ಕರ್ನಾಟಕದ ರಾಜಕೀಯದಲ್ಲಿ ಟಿಪ್ಪು ಸುಲ್ತಾನ್ ಹೆಸರು ಕೇಳಿಬಂದಾಗಲೆಲ್ಲಾ ವಿವಾದದ ಕಿಡಿ ಹೊತ್ತಿಕೊಳ್ಳುವುದು ಸಾಮಾನ್ಯ. ಆದರೆ ಈ ಬಾರಿ ರಾಮನಗರದಲ್ಲಿ ಎಸ್‌ಡಿಪಿಐ (SDPI) ಮುಖಂಡರೊಬ್ಬರು ಆಡಿದ ಮಾತುಗಳು ವಿವಾದದ ಸ್ವರೂಪವನ್ನು ಮತ್ತಷ್ಟು ತೀವ್ರಗೊಳಿಸಿವೆ.
ಕನ್ನಡ ರಾಜ್ಯೋತ್ಸವದ ವೇದಿಕೆಯಲ್ಲಿ ನಿಂತು ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಸ್‌ಡಿಪಿಐ ನಾಯಕ ಮೌಲಾನಾ ನೂರುದ್ದೀನ್ ಅವಾಚ್ಯ ಶಬ್ದಗಳಿಂದ ವಾಗ್ದಾಳಿ ನಡೆಸಿದ್ದು, ಇದಕ್ಕೆ ಯತ್ನಾಳ್ ತಮ್ಮದೇ ಶೈಲಿಯಲ್ಲಿ ಖಡಕ್ ಉತ್ತರ ನೀಡಿದ್ದಾರೆ.
ವಿವಾದದ ಕಿಡಿಯಾದ ಮೌಲಾನಾ ಹೇಳಿಕೆ: ರಾಮನಗರದ ರೈಲ್ವೆ ಸ್ಟೇಷನ್ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೌಲಾನಾ ನೂರುದ್ದೀನ್, ಶಾಸಕ ಯತ್ನಾಳ್ ಅವರನ್ನು ನೇರವಾಗಿ “ಭಯೋತ್ಪಾದಕ” ಎಂದು ಕರೆದಿದ್ದಾರೆ.
ಅಷ್ಟಕ್ಕೇ ನಿಲ್ಲದೆ, ಟಿಪ್ಪು ಸುಲ್ತಾನ್ ಪರಾಕ್ರಮವನ್ನು ಹೊಗಳುವ ಭರಾಟೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. “ಒಂದು ವೇಳೆ ಟಿಪ್ಪು ಸುಲ್ತಾನ್ ಇಲ್ಲದಿದ್ದರೆ, ಪ್ರತಾಪ್ ಸಿಂಹ ಬ್ರಿಟಿಷರ ನಾಯಿಗಳನ್ನು ತೊಳೆಯುವ ಕೆಲಸ ಮಾಡಬೇಕಿತ್ತು,” ಎಂಬ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಹಿಂದೂ ಕಾರ್ಯಕರ್ತರು ಮತ್ತು ಬಿಜೆಪಿ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಯತ್ನಾಳ್ ಕೊಟ್ಟ ಖಡಕ್ ಕೌಂಟರ್: ಮೌಲಾನಾ ಹೇಳಿಕೆ ಕಿವಿಗೆ ಬೀಳುತ್ತಿದ್ದಂತೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಡಿದೆದ್ದಿದ್ದಾರೆ. “ಯಾರ್ಯಾರೋ ಬಂದು ಬಾಯಿಗೆ ಬಂದಂತೆ ಮಾತನಾಡಿದರೆ ಕೇಳಿಸಿಕೊಳ್ಳಲು ನಾವೇನು ಬಳೆ ತೊಟ್ಟು ಕುಳಿತಿಲ್ಲ. ಟಿಪ್ಪು ಸುಲ್ತಾನನನ್ನು ಆರಾಧಿಸುವವರು ಮತ್ತು ಆತನ ಪರ ಇರುವವರು ದೇಶದ್ರೋಹಿಗಳು,” ಎಂದು ನೇರವಾಗಿಯೇ ಗುಡುಗಿದ್ದಾರೆ.
ಟಿಪ್ಪುವಿನ ಇತಿಹಾಸವನ್ನು ಕೆದಕಿದ ಯತ್ನಾಳ್, ಟಿಪ್ಪು ಒಬ್ಬ ಮತಾಂಧ. ಆತನ ಕಾಲದಲ್ಲಿ ಲಕ್ಷಾಂತರ ಹಿಂದೂಗಳ ಕಗ್ಗೊಲೆ ನಡೆದಿದೆ. ಕರ್ನಾಟಕ ಮತ್ತು ಕೇರಳ ಭಾಗದಲ್ಲಿ ಸುಮಾರು 3,500ಕ್ಕೂ ಹೆಚ್ಚು ದೇವಸ್ಥಾನಗಳನ್ನು ಆತ ಧ್ವಂಸ ಮಾಡಿದ್ದಕ್ಕೆ ಇತಿಹಾಸದಲ್ಲಿ ಸಾಕ್ಷಿಗಳಿವೆ.
ಕೊಡಗಿನಲ್ಲಿ ಲಕ್ಷಾಂತರ ಕೊಡವರ ನರಮೇಧ ನಡೆಸಿದ ಕ್ರೂರಿ ಆತ. ಇಸ್ಲಾಮೀಕರಣ ಮಾಡುವುದೇ ಆತನ ಗುರಿಯಾಗಿತ್ತು. ಇಂತಹ ಹಿನ್ನೆಲೆ ಇರುವ ವ್ಯಕ್ತಿ ನಮಗೆಂದೂ ಆದರ್ಶವಾಗಲು ಸಾಧ್ಯವಿಲ್ಲ. ಆತನಿಂದ ನಾವು ಕಲಿಯಬೇಕಾದದ್ದು ಏನೂ ಇಲ್ಲ, ಎಂದು ಇತಿಹಾಸದ ಪುಟಗಳನ್ನು ಉಲ್ಲೇಖಿಸಿ ತಿರುಗೇಟು ನೀಡಿದರು.
ದೆಹಲಿ ಸ್ಫೋಟ ಮತ್ತು ಅಂಬೇಡ್ಕರ್ ಉಲ್ಲೇಖ: ಇದೇ ಸಂದರ್ಭದಲ್ಲಿ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟದ ವಿಚಾರವನ್ನು ಪ್ರಸ್ತಾಪಿಸಿದ ಯತ್ನಾಳ್, ಅಲ್ಪಸಂಖ್ಯಾತ ನಾಯಕರ ಮೌನವನ್ನು ಪ್ರಶ್ನಿಸಿದ್ದಾರೆ. “ದೆಹಲಿಯಲ್ಲಿ ಸ್ಫೋಟ ನಡೆದಾಗ ಯಾವೊಬ್ಬ ಮುಸ್ಲಿಂ ಧರ್ಮಗುರುವಾಗಲಿ, ಮುಖಂಡರಾಗಲಿ ಅದನ್ನು ಖಂಡಿಸುವುದಿಲ್ಲ.
ಆದರೆ ಇಲ್ಲಿ ಮಾತ್ರ ಶಾಂತಿ ಸಭೆಗಳ ಹೆಸರಿನಲ್ಲಿ ‘ಹಿಂದೂ-ಮುಸ್ಲಿಂ ಭಾಯಿ ಭಾಯಿ’ ಎಂಬ ನಾಟಕವಾಡುತ್ತಾರೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅಂದೇ ಹೇಳಿದ್ದರು, ‘ಮುಸ್ಲಿಮರ ನಿಷ್ಠೆ ಎಂದಿಗೂ ದೇಶಕ್ಕಲ್ಲ, ಬದಲಾಗಿ ಅವರ ಧರ್ಮಕ್ಕೆ ಮಾತ್ರ ಸೀಮಿತವಾಗಿರುತ್ತದೆ’ ಎಂದು. ಇಂದಿನ ಘಟನೆಗಳು ಅದನ್ನೇ ಸಾಬೀತುಪಡಿಸುತ್ತಿವೆ,” ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದರು.
