ಬೆಂಗಳೂರು: “ನಾವು ಕಾನೂನುಬದ್ಧವಾಗಿ ಮದುವೆಯಾಗಿಲ್ಲ, ಕೇವಲ ಲಿವ್-ಇನ್ ನಲ್ಲಿದ್ದೆವು” ಎಂದು ಹೇಳಿ ಸಂಗಾತಿಯ ಮೇಲಿನ ದೌರ್ಜನ್ಯ ಪ್ರಕರಣದಿಂದ ನುಣುಚಿಕೊಳ್ಳುತ್ತಿದ್ದವರಿಗೆ ಕರ್ನಾಟಕ ಹೈಕೋರ್ಟ್ ಬಿಸಿ ಮುಟ್ಟಿಸಿದೆ.
ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್ 498ಎ ಅಡಿ ಬರುವ ‘ಗಂಡ’ ಎಂಬ ಪದದ ವ್ಯಾಪ್ತಿಯನ್ನು ನ್ಯಾಯಾಲಯ ವಿಸ್ತರಿಸಿದ್ದು, ಇದು ಲಿವ್-ಇನ್ (Live-in) ಸಂಬಂಧಗಳಿಗೂ ಅನ್ವಯವಾಗುತ್ತದೆ ಎಂದು ಮಹತ್ವದ ಆದೇಶ ನೀಡಿದೆ.
ಏನಿದು ಪ್ರಕರಣ?: ಶಿವಮೊಗ್ಗ ಮೂಲದ ವ್ಯಕ್ತಿಯೊಬ್ಬರು ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆರೋಪಿಯು ತನಗೆ ಈಗಾಗಲೇ ಮದುವೆಯಾಗಿ ಮಗುವಿದೆ ಎಂಬ ಸತ್ಯವನ್ನು ಮುಚ್ಚಿಟ್ಟು, ದೂರುದಾರ ಮಹಿಳೆಯ ಜೊತೆ ಮದುವೆಯಾಗಿದ್ದನು. ಅಲ್ಲದೆ ಆಕೆಯ ಮನೆಯಿಂದ ನಗದು, ಚಿನ್ನಾಭರಣ ಪಡೆದು, ನಂತರ ಆಕೆಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದನು.
ಆತನ ವಿರುದ್ಧ 498ಎ ಅಡಿ ಕೇಸ್ ದಾಖಲಾದಾಗ, “ನಾನು ಮೊದಲೇ ವಿವಾಹಿತನಾಗಿರುವುದರಿಂದ, ಎರಡನೇ ಮಹಿಳೆಯ ಜೊತೆಗಿನ ಸಂಬಂಧ ಕಾನೂನುಬದ್ಧ ಮದುವೆಯಲ್ಲ. ಹೀಗಾಗಿ ನಾನು ಆಕೆಯ ‘ಗಂಡ’ ಎಂಬ ವ್ಯಾಖ್ಯಾನಕ್ಕೆ ಬರುವುದಿಲ್ಲ. ನನ್ನ ಮೇಲೆ ಈ ಸೆಕ್ಷನ್ ಹಾಕುವಂತಿಲ್ಲ” ಎಂದು ವಿಚಿತ್ರ ವಾದ ಮಂಡಿಸಿದ್ದನು.
ನ್ಯಾಯಾಲಯದ ಖಡಕ್ ತೀರ್ಪು: ಅರ್ಜಿದಾರನ ಈ ವಾದವನ್ನು ತಳ್ಳಿಹಾಕಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ, ಅರ್ಜಿಯನ್ನು ವಜಾಗೊಳಿಸಿದೆ. ಪುರುಷನೊಬ್ಬ ಮಹಿಳೆಯೊಂದಿಗೆ ಮದುವೆಯ ಸ್ವರೂಪದ ಸಂಬಂಧವನ್ನು ಹೊಂದಿ, ಒಂದೇ ಸೂರಿನಡಿ ವಾಸಿಸಿ, ಆಕೆಯಿಂದ ಆರ್ಥಿಕ ಲಾಭಗಳನ್ನು ಪಡೆದ ನಂತರ, ದೌರ್ಜನ್ಯದ ಆರೋಪ ಬಂದಾಗ “ನಮ್ಮದು ಕಾನೂನುಬದ್ಧ ಮದುವೆಯಲ್ಲ” ಎಂಬ ತಾಂತ್ರಿಕ ಕಾರಣ ನೀಡಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
