತಡೆ ಬೀಳಲಿದೆ.
ಈ ಸೇತುವೆ ಕಾಮಗಾರಿ ಡಿಸೆಂಬರ್ 12, 2019ರಂದು ಪ್ರಾರಂಭವಾಯಿತು. 2125 ಮೀಟರ್ ಉದ್ದದ ಸೇತುವೆ, 3 ಕಿ. ಮೀ. ತನಕ ಸಂಪರ್ಕ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ಈ ಸೇತುವೆ ನಿರ್ಮಾಣದ ಕ್ರೆಡಿಟ್ ತೆಗೆದುಕೊಳ್ಳುವ ವಿಚಾರದಲ್ಲಿ ಶಿವಮೊಗ್ಗದಲ್ಲಿ ಬಿಜೆಪಿ, ಕಾಂಗ್ರೆಸ್ ನಾಯಕರ ನಡುವೆ ಜಟಾಪಟಿ ನಡೆಯುತ್ತಿದೆ. ಇದೇ ಕಾರಣಕ್ಕೆ ಈಗ ಉದ್ಘಾಟನೆ ದಿನಾಂಕ ಮುಂದೂಡಿಕೆ ಮಾಡಲು ಸಹ ಪತ್ರ ಬರೆಯಲಾಗಿದೆ.