ಗೋವಾ ಮಾಜಿ ಶಾಸಕರ ಕೊಲೆ ಪ್ರಕರಣ: 200 ಪುಟಗಳ ಚಾರ್ಜ್‌ಶೀಟ್

ಬೆಳಗಾವಿ: ಗೋವಾ ಮಾಜಿ ಶಾಸಕ ಲವೂ ಮಾಮ್ಲೆದಾರ ಕೊಲೆ ಪ್ರಕರಣದಲ್ಲಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ೨೦೦ ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ.
ಫೆ. 15ರಂದು ಕ್ಷುಲ್ಲಕ ಕಾರಣಕ್ಕೆ ಉಂಟಾದ ಘರ್ಷಣೆ ಹಾಗೂ ಆಟೋ ಚಾಲಕನಿಂದ ನಡೆದ ಹಲ್ಲೆಯಿಂದಾಗಿ ಉಂಟಾದ ಮಾನಸಿಕ ಒತ್ತಡದಿಂದ ಹೃದಯಾಘಾತಕ್ಕೊಳಗಾಗಿ ಲವೂ ಮಾಮ್ಲೆದಾರ ಸಾವನ್ನಪ್ಪಿರುವುದಾಗಿ ಮರಣೋತ್ತರ ಪರೀಕ್ಷೆಯಲ್ಲಿ ಹೇಳಲಾಗಿದೆ.
ವಾರಾಂತ್ಯದಲ್ಲಿ ಬೆಳಗಾವಿಗೆ ಶಾಪಿಂಗ್ ಮತ್ತು ರಿಲ್ಯಾಕ್ಸ್‌ಗಾಗಿ ಮಾಜಿ ಶಾಸಕರು ಬರುತ್ತಿದ್ದರು. ಬಂದಾಗಲೆಲ್ಲಾ ನಗರದ ಖಡೇಬಜಾರ್‌ನಲ್ಲಿರುವ ಶ್ರೀನಿವಾಸ ಲಾಡ್ಜ್‌ನಲ್ಲಿ ತಂಗುತ್ತಿದ್ದರು. ಅದೇ ರೀತಿ ಫೆ. 15ರಂದು ಶಾಪಿಂಗ್‌ ನಡೆಸಿ ವಾಪಸ್ ರೂಮಿಗೆ ಬರುತ್ತಿದ್ದಾಗ ಲವೂ ಅವರ ಕಾರು ಆಟೋವೊಂದಕ್ಕೆ ಟಚ್ ಆಗಿದ್ದ ಬಗ್ಗೆ ಆಟೋ ಚಾಲಕನ ಜತೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ.
ಮಾಜಿ ಶಾಸಕರ ಕಾರು ಬೆನ್ನಟ್ಟಿ ಹೊಟೇಲ್ ಮುಂದೆ ಬಂದ ಆಟೋ ಚಾಲಕ ಅಮೀರ್ ಸುಹೈಲ್ ಶಕೀಲಸಾಬ ಸನದಿ(25) ಎಂಬಾತ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಅಕ್ಕ-ಪಕ್ಕದ ಜನ ಬಂದು ಜಗಳ ಬಿಡಿಸಿದ್ದಾರೆ. ಮಾಜಿ ಶಾಸಕರು ಹೊಟೇಲ್ ಲಾಬಿಗೆ ಬಂದು ಲಿಫ್ಟ್ ಹತ್ತಬೇಕು ಎನ್ನುವಷ್ಟರಲ್ಲಿಯೇ ಅಸ್ವಸ್ಥರಾಗಿ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಆಟೋ ಚಾಲಕನಿಂದ ನಡೆದ ಹಲ್ಲೆಯಿಂದಾಗಿ ಉಂಟಾದ ಮಾನಸಿಕ ಒತ್ತಡದಿಂದ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಆಟೋ ಚಾಲಕನನ್ನು ತಕ್ಷಣವೇ ಪೊಲೀಸರು ಬಂಧಿಸಿದ್ದರು.
ಬೆಳಗಾವಿಯ ಬಿಮ್ಸ್‌ಗೆ ಲವೂ ಮಾಮ್ಲೆದಾರರನ್ನು ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದಾಗಿ ವೈದ್ಯರು ದೃಢಪಡಿಸಿದ್ದರು. ನಂತರ ಮೃತದೇಹವನ್ನು ಮೃತರ ಪುತ್ರಿ ಹಾಗೂ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು.
ಇದೀಗ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 103ಅಡಿಯಲ್ಲಿ ಕೊಲೆ ಆರೋಪದ ಮೂಲಕ ಪ್ರಕರಣ ದಾಖಲಿಸಲಾಗಿದೆ. ಸಾರ್ವಜನಿಕ ಅಭಿಯೋಜಕರು ಇದರ ಪರಿಶೀಲನೆ ನಡೆಸಿ ಕೆಲವು ತಿದ್ದುಪಡಿ ಸೂಚಿಸಿದ್ದಾರೆ. ಮರುಸಂಪಾದಿತ ಆರೋಪಪತ್ರವನ್ನು ಬುಧವಾರ ಮತ್ತೆ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು.
ಈ ಏತನ್ಮಧ್ಯೆ ಆರೋಪಿ ಶಕೀಲಸಾಬ ಸನದಿ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು ಆತನನ್ನು ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿಡಲಾಗಿದೆ.