30 ವರ್ಷದ ನಂತರ ಆರೋಪಿಯ ಬಂಧನ

0
21

ಬೆಳಗಾವಿ: ಕಳೆದ ೩೦ ವರ್ಷಗಳ ಹಿಂದಿನ ಲಂಚ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು ನೀಡಿದ್ದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ಮಾಜಿ ಗ್ರಾಮಲೆಕ್ಕಿಗ ನಾಗೇಶ ಡೊಂಡು ಶಿವಂಗೆಕರ ಎಂಬಾತನನ್ನು ಬಂಧಿಸಲಾಯಿತು.
೧೯೯೫ರಲ್ಲಿ ಕಡೋಲಿ ರೈತ ಲಕ್ಷ್ಮಣ ಕಟಾಂಬಳೆ ಅವರು ತಮ್ಮ ಸಹೋದರನೊಂದಿಗೆ ಜಮೀನು ಹಂಚಿಕೆ (ವಾಟ್ನಿ) ಮಾಡಿ ಉತಾರ ಕೊಡಲು ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಗ್ರಾಮಲೆಕ್ಕಿಗ ೫೦೦ ರೂ. ಲಂಚ ಕೇಳಿದ್ದರು. ಇದನ್ನು ರೈತ ಲೋಕಾಯುಕ್ತ ಅಧಿಕಾರಿಗಳಿಗೆ ತಿಳಿಸಿದ್ದರು. ಜಾಲ ಬೀಸಿದ ಅಧಿಕಾರಿಗಳು ಲಂಚ ಪಡೆಯುವಾಗ ಬಂಧಿಸಿದ್ದರು.
ಆಗಿನ ಬೆಳಗಾವಿ ಜಿಲ್ಲಾ ಲೋಕಾಯುಕ್ತ ಉಪ ಅಧೀಕ್ಷಕ ಎಂ.ಎಸ್. ದಂಡಿನ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಿದ್ದರು. ವಿಶೇಷ ನ್ಯಾಯಾಲಯವು ೨೦೦೬ರ ಜೂನ್ ೧೪ರಂದು ನಾಗೇಶಗೆ ಒಂದು ವರ್ಷ ಕಠಿಣ ಶಿಕ್ಷೆ ಹಾಗೂ ೧ ಸಾವಿರ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ನಾಗೇಶ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ೨೦೧೨ರ ಮಾರ್ಚ್ ೯ರಂದು ಹೈಕೋರ್ಟ್ ನಾಗೇಶ ನಿರಪರಾಧಿ ಎಂದು ತೀರ್ಪು ನೀಡಿತ್ತು.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಲೋಕಾಯುಕ್ತ ಅಧಿಕಾರಿಗಳು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಏಪ್ರಿಲ್ ೧೬ರಂದು ಸುಪ್ರೀಂಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಿತು. ಅಲ್ಲದೇ ಬೆಳಗಾವಿ ವಿಶೇಷ ನ್ಯಾಯಾಲಯ ನೀಡಿದ ಆದೇಶವನ್ನು ಎತ್ತಿ ಹಿಡಿಯಿತು. ಆಪಾದಿತನ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿತ್ತು. ಆದೇಶದಂತೆ ಬುಧವಾರ ಬಂಧಿಸಲಾಗಿದೆ.
ಲೋಕಾಯುಕ್ತ ಅಧಿಕಾರಿಗಳು ೧೦ ವರ್ಷಗಳ ಹಿಂದೆ ಸೇವೆಯಿಂದ ನಿವೃತ್ತರಾದ ೭೦ ವರ್ಷದ ನಾಗೇಶ್ ದೊಂಡು ಶಿವಂಗೇಕರ್ ಅವರನ್ನು ಬಂಧಿಸಿದರು. ನಂತರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಸದ್ಯ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Previous articleಕೊರೊನಾ: 106 ಮಂದಿಗೆ ಸೋಂಕು
Next articleಕ್ರಿಪ್ಟೊ ಕರೆನ್ಸಿ: ನಂಬಿಸಿ 5.43 ಲಕ್ಷ ವಂಚನೆ