ನಮ್ಮ ರೈತರಿಗೆ ನಾನು ಆಭಾರಿಯಾಗಿದ್ದೇನೆ

0
9

ಶಿವಮೊಗ್ಗ: ಈ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಮುಖ ಕಾರಣರಾಗಿರುವ ನಮ್ಮ ರೈತರಿಗೆ ನಾನು ಆಭಾರಿಯಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್‌ ಯಡಿಯೂರಪ್ಪ ಹೇಳಿದ್ದಾರೆ, ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟ ಮೊಟ್ಟ ಮೊದಲ ಇಂಡಿಗೊ ವಿಮಾನದಲ್ಲಿ ಪಯಣದ ನಂತರ ಸಾಮಾಜಿಕ ಜಾಲತಣದಲ್ಲಿ ಭಾವನಾತ್ಮಕ ಟ್ವೀಟ್‌ ಮಾಡಿರುವ ಅವರು “ನನ್ನ ಜೀವನದ ಒಂದು ಅವಿಸ್ಮರಣೀಯ, ಸಾರ್ಥಕ ಸಂದರ್ಭ! ಶಿವಮೊಗ್ಗ ಜಿಲ್ಲೆಯ ಜನರ ಬಹುನಿರೀಕ್ಷಿತ ಕನಸು ನನಸಾಗಿದ್ದು, ಶಿವಮೊಗ್ಗ ವಿಮಾನ ನಿಲ್ದಾಣದಿಂದ ಅಧಿಕೃತವಾಗಿ ವಿಮಾನ ಹಾರಾಟ ಇಂದು ಆರಂಭವಾಗಿದೆ. ಇದರಿಂದ ಪ್ರವಾಸೋದ್ಯಮ, ಕೈಗಾರಿಕೋದ್ಯಮ ಸೇರಿದಂತೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಮತ್ತು ಮಲೆನಾಡು ಭಾಗದ ಜನರ ಪ್ರಯಾಣಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ತಮ್ಮ ಭೂಮಿಯನ್ನು ಕೊಟ್ಟು ಈ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಮುಖ ಕಾರಣರಾಗಿರುವ ನಮ್ಮ ರೈತರಿಗೆ ನಾನು ಆಭಾರಿಯಾಗಿದ್ದೇನೆ. ಮೊದಲ ವಿಮಾನದಲ್ಲಿ ಸಚಿವರು, ಜನಪ್ರತಿನಿಧಿಗಳ ಜೊತೆಗೆ ನಮ್ಮ ಜಿಲ್ಲೆಯ ರೈತರೊಂದಿಗೆ ಪ್ರಯಾಣಿಸಿದ್ದು ಸಾರ್ಥಕ ಸಂತಸವನ್ನು ಉಂಟುಮಾಡಿದೆ. 2020ರ ಜೂನ್ 15ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದೆ. ಈ ವರ್ಷದ ಫೆಬ್ರವರಿ 27ರ ನನ್ನ ಜನ್ಮದಿನದಂದೇ ಪ್ರಧಾನಮಂತ್ರಿ ನರೇಂದ್ರ ಮೋದಿರವರು ಸುಸಜ್ಜಿತ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿದ್ದು, ಇಂದು ಅಧಿಕೃತವಾಗಿ ವಿಮಾನಯಾನ ಸೇವೆ ಪ್ರಾರಂಭಗೊಂಡಿದೆ. ಈ ಸಂದರ್ಭದಲ್ಲಿ ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ವಿಮಾನಯಾನದ ಸೇವೆ, ಸೌಲಭ್ಯಗಳ ಸಾಕಾರದ ನಿಟ್ಟಿನಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಜಿಲ್ಲೆಯ ಜನತೆಯ ಪರವಾಗಿ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಜನಪ್ರತಿನಿಧಿಯಾಗಿ ನಾಡಿಗೆ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಪಕ್ಷಕ್ಕೆ ಹಾಗೂ ನಾಡಿನ ಜನತೆಗೆ ನಾನು ಸದಾ ಋಣಿ. ಸರ್ವರಿಗೂ ಸಮಪಾಲು, ಸಮಬಾಳು, ಸಾಮಾಜಿಕ ನ್ಯಾಯ ಸಿಗಬೇಕು ಎಂದರೆ ಅದಕ್ಕೆ ಅಭಿವೃದ್ಧಿಯೊಂದೇ ದಾರಿ. ಈ ನಿಟ್ಟಿನಲ್ಲಿ ನಮ್ಮ ಪ್ರಾಮಾಣಿಕ ಪ್ರಯತ್ನ ಮುಂದುವರಿಯಲಿದೆ ಎಂದಿದ್ದಾರೆ.

Previous articleತಮಿಳುನಾಡಿಗೆ ನೀರು: ಶ್ರೀರಂಗಪಟ್ಟಣದಲ್ಲಿ ಕಾವೇರಿ ನೀರಿನ ಮೇಲೆ ಆಣೆ ಮಾಡಿ ಅರೆಬೆತ್ತಲೆ ಪ್ರತಿಭಟನೆ
Next articleಲಂಚ ಪಡೆಯುತ್ತಿದ್ದ ಸರ್ವೆಯರ್ ಲೋಕಾಯುಕ್ತ ಬಲೆಗೆ