೧೩ ಕೋಟಿ ರೂ. ಮೌಲ್ಯದ ೧೭.೫ ಕೆಜಿ ಚಿನ್ನ ವಶ: ಪೊಲೀಸರ ಕಾರ್ಯ ಶ್ಲಾಘಿಸಿ ಗೃಹ ಸಚಿವ ಡಾ.ಜಿ.ಪರಮೇಶ್ವರ ೧೦ ಜನರಿಗೆ ಮುಖ್ಯಮಂತ್ರಿಗಳ ಪದಕ ಘೋಷಣೆ
ದಾವಣಗೆರೆ: ಜಿಲ್ಲೆಯ ನ್ಯಾಮತಿ ಪಟ್ಟಣದ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣವನ್ನು ಬೇಧಿಸಿ ೧೩ ಕೋಟಿ ರೂ. ಮೌಲ್ಯದ ೧೭.೫ ಕೆ.ಜಿ. ಚಿನ್ನಾಭರಣ ವಶಕ್ಕೆ ಪಡೆದು ಆರು ಜನ ಆರೋಪಿಗಳನ್ನು ಬಂಧಿಸುವಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ ಎಂದು ಪೂರ್ವ ವಲಯ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲತಃ ತಮಿಳುನಾಡು ಮಧುರೈನ ವಿಜಯಕುಮಾರ್(೩೦), ಅಜಯ್‌ಕುಮಾರ್(೨೮) ಇಬ್ಬರು ಸಹೋದರರಾಗಿದ್ದು, ನ್ಯಾಮತಿ ತಾಲೂಕಿನ ಸುರಹೊನ್ನೆಯಲ್ಲಿ ಸಿಹಿ ತಿಂಡಿ ವ್ಯಾಪಾರ ಮಾಡುತ್ತಿದ್ದರು. ಪರಮಾನಂದ (೩೦) ಇವರಿಬ್ಬರ ತಂಗಿಯ ಗಂಡ, ಸುರಹೊನ್ನೆಯ ಅಭಿಷೇಕ (೨೩), ಚಂದ್ರು (೨೩), ಮಂಜುನಾಥ್ (೩೨) ಬಂಧನಕ್ಕೆ ಒಳಗಾದ ಪ್ರಮುಖ ಆರೋಪಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಕರಣ ಬೇಧಿಸಲು ಐದು ತಂಡ ರಚನೆ:
ಈ ಪ್ರಕರಣ ಬೇಧಿಸಲು ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಚನ್ನಗಿರಿ ಉಪವಿಭಾಗದ ಎಎಸ್ಪಿ ಶ್ಯಾಮ್ ವರ್ಗೀಸ್ ಅವರನ್ನು ಪ್ರಕರಣದ ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ತನಿಖೆಯಲ್ಲಿ ಸಹಕರಿಸಲು ದಾವಣಗೆರೆ ಗ್ರಾಮಾಂತರ ಉಪವಿಭಾಗದ ಡಿವೈಎಸ್ಪಿ ಬಿ.ಎಸ್.ಬಸವರಾಜ್ ಅವರನ್ನೊಳಗೊಂಡ ಐದು ತಂಡ ರಚಿಸಲಾಗಿತ್ತು.
ಮೊದಲ ದಿನದಿಂದ ಪ್ರತಿ ತಂಡಕ್ಕೂ ಪ್ರತ್ಯೇಕ ಕೆಲಸ ವಹಿಸಲಾಗಿತ್ತು. ಆರಂಭದಲ್ಲಿ ಎಲ್ಲಾ ರೀತಿಯ ತಾಂತ್ರಿಕ ಮತ್ತು ಭೌತಿಕ ಸಾಕ್ಷಾö್ಯಧಾರ ಪರಿಶೀಲಿಸಿದರೂ ಯಾವುದೇ ಉಪಯುಕ್ತ ಮಾಹಿತಿ ಲಭ್ಯವಾಗಲಿಲ್ಲ. ಈ ಹಿಂದೆ ಬ್ಯಾಂಕ್ ದರೋಡೆ, ಎಟಿಎಂ ಕಳ್ಳತನ ಪ್ರಕರಣಗಳ ವಿವರ, ಹಳೆಯ ಆರೋಪಿಗಳ ವಿವರ, ಅಂತರ್ ರಾಜ್ಯ ಗ್ಯಾಂಗ್ ವಿವರ ಪಡೆದು ಈ ಪ್ರಕರಣದೊಂದಿಗೆ ತಾಳೆ ಹಾಕಿ ಪೊಲೀಸ್ ಅಧಿಕಾರಿಗಳ ತಂಡ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.
ತಾಂತ್ರಿಕ ಮೂಲಗಳಿಂದ ದೊರೆತ ಸುಳಿವಿನಿಂದ ಹಾಗೂ ಹಿಂದೆ ನಡೆದ ಬ್ಯಾಂಕ್ ದರೋಡೆ ಪ್ರಕರಣಗಳ ತಾಳೆಯಿಂದ ಎಸ್‌ಬಿಐ ಬ್ಯಾಂಕ್ ಪ್ರಕರಣದ ಯುಪಿನ ಬದಾಯ ಜಿಲ್ಲೆಯ ಕಕ್ರಾಳ ಗ್ಯಾಂಗ್ ಇರಬಹುದು ಎಂದು ಶಂಕಿಸಿ ತಂಡಗಳು ಯುಪಿಯ ಕಕ್ರಾಳಕ್ಕೆ ಹೋಗಿ ೧೫ಕ್ಕೂ ಹೆಚ್ಚು ಅಂತರ್ ರಾಜ್ಯ ಸಂಶಯಾತ್ಮಕ ವ್ಯಕ್ತಿಗಳನ್ನು ವಶಕ್ಕೆ ಪಡೆದು ಸಂಪೂರ್ಣ ವಿವರ ಪಡೆದಿದ್ದರು.
ನ್ಯಾಮತಿ ಪ್ರಕರಣಕ್ಕಿಂತ ಹಿಂದೆ ೨೦೨೪ರಲ್ಲಿ ನಡೆದ ವಿವಿಧ ರಾಜ್ಯಗಳಲ್ಲಿ ಬ್ಯಾಂಕ್ ಕಳ್ಳತನ, ದರೋಡೆ ಮತ್ತು ದರೋಡೆಗೆ ಪ್ರಯತ್ನ ಪ್ರಕರಣ ಪರಿಶೀಲಿಸಲಾಯಿತು. ಅಲ್ಲದೇ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಠಾಣೆ ವ್ಯಾಪ್ತಿಯ ಎಸ್‌ಬಿಐ ಬ್ಯಾಂಕ್ ಕಳ್ಳತನದ ಪ್ರಯತ್ನ ಪ್ರಕರಣ ಪರಿಶೀಲಿಸಿದಾಗ ನ್ಯಾಮತಿಗೆ ೩೦ ಕಿ.ಮೀ. ಹತ್ತಿರವಿರುವುದು ಮತ್ತು ಬ್ಯಾಂಕ್ ಪ್ರಕರಣಕ್ಕೆ ಸಾಮ್ಯತೆ ಇತ್ತು. ಹೀಗಾಗಿ ಮತ್ತೆ ಯುಪಿಯ ಕಕ್ರಾಳ ಗ್ಯಾಂಗ್ ಕಡೆಗೆ ಹೋಯಿತು. ಹೀಗೆ ಆರು ತಿಂಗಳ ಕಾಲ ಪರಿಶೀಲಿಸಿದಾಗ, ಸ್ಥಳೀಯರಿಂದಲೇ ಈ ಕೃತ್ಯ ನಡೆದಿದೆ ಅಂಶ ಕೊನೆಗೆ ಸಿಕ್ಕಿತು ಎಂದು ಪ್ರಕರಣದ ಇಡೀ ತನಿಖೆಯ ವಿವರವನ್ನು ಐಜಿಪಿ ರವಿಕಾಂತೇಗೌಡ ಬಿಚ್ಚಿಟ್ಟರು.
ದೊಡ್ಡ ಸಾವಾಲಾಗಿತ್ತು ಈ ಪ್ರರಕಣ: ಈ ಪ್ರಕರಣ ಬೇಧಿಸಲು ಪೊಲೀಸ್ ಇಲಾಖೆಗೆ ದೊಡ್ಡ ಸಾವಾಲಾಗಿತ್ತು. ಏಕೆಂದರೆ ಒಂದೇ ಒಂದು ಸುಳಿವು ಸಿಗದಂತೆ ಬಹಳ ಚಾಣಾಕ್ಷತನದಿಂದ ಈ ಆರೋಪಿಗಳು ಬ್ಯಾಂಕ್ ದರೋಡೆ ಮಾಡಿದ್ದಾರೆ. ಮಾತ್ರವಲ್ಲ, ಪರಿಣಿತಿ ಹೊಂದಿದ ಕಳ್ಳರು ಕೂಡ ಒಂದು ಸಾಕ್ಷö್ಯ ಬಿಟ್ಟು ಹೋಗಿರುತ್ತಾರೆ. ಆದರೆ ಈ ಕಳ್ಳರು ಒಂದು ಸುಳಿವು ಸಿಗದಂತೆ ಬ್ಯಾಂಕ್ ದರೋಡೆ ಮಾಡಿದ್ದು, ಇಲಾಖೆಗೆ ಇದೊಂದು ವಿಶೇಷ ಪ್ರಕರಣವಾಗಿತ್ತು. ಈ ಪ್ರಕರಣ ಬೇಧಿಸಿದ ಇಡೀ ತಂಡಕ್ಕೆ ಇದೇ ಸಂದರ್ಭದಲ್ಲಿ ಐಜಿಪಿ ರವಿಕಾಂತೇಗೌಡ ಅಭಿನಂದನೆ ಸಲ್ಲಿಸಿದರು. ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿಗಳಾದ ವಿಜಯಕುಮಾರ್ ಸಂತೋಷ್, ಬಿ.ಮಂಜುನಾಥ್, ತನಿಖಾಧಿಕಾರಿಗಳಾದ ಶ್ಯಾಮ್ ವರ್ಗೀಸ್, ಬಿ.ಎಸ್.ಬಸವರಾಜ್ ಸೇರಿದಂತೆ ಐದು ತಂಡ ಅಧಿಕಾರಿಗಳು, ಸಿಬ್ಬಂದಿಗಳು ಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಕಾರ್ಯಾಚರಣೆ ನಡೆಸಿದ ತಂಡ: ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿಗಳಾದ ವಿಜಯಕುಮಾರ್ ಸಂತೋಷ್, ಎಂ.ಮಂಜುನಾಥ್ ಮಾರ್ಗದರ್ಶನದಲ್ಲಿ ಎಎಸ್ಪಿ ಶ್ಯಾಮ್ ವರ್ಗೀಸ್, ಡಿವೈಎಸ್ಪಿ ಬಿ.ಎಸ್.ಮಂಜುನಾಥ್, ಎನ್.ಎಸ್.ರವಿ, ಸುನೀಲ್ ಹುಲ್ಮನಿ, ಲಿಂಗನಗೌಡ, ದೇವಾನಂದ್, ಸುರೇಶ್ ಸಗರಿ, ಮಂಜುನಾಥ ಕುಪ್ಪೆಲೂರು, ಸಂಜೀವ್‌ಕುಮಾರ್, ಸಾಗರ್ ಅತ್ತಾರ್ ವಾಲ್, ರವಿನಾಯ್ಕ್, ಹರೋನ್ ಅಕ್ತರ್, ಮಹದೇವ ಭತ್ತೆ, ಶ್ರೀಪತಿ ಗಿನ್ನಿ, ಗಾಧಿಲಿಂಗಪ್ಪ, ಜಗದೀಶ್, ಅಬ್ದುಲ್ ಖಾದರ್ ಜಿಲಾನಿ, ಜೋವಿತ್ ರಾಜ್, ಜಯ್ಯಪ್ಪ ನಾಯ್ಕ್, ಮಜೀದ್, ರಾಘವೇಂದ್ರ, ಆಂಜನೇಯ, ಬಾಲಾಜಿ, ರಮೇಶ್ ನಾಯ್ಕ್, ಶಿವರಾಜ್, ಮಲ್ಲಿಕಾರ್ಜುನ್, ಶಿವರಾಜ್, ಆನಂದ, ಮಾರುತಿ, ಸತೀಶ್, ಮಹೇಶ್ ನಾಯ್ಕ್, ವೀರಭದ್ರಪ್ಪ, ರುದ್ರೇಶ್, ಇಬ್ರಾಹಿಂ, ಅಣ್ಣಪ್ಪ, ಯುಸಫ್, ರವಿ, ಸಿದ್ದೇಶ್, ಯೋಗೀಶ್, ಗಿರೀಶ್, ಶಾಂತರಾಜ್, ರಾಮಚಂದ್ರ ಬಿ.ಜಾಧವ್, ಕೆ.ಕೆ.ರಾಘವೇಂದ್ರ, ಎಚ್.ವಿ.ಅರುಣ್‌ಕುಮಾರ್, ಎಂ.ಎಚ್.ಪ್ರಶಾಂತ್‌ಕುಮಾರ್, ಪಾಲಾನಾಯ್ಕ್, ಮಲ್ಲೇಶ್, ದೇವರಾಜ್, ರಾಘು, ಚನ್ನೇಶ್, ಅಸ್ಗರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
10 ಜನ ಅಧಿಕಾರಿ, ಸಿಬ್ಬಂದಿಗಳಿಗೆ ಸಿಎಂ ಚಿನ್ನದ ಪದಕ: ಈ ಪ್ರಕರಣ ಬೇಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯ ಶ್ಲಾಘಿಸಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು 10 ಜನ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಪದಕ ಘೋಷಣೆ ಮಾಡಿದ್ದಾರೆ. ಅಲ್ಲದೇ ಡಿಜಿ ಮತ್ತು ಐಜಿಪಿ ತಂಡಕ್ಕೆ ನಗದು ಬಹುಮಾನ ಘೋಷಣೆ ಮಾಡಲಾಗಿದೆ ಎಂದು ಪೂರ್ವ ವಲಯ ಐಜಿಪಿ ರವಿಕಾಂತೇಗೌಡ ತಿಳಿಸಿದ್ದಾರೆ.