Home ತಾಜಾ ಸುದ್ದಿ ಸರ್ಕಾರಿ ನೌಕರರಂತೆ ಕೆಲಸ ಮಾಡಲು ಖಾಸಗಿ ವ್ಯಕ್ತಿಗಳಿಗೆ ಅವಕಾಶ: ಏಳು ಜನರ ವಿರುದ್ಧ ಪ್ರಕರಣ ದಾಖಲು

ಸರ್ಕಾರಿ ನೌಕರರಂತೆ ಕೆಲಸ ಮಾಡಲು ಖಾಸಗಿ ವ್ಯಕ್ತಿಗಳಿಗೆ ಅವಕಾಶ: ಏಳು ಜನರ ವಿರುದ್ಧ ಪ್ರಕರಣ ದಾಖಲು

0

ದಾವಣಗೆರೆ: ಇಬ್ಬರು ಖಾಸಗಿ ವ್ಯಕ್ತಿಗಳಿಗೆ ಸರ್ಕಾರಿ ನೌಕರರಂತೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದ ಹರಿಹರ ನಗರಸಭೆ ಪೌರಾಯುಕ್ತ, ಕಂದಾಯ ಅಧಿಕಾರಿ, ಪ್ರಭಾರ ಕಂದಾಯ ಅಧಿಕಾರಿ, ಕಚೇರಿ ವ್ಯವಸ್ಥಾಪಕಿ ಸೇರಿದಂತೆ ಏಳು ಜನರ ವಿರುದ್ಧ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಲೋಕಾಯುಕ್ತ ಪೊಲೀಸರು ಬುಧವಾರ ದೂರು ಸಲ್ಲಿಸಿದ್ದಾರೆ.
ಹರಿಹರ ನಗರಸಭೆ ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ಕಚೇರಿ ವ್ಯವಸ್ಥಾಪಕಿ ನಿರಂಜನಿ, ಕಂದಾಯ ನಿರೀಕ್ಷಕಿ ಚಿತ್ರ, ಪ್ರಭಾರ ಕಂದಾಯ ನಿರೀಕ್ಷಕ ರಮೇಶ್, ಸರ್ಕಾರಿ ನೌಕರರಂತೆ ಕೆಲಸ ಮಾಡುತ್ತಿದ್ದ ಮೌನೇಶ್, ಮಹಮ್ಮದ್ ಹಫೀಜ್ ವುಲ್ಲಾ ಮತ್ತು ಹನುಮಂತಪ್ಪ ತುಂಬಿಗೆರೆ ವಿರುದ್ಧ ಲೋಕಾಯುಕ್ತ ಉಪಾಧೀಕ್ಷಕಿ ಕಲಾವತಿ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಿಲ್ಲಾ ಲೋಕಾಯುಕ್ತ ಪೊಲೀಸರು ಏ. 7ರಂದು ಹರಿಹರ ನಗರಸಭೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮೌನೇಶ್, ಮಹಮ್ಮದ್ ಹಫೀಜ್ ವುಲ್ಲಾ ಸರ್ಕಾರಿ ನೌಕರರಂತೆ ಕೆಲಸ ಮಾಡುತ್ತಿದ್ದರು. ಇಬ್ಬರನ್ನು ವಿಚಾರಣೆ ನಡೆಸಿದಾಗ ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ಕಚೇರಿ ವ್ಯವಸ್ಥಾಪಕಿ ನಿರಂಜನಿ, ಕಂದಾಯ ನಿರೀಕ್ಷಕಿ ಚಿತ್ರ, ಪ್ರಭಾರ ಕಂದಾಯ ನಿರೀಕ್ಷಕ ರಮೇಶ್ ಅವರ ಆದೇಶದಂತೆ ಕೆಲಸ ಮಾಡುತ್ತಿದ್ದೇವೆ. ನಮ್ಮಿಬ್ಬರ ಜೊತೆಗೆ ಹನುಮಂತಪ್ಪ ತುಂಬಿಗೆರೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವುದಾಗಿ ತಿಳಿಸಿದ್ದರು.
ಏ. 1ರಿಂದ 7ರವರೆಗೆ ಸಾರ್ವಜನಿಕರಿಂದ ಅರ್ಜಿ ಇತರೆಯದ್ದಕ್ಕೆಂದು ಒಟ್ಟು 1,63,266 ರೂಪಾಯಿ ಸಂಗ್ರಹಿಸಿದ್ದರು.‌ ಅದರಲ್ಲಿ ‌89,400 ರೂಪಾಯಿಗಳನ್ನು ಹಫೀಜ್ ವುಲ್ಲಾನ ಸಹೋದರ ಮಹಮ್ಮದ್ ತೌಸಿಫ್ ವುಲ್ಲಾನ ಎಸ್‌ಬಿಐ ಖಾತೆಯಲ್ಲಿ ಜಮೆ ಮಾಡಿದ್ದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ‌ ಕೈಗೊಂಡಿದ್ದಾರೆ.

Exit mobile version