ಶ್ರೀ ನಿಮಿಷಾಂಬಾ ದೇವಾಲಯದಲ್ಲಿ ಮಾಘ ಶುದ್ಧ ಪೌರ್ಣಿಮೆ ಮಹೋತ್ಸವ

ಶ್ರೀರಂಗಪಟ್ಟಣ: ಪಟ್ಟಣದ ಗಂಜಾಂನ ಶ್ರೀ ನಿಮಿಷಾಂಬಾ ದೇವಾಲಯದಲ್ಲಿ ಮಾಘ ಶುದ್ಧ ಪೌರ್ಣಿಮೆ ಮಹೋತ್ಸವದ ಅಂಗವಾಗಿ ದೇವಿಗೆ ಇದೇ ಮೊದಲ ಬಾರಿಗೆ ರಥೋತ್ಸವ ನೆರವೇರಿತು.
ಪ್ರತಿ ವರ್ಷದಂತೆ ಈ ವರ್ಷವೂ ನಿನ್ನೆ ಮಧ್ಯ ರಾತ್ರಿ 1ಗಂಟೆಯಿಂದಲೇ ಇಲ್ಲಿನ ಕಾವೇರಿ ನದಿಯಲ್ಲಿ ಭಕ್ತರಿಗೆ ಮಾಘ ಶುದ್ಧ ಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಂದು ಸಹ ರಾತ್ರಿ 10ಗಂಟೆಯವರೆಗೂ ಮಾಘ ಶುದ್ಧ ಸ್ನಾನಕ್ಕೆ ಅವಕಾಶ ಕಲ್ಪಿಸಿರುವುದಾಗಿ ದೇವಾಲಯದ ಇಒ ಕೃಷ್ಣ ತಿಳಿಸಿದ್ದಾರೆ.
ಮಾಘ ಶುದ್ಧ ಪೌರ್ಣಿಮೆ ಮಹೋತ್ಸವದ ಅಂಗವಾಗಿ ದೇವಾಲಯದ ಆವರಣದಲ್ಲಿ ಇದೇ ಮೊದಲ ಬಾರಿಗೆ ದೇವಿಗೆ ರಥೋತ್ಸವ ಜರುಗಿತು. ಇಂದು ಬೆಳಿಗ್ಗೆ 5.20ರಿಂದ 6ಗಂಟೆಗೆ ಸಲ್ಲುವ ಶುಭ ಲಗ್ನದಲ್ಲಿ ಜಿಲ್ಲಾಧಿಕಾರಿ ಡಾ. ಕುಮಾರ ಸೇರಿದಂತೆ ಇಲಾಖೆಯ ಗಣ್ಯರು ರಥೋತ್ಸವಕ್ಕೆ ಚಾಲನೆ ನೀಡಿದರು.
ಇಂದು ದೇವಿಗೆ ವಿಶೇಷ ಅಲಂಕಾರದೊಂದಿಗೆ ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ, ಪೂರ್ವಕ ಮಹಾಭಿಷೇಕ, ಗಣಕಹೋಮ, ನಕ್ಷತ್ರಹೋಮ, ದುರ್ಗಾಹೋಮ, ಸತ್ಯನಾರಾಯಣ ಪೂಜೆ ಸೇರಿದಂತೆ ವಿಶೇಷ ಪೂಜೆಗಳು ಜರುಗಿದವು.
ಜೊತೆಗೆ ಬರುವ ಎಲ್ಲಾ ಭಕ್ತರಿಗೂ ಪ್ರಸಾದ ವಿತರಣೆ ಮಾಡಲಾಯಿತು. ಸ್ಥಳೀಯ ಹಾಗೂ ನುರಿತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧಡೆಗಳಿಂದ ಸಾವಿರಾರು ಭಕ್ತರು ಆಗಮಿಸಿ ನಿಮಿಷಾಂಬ ದೇವಿಯ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.
ಭಕ್ತರಿಗೆ ಸ್ನಾನಕ್ಕೆ ಬೇಕಾದ ಅನುಕೂಲ, ಬಟ್ಟೆ ಬದಲಾಯಿಸಿಕೊಳ್ಳಲು ಹಾಗೂ ಶೌಚಾಲಯದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.