ಬೆಂಗಳೂರು: ಡಿಜಿಟಲ್ ಪೇಮೆಂಟ್‌ನಿಂದಾಗಿ ಚಿಲ್ಲರೆ ಕಿರಿಕಿರಿಯಿಂದ ಮುಕ್ತರಾಗಿದ್ದ ಸಣ್ಣ ವ್ಯಾಪಾರಸ್ಥರಿಗೆ ನೋಟಿಸ್ ಮೂಲಕ ಶಾಕ್ ನೀಡಿದ್ದ ವಾಣಿಜ್ಯ ಇಲಾಖೆ ಈಗ ಮತ್ತೊಂದು ಸ್ಪಷ್ಟಿಕರಣ ನೀಡಿದೆ.
40 ಲಕ್ಷ ರೂ.ಗಳಿಂದ 1 ಕೋಟಿವರೆಗೂ ದಂಡ ವಿಧಿಸಿ ವಾಣಿಜ್ಯ ತೆರಿಗೆ ಇಲಾಖೆ ವ್ಯಾಪಾರಸ್ಥರಿಗೆ ನೋಟಿಸ್ ನೀಡಿತ್ತು. ಇದರಿಂದಾಗಿ ಸಣ್ಣ ಹಾಗೂ ಮಧ್ಯಮ ವ್ಯಾಪಾರಿಗಳು ಕಂಗಾಲಾಗಿದ್ದರು. ಇದಕ್ಕಾಗಿ ಈಗ ವಾಣಿಜ್ಯ ತೆರಿಗೆಗಳ ಇಲಾಖೆಯ ಆಯುಕ್ತರು ರಾಜೀ ತೆರಿಗೆ ಕುರಿತಂತೆ ಪ್ರಕಟಣೆ ಹೊರಡಿಸಿದ್ದಾರೆ
ಜುಲೈ 1, 2017ರಿಂದ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ದೇಶಾದ್ಯಂತ ಜಾರಿಗೆ ತರಲಾಗಿತ್ತು. ಇದರನ್ವಯ ಆರ್ಥಿಕ ವರ್ಷದಲ್ಲಿ 40 ಲಕ್ಷ ರೂ.ಗಳಿಗಿಂತ ಹೆಚ್ಚು ವಹಿವಾಟು ನಡೆಸಿದ ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಂದಣಿ ಕಡ್ಡಾಯಗೊಳಿಸಲಾಗಿತ್ತು.
2022 ರಿಂದ 2025ರವರೆಗೂ ಏಕೀಕೃತ ಪಾವತಿ ವ್ಯವಸ್ಥೆಯಲ್ಲಿ ವಹಿವಾಟು ನಡೆಸಿರುವ ವರ್ತಕರ ವಹಿವಾಟಿನ ಮಾಹಿತಿ ಪಡೆದಿರುವ ವಾಣಿಜ್ಯ ತೆರಿಗೆ ಇಲಾಖೆ, 40 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಯುಪಿಐ ಮೂಲಕ ಸ್ವೀಕರಿಸಿದ್ದು, ತೆರಿಗೆ ಪಾವತಿಸದ ವರ್ತಕರಿಗೆ ಮಾತ್ರ ಇದೀಗ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಲಾಗಿದೆ.
ಸದ್ಯ ವಾರ್ಷಿಕ ವಹಿವಾಟು 1.5 ಕೋಟಿ ರೂಪಾಯಿಗಳಿಗಿಂತ ಕಡಿಮೆ ಇರುವ ಸಣ್ಣ ವರ್ತಕರು ರಾಜೀ ತೆರಿಗೆಯನ್ನು ಆಯ್ಕೆ ಮಾಡಬಹುದಾಗಿದೆ. ಇದರಿಂದಾಗಿ ಸಣ್ಣ ವ್ಯಾಪಾರಸ್ಥರು ಇನ್ನು ಶೇ. 1ರಷ್ಟು ತೆರಿಗೆ ಪಾವತಿಸಲು ಅವಕಾಶ ನೀಡಲಾಗಿದೆ.
ರಾಜೀ ತೆರಿಗೆಯನ್ನು ಆಯ್ಕೆ ಮಾಡಬಯಸುವ ಇಂತಹ ವರ್ತಕರು ತಕ್ಷಣವೇ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ವಾಣಿಜ್ಯ ತೆರಿಗೆಗಳ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.