ಕರಾವಳಿ ಕರ್ನಾಟಕದಲ್ಲಿ ದೇಶದ ಮೊದಲ ಬಯೋಚಾರ್ ಘಟಕ, ವಿಶೇಷತೆಗಳು

0
88

ಉಡುಪಿ: ದೇಶದ ಮೊಟ್ಟಮೊದಲ ಅತ್ಯಾಧುನಿಕ ಬಯೋಚಾರ್ ಘಟಕ ಉಡುಪಿಯಲ್ಲಿ ನಿರ್ಮಾಣಗೊಳ್ಳಲಿದೆ. ಬಯೋಚಾರ್ ಬಳಕೆಯು ಪರಿಸರಕ್ಕೂ ಒಳ್ಳೆಯದು, ಏಕೆಂದರೆ ಇದು ಇಂಗಾಲವನ್ನು ಮಣ್ಣಿನಲ್ಲಿ ಸಂಗ್ರಹಿಸಿ ವಾತಾವರಣಕ್ಕೆ ಬಿಡುಗಡೆಯಾಗದಂತೆ ತಡೆಯುತ್ತದೆ. ಮಣ್ಣಿನ ಆರೋಗ್ಯ ಸುಧಾರಿಸಲು, ಬೆಳೆ ಇಳುವರಿ ಹೆಚ್ಚಿಸಲು ಮತ್ತು ಪರಿಸರವನ್ನು ರಕ್ಷಿಸಲು ಬಯೋಚಾರ್ ಒಂದು ಉಪಯುಕ್ತ ಸಾಧನವಾಗಿದೆ.

ಡೆನ್ಮಾರ್ಕ್‌ನ ಮಾಷ್ ಮೇಕ್ಸ್ ಕಂಪೆನಿಯು ರೂ. 100 ಕೋಟಿಗಳಲ್ಲಿ ಮಣ್ಣಿನ ಫಲವತ್ತತೆ ಸುಧಾರಿಸುವ ಗೋಡಂಬಿ ಸಂಸ್ಕರಣೆಯ ತ್ಯಾಜ್ಯ ಬಳಸಿ ಸಮೃದ್ಧ ಇಂಗಾಲ ಹೊಂದಿರುವ ಬಯೋಚಾರ್ ತಯಾರಿಸುವ ಘಟಕವನ್ನು ಉಡುಪಿಯಲ್ಲಿ ಸ್ಥಾಪಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.

ಬಯೋಚಾರ್ ಎಂದರೇನು?:  ಜೈವಿಕ ಇದ್ದಿಲು ಅಥವಾ ಬಯೋಚಾರ್ ಎಂದರೆ, ಸಾವಯವ ಪದಾರ್ಥಗಳನ್ನು (ಉದಾಹರಣೆಗೆ, ಮರ, ಎಲೆಗಳು) ಮಿತ ಆಮ್ಲಜನಕದ ವಾತಾವರಣದಲ್ಲಿ ಬಿಸಿಮಾಡಿ ತಯಾರಿಸಿದ ಇಂಗಾಲ ಭರಿತ ವಸ್ತುವಾಗಿದೆ. ಇದು ಮಣ್ಣಿನ ಆರೋಗ್ಯವನ್ನು ಸುಧಾರಿಸಲು ಮತ್ತು ಬೆಳೆ ಇಳುವರಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಅವಶ್ಯಕತೆ: ರೈತರು ಉತ್ತಮ ಬೆಳೆಗಳಿಗಾಗಿ ಮಿತಿಮೀರಿದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಮಾಡಿದ ಪರಿಣಾಮ ಮಣ್ಣಿನ ಪಲವತ್ತತೆ ಕಡಿಮೆಯಾಗುತ್ತ ಹೊಗುತ್ತದೆ. ಏಕಬೆಳೆ ಪದ್ದತಿ, ಸಾವಯವ ಗೊಬ್ಬರ ಬಳಸದಿರುವುದು ಹೀಗೆ ಹಲವಾರು ಕಾರಣಗಳಿಗೆ ಕೃಷಿ ಭೂಮಿ ತನ್ನ ಸತ್ವಕಳೆದುಕೊಂಡು ಬರಡಾಗುತ್ತಿದೆ. ಈ ಹಾಳಾದ ಮಣ್ಣನ್ನು ಪುನಃಚೇತನಗೊಳಿಸಲು ಬಯೋಚಾರ ಮಾದರಿಯು ಸಹಾಯಕವಾಗುತ್ತದೆ.

ತಯಾರಿಸುವ ವಿಧಾನ: ಸಾವಯವ ವಸ್ತುಗಳನ್ನು ಒಲೆಯಂತಹ ಸಾಧನದಲ್ಲಿ ಇಟ್ಟು, ಆಮ್ಲಜನಕದ ಪೂರೈಕೆಯನ್ನು ಮಿತಿಗೊಳಿಸಿ ಬಿಸಿ ಮಾಡಲಾಗುತ್ತದೆ. ಹೀಗೆ ಬಿಸಿ ಮಾಡಿದಾಗ, ಸಾವಯವ ವಸ್ತುಗಳಲ್ಲಿರುವ ಅನಿಲಗಳು ಮತ್ತು ತೈಲಗಳು ಆವಿಯಾಗಿ ಹೊರಹೋಗುತ್ತವೆ ಮತ್ತು ಇಂಗಾಲ ಮತ್ತು ಬೂದಿ ಮಾತ್ರ ಉಳಿಯುತ್ತದೆ. ಈ ಇಂಗಾಲ ಭರಿತ ವಸ್ತುವೇ ಬಯೋಚಾರ್ ಆಗಿದೆ.

ಬಯೋಚಾರ್ ಅನ್ನು ಮಣ್ಣಿನಲ್ಲಿ ಬೆರೆಸಿದಾಗ, ಅದು ಮಣ್ಣಿನ ಜಲಧಾರಿಣೆಯನ್ನು ಸುಧಾರಿಸುತ್ತದೆ, ಪೋಷಕಾಂಶಗಳನ್ನು ಉಳಿಸಿಕೊಳ್ಳುತ್ತದೆ ಮತ್ತು ಮಣ್ಣಿನ ರಚನೆಯನ್ನು ಉತ್ತಮಗೊಳಿಸುತ್ತದೆ. ಇದರಿಂದ ಬೆಳೆಗಳಿಗೆ ಅಗತ್ಯವಿರುವ ನೀರು ಮತ್ತು ಪೋಷಕಾಂಶಗಳು ಮಣ್ಣಿನಲ್ಲಿ ಬೆರೆತು ಸುಲಭವಾಗಿ ಲಭ್ಯವಾಗುತ್ತವೆ.

ಕಾಡಿನ ಪ್ರಕೃತ್ತಿಯಲ್ಲಿ ಸಹಜ ಪ್ರಕ್ರಿಯೆ: ದಟ್ಟವಾಗಿ ಬೆಳೆಯುವ ಕಾಡಿನಲ್ಲಿ ಈ ಪ್ರಕ್ರಿಯೆಯು ಸಹಜವಾಗಿರುತ್ತದೆ. ಬೇಸಿಗೆಯ ಕಾಲದಲ್ಲಿ ಕಾಡಿನಲ್ಲಿ ತಗಲುವ ಕಾಡ್ಗಿಚ್ಚನಿಂದಾಗಿ ಮರ ಎಲೆಗಳೂ ಸುಟ್ಟಂತೆ ಕಂಡರೂ ಒಂದೆರಡು ವರ್ಷಗಳಲ್ಲಿ ಅಲ್ಲಿ ಏನು ಆಗಿಲ್ಲ ಎನ್ನುವಂತೆ ಮತ್ತಷ್ಟು ಗಿಡಗಳು ಹುಟ್ಟಿ ಆ ಪ್ರದೇಶವನ್ನು ಹಸಿರಿನಿಂದ ತುಂಬಿಕೊಳ್ಳುತ್ತವೆ. ಕಾಡಿನಲ್ಲಿ ಆಗುವ ಕಾಡ್ಗಿಚ್ಚು ಅಥವಾ ಲಾವಾರಸದಲ್ಲಿ ಮರಗಿಡಗಳು ಸುಟ್ಟು ಇದ್ದಿಲ್ಲಾಗಿ ಪರಿವರ್ತನೆಗೊಂಡು ಮಣ್ಣು ಮತ್ತಷ್ಟು ಪೋಷಕಾಂಶದಿಂದ ಸೃಷ್ಠಿಯಾಗಿ ಅತ್ಯಂತ ಫಲವತ್ತಾಗಿರುವ ಕಾರಣ ಅಲ್ಲಿ ವೇಗವಾಗಿ ದಟ್ಟಾರಣ್ಯ ಬೆಳೆಯಲು ಸಾಧ್ಯವಾಗಿದೆ. ಇದೇ ತತ್ವವನ್ನು ಕೃಷಿ ಭೂಮಿಯಲ್ಲಿ ಅಳವಡಿಸುವ ಕ್ರಮವೇ ಬಯೋಚಾರ್ ವಿಧಾನವಾಗಿದೆ.

Previous article30 ನಿಮಿಷದಲ್ಲಿ ಅಂಜನಾದ್ರಿ ಬೆಟ್ಟವೇರಿ ಆಂಜನೇಯನ ದರ್ಶನ ಪಡೆದ ರಾಜ್ಯಪಾಲರು
Next articleVande Bharat: ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು, ಎಲ್ಲಾ ನಿಲ್ದಾಣ, ವೇಳಾಪಟ್ಟಿ

LEAVE A REPLY

Please enter your comment!
Please enter your name here