ಸಂ. ಕ. ಸಮಾಚಾರ, ಮಂಗಳೂರು: ದೇಶದಲ್ಲೇ ಅತಿ ದೊಡ್ಡ ಭೂಗತ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಸ್ಥಾವರವನ್ನು ಮಂಗಳೂರಿನಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಈ ಭೂಗತ ಸುರಂಗದಲ್ಲಿ ೮೦ ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಅನಿಲವನ್ನು ಸಂಗ್ರಹಿಸಬಹುದಾಗಿದೆ.
ಭೂಗತ ಸಂಗ್ರಹಣ ವ್ಯವಸ್ಥೆಯ ಸುರಕ್ಷತೆ ಪರಿಶೀಲಿಸಲು ಮೇ ೯ರಿಂದ ಜೂನ್ ೬ರ ವರೆಗೆ ಕ್ಯಾವರ್ನ್ ಆಕ್ಸೆಸ್ಟೆನ್ಸ್ ಟೆಸ್ಟ್-ಕ್ಯಾಟ್ ಕೈಗೊಳ್ಳಲಾಗಿರುವುದಾಗಿ ಈ ಕಾಮಗಾರಿ ಕೈಗೊಂಡ ಮೇಘಾ ಇಂಜಿನಿಯರಿಂಗ್‌ನ ತಜ್ಞರು ಹೇಳಿದ್ದಾರೆ. ಕೇಂದ್ರ ಸರ್ಕಾರವು ಮಂಗಳೂರಿನಲ್ಲಿ ಇದನ್ನು ಸ್ಥಾಪಿಸಿದ್ದು, ವಿಶಾಖಪಟ್ಟಣಂನಲ್ಲಿ ಕೂಡಾ ಇದೇ ರೀತಿಯ ಭೂಗತ ಸಂಗ್ರಹಣಾಗಾರವಿದೆ. ಯಾವುದೇ ತುರ್ತು ಸನ್ನಿವೇಶಗಳಲ್ಲಿ ದೇಶಕ್ಕೆ ಬೇಕಾದ ಅನಿಲ ಬೇಡಿಕೆಯನ್ನು ಪೂರೈಸಲು ಸಹಾಯ ಮಾಡುತ್ತದೆ.
ಮಂಗಳೂರು ಪ್ರದೇಶದಲ್ಲಿ ಇದು ಮೂರನೇ ಭೂಗತ ತೈಲ ಸಂಗ್ರಹಣಾ ಘಟಕವಾಗಿದೆ. ಈ ಹಿಂದೆ ಪೆರ್ಮುದೆಯಲ್ಲಿ ೧.೫ ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಮತ್ತು ಪಾದೂರಿನಲ್ಲಿ ೨.೫ ಲಕ್ಷ ಮೆಟ್ರಿಕ್ ಟನ್ ಕಚ್ಚಾ ತೈಲ ಸಂಗ್ರಹ ಸಾಮರ್ಥ್ಯದ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಈ ಹೊಸ ಘಟಕವನ್ನು ನಿರ್ದಿಷ್ಟವಾಗಿ ಎಲ್‌ಪಿಜಿ ಸಂಗ್ರಹಣೆಗಾಗಿ ನಿರ್ಮಿಸಲಾಗಿದೆ. ವಿಶಾಖಪಟ್ಟಣಂನ ಎಲ್‌ಪಿಜಿ ಸಂಗ್ರಹಣಾ ಘಟಕವು ೬೦,೦೦೦ ಟನ್ ಸಾಮರ್ಥ್ಯ ಹೊಂದಿದ್ದರೆ, ಮಂಗಳೂರಿನ ಈ ಘಟಕವು ೮೦,೦೦೦ ಮೆಟ್ರಿಕ್ ಟನ್ ಸಾಮರ್ಥ್ಯದೊಂದಿಗೆ ಭಾರತದಲ್ಲೇ ಅತಿ ದೊಡ್ಡದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೇಂದ್ರ ಸರ್ಕಾರವು ೨೦೧೮ರಲ್ಲಿ ಈ ಯೋಜನೆಗೆ ಅನುಮೋದನೆ ನೀಡಿದ್ದು, ೨೦೧೯ರಲ್ಲಿ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. ಇನ್ನು ಮುಂದೆ, ಸಮುದ್ರದಲ್ಲಿರುವ ತೇಲುವ ಜೆಟ್ಟಿ ಮೂಲಕ ಎಲ್‌ಪಿಜಿಯನ್ನು ಈ ಘಟಕಕ್ಕೆ ಪಂಪ್ ಮಾಡಲಾಗುತ್ತದೆ. ಇದಕ್ಕಾಗಿ ಅಗತ್ಯವಿರುವ ಪೈಪ್‌ಲೈನ್ ನಿರ್ಮಾಣ ಕಾರ್ಯವೂ ಪೂರ್ಣಗೊಂಡಿದೆ. ಘಟಕವನ್ನು ೫೦೦ ಮೀಟರ್ ಆಳದಲ್ಲಿ, ದೊಡ್ಡ ಕಲ್ಲನ್ನು ಕೊರೆದು ಸುರಂಗವನ್ನು ನಿರ್ಮಿಸಲಾಗಿದೆ. ಈ ಯೋಜನೆಗೆ ೮೦೦ ಕೋಟಿ ರೂ. ವೆಚ್ಚ ತಗುಲಿದೆ.