Home ತಾಜಾ ಸುದ್ದಿ ಭಾರತದಲ್ಲಿ ಶೇಖ್ ಹಸೀನಾ ಹೇಳಿಕೆಗೆ ಬಾಂಗ್ಲಾ ಆಕ್ಷೇಪ

ಭಾರತದಲ್ಲಿ ಶೇಖ್ ಹಸೀನಾ ಹೇಳಿಕೆಗೆ ಬಾಂಗ್ಲಾ ಆಕ್ಷೇಪ

0

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಭಾರತದಲ್ಲಿ ರಾಜಕೀಯ ಹೇಳಿಕೆಗಳನ್ನು ನೀಡುವುದು ಸ್ನೇಹಪರವಲ್ಲದ ನಡವಳಿಕೆ ಎಂದು ಮಧ್ಯಂತರ ಸರ್ಕಾರದ ಪ್ರಧಾನ ಸಲಹೆಗಾರ ಮೊಹಮ್ಮದ್ ಯೂನುಸ್ ದೂಷಿಸಿದ್ದಾರೆ.
ಬಾಂಗ್ಲಾದೇಶವು ಹಸೀನಾ ಅವರನ್ನು ಹಸ್ತಾಂತರಿಸುವಂತೆ ಭಾರತಕ್ಕೆ ಕೋರಿಕೆ ಸಲ್ಲಿಸುವವರೆಗೆ ಉಭಯದೇಶಗಳ ಮಧ್ಯೆ ಅನನುಕೂಲಕರ ಪರಿಸ್ಥಿತಿ ಉದ್ಭವಿಸುವುದನ್ನು ತಡೆಯಲು ಆಕೆ ಮೌನವಾಗಿರಬೇಕೆಂದೂ ತಾಕೀತು ಮಾಡಿದ್ದಾರೆ. ಬಾಂಗ್ಲಾದೇಶವು ಹಸೀನಾ ಹಸ್ತಾಂತರಕ್ಕೆ
ಕೋರಿಕೆ ಸಲ್ಲಿಸುವವರೆಗೆ ಭಾರತವು ಆಕೆಯನ್ನು ತನ್ನ ವಶದಲ್ಲಿಟ್ಟುಕೊಳ್ಳಬಹುದು. ಆದರೆ ಭಾರತದಲ್ಲಿ ಆಕೆ ಮೌನವಾಗಿರಬೇಕು ಎಂದವರು ನೇರವಾಗಿ ಹೇಳಿದ್ದಾರೆ.
ಬಾಂಗ್ಲಾದೇಶವು ಭಾರತದ ಜೊತೆಗಿನ ಪ್ರಬಲವಾದ ಬಾಂಧವ್ಯವನ್ನು ಗೌರವಿಸುತ್ತದೆ. ಆದರೆ ಹಸೀನಾ ಇಲ್ಲದ ಬಾಂಗ್ಲಾದೇಶವು ಅಪಘಾನಿಸ್ತಾನವಾಗುತ್ತದೆ ಎಂದು ಬಿಂಬಿಸುವುದನ್ನು ನಿಲ್ಲಿಸಬೇಕು. ಭಾರತದಲ್ಲಿ ಹಸೀನಾ ತಳೆದಿರುವ ನಿಲುವಿನಿಂದಾಗಿ ಯಾರೂ ಆರಾಮದಾಯಕವಾಗಿಲ್ಲ. ಆಕೆಯನ್ನು ಬಾಂಗ್ಲಾಕ್ಕೆ ಹಸ್ತಾಂತರಿಸಬೇಕೆಂದು ನಾವು ಅಪೇಕ್ಷಿಸುತ್ತಿದ್ದೇವೆ. ಆಕೆ ಭಾರತದಲ್ಲಿದ್ದು ಬಾಂಗ್ಲಾ ವಿಷಯದಲ್ಲಿ ಮಾತನಾಡುತ್ತಿರುವುದು ನಮಗೆ ಸಮಸ್ಯೆ ತಂದೊಡ್ಡಿದೆ.
ಆಕೆ ಸುಮ್ಮನಿರುತ್ತಿದ್ದರೆ ನಾವು ಆಕೆಯನ್ನು ಮರೆತುಬಿಡುತ್ತಿದ್ದೆವು. ಆಕೆ ತನ್ನದೇ ಪ್ರಪಂಚದಲ್ಲಿದ್ದಾರೆಂದು ಜನರೂ ಅಂದುಕೊಳ್ಳುತ್ತಿದ್ದರು. ಆದರೆ ಆಕೆ ಭಾರತದಲ್ಲಿ ಮಾತನಾಡುತ್ತಿರುವುದು ಯಾರಿಗೂ ಇಷ್ಟವಾಗುವುದಿಲ್ಲ ಎಂದರು.
ಇತ್ತೀಚಿನ ಭಯೋತ್ಪಾದನಾ ಕೃತ್ಯಗಳು, ಹತ್ಯೆಗಳು ಹಾಗೂ ದಾಂಧಲೆ ಕುರಿತು ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷೆ ನೀಡಬೇಕೆಂದು ಹಸೀನಾ ಸೆ.೧೩ರಂದು ಹೇಳಿಕೆ ನೀಡಿರುವುದರಿಂದ ಯೂನುಸ್ ವ್ಯಗ್ರರಾಗಿದ್ದಾರೆ.

Exit mobile version