Home ತಾಜಾ ಸುದ್ದಿ ಮುಡಾ ಹಗರಣದಿಂದ ಸಿದ್ದರಾಮಯ್ಯ ಆರೋಪ ಮುಕ್ತರಾಗಿಲ್ಲ

ಮುಡಾ ಹಗರಣದಿಂದ ಸಿದ್ದರಾಮಯ್ಯ ಆರೋಪ ಮುಕ್ತರಾಗಿಲ್ಲ

0

ದಾವಣಗೆರೆ: ಮುಡಾ ಹಗರಣದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಅವಶ್ಯಕತೆ ಇಲ್ಲವೆಂದು ಹೈಕೋರ್ಟ್ ಹೇಳಿದೆಯಷ್ಟೇ. ಮುಡಾ ಹಗರಣದ ಆರೋಪದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಕ್ತರಾಗಿಲ್ಲ. ನೈತಿಕತೆ ಇದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ ಒತ್ತಾಯಿಸಿದರು.
ಜಗಳೂರು ತಾ. ಉಚ್ಚಂಗಿಪುರ ಗ್ರಾಮದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಪತ್ನಿ ಮುಡಾದಿಂದ 14 ನಿವೇಶನ ಪಡೆದಿದ್ದು ಸತ್ಯವಾಗಿದ್ದು, ಅದು ಜಗಜ್ಜಾಹೀರಾಗಿರುವುದು ಸತ್ಯವೇ ಆಗಿದೆ ಎಂದರು.
ಮುಡಾ ಹಗರಣದಿಂದೇನೂ ಸಿದ್ದರಾಮಯ್ಯ ಆರೋಪ ಮುಕ್ತರಾಗಿಲ್ಲ. ನಮಗೆ ಲೋಕಾಯುಕ್ತ, ಸಿಬಿಐ, ಇಡಿ ಸೇರಿದಂತೆ ಎಲ್ಲಾ ತನಿಖಾ ಸಂಸ್ಥೆಗಳ ಮೇಲೆಯೂ ನಂಬಿಕೆ ಇದೆ ಎಂದು ಅವರು ತಿಳಿಸಿದರು.
ಮೈಸೂರಿನ ಮುಡಾ ಹಗರಣದ ದೂರುದಾರರು ಸುಪ್ರೀಂ ಕೋರ್ಟ್‌ಗೆ ಹೋಗುವುದು ಸೂಕ್ತ. ನಮ್ಮಗಳ ಆಶಯವೂ ಇದೇ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇನೂ ಆರೋಪದಿಂದ ಮುಕ್ತರಾಗಿಲ್ಲವೆಂಬುದು ಸ್ಪಷ್ಟವಾಗಿದೆ. ಸಿದ್ದರಾಮಯ್ಯನವರಿಗೆ ಸ್ವಾಭಿಮಾನ, ಜನರ ಭಾವನೆಗಳಿಗೆ ಬೆಲೆ ಕೊಡುವುದಾದರೆ ಮೊದಲು ತಮ್ಮ ಹುದ್ದೆಗೆ ರಾಜೀನಾಮೆ ಕೊಡಲಿ ಎಂದು ಅವರು ಒತ್ತಾಯಿಸಿದರು.
ಸರ್ಕಾರವೇ ಮುಡಾ ಪ್ರಕರಣವನ್ನು ಸಿಬಿಐಗೆ ಕೊಡಬಹುದು. ಆದರೆ, ಸಿಬಿಐ ಭಯದಿಂದ ಮುಡಾ ಸೈಟ್ ಹಗರಣದ ಪ್ರಕರಣವನ್ನು ಕಾಂಗ್ರೆಸ್ಸಿನವರು ಸಿಬಿಐ ತನಿಖೆಗೆ ಒಪ್ಪಿಸುತ್ತಿಲ್ಲ ಅಷ್ಟೇ. ನಮಗೆ ತನಿಖಾ ಸಂಸ್ಥೆಗಳ ಮೇಲೆ ಸಂಪೂರ್ಣ ವಿಶ್ವಾಸವಿದೆ. ಮುಡಾ ಸೈಟ್ ಹಗರಣದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಿ, ತನಿಖೆಗೆ ಸಹಕರಿಸಲಿ ಎಂದು ರವಿಕುಮಾರ ಆಗ್ರಹಿಸಿದರು.

Exit mobile version