ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪಕ್ಷದ ವರಿಷ್ಠರ ಮಾತು ಧಿಕ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ನಮ್ಮ ಪಕ್ಷದಿಂದ ಹೊರ ಹೋದವರು ಯಾರೂ ಗೆದ್ದಿಲ್ಲ. ಕಾದು ನೀಡಿ ಶೆಟ್ಟರ್ ನೀರಿನಿಂದ ಹೊರ ತೆಗೆದ ಮೀನಿನಂತಾಗುತ್ತಾರೆ ಎಂದು ಬಿಹಾರ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಸುಶೀಲಕುಮಾರ ಮೋದಿ ಹೇಳಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೇ ಕ್ಷೇತ್ರದಲ್ಲಿ ಆರು ಬಾರಿ ಶೆಟ್ಟರ್ ಅವರು ಗೆಲುವು ಸಾಧಿಸಿದ್ದರಿಂದ ಆಡಳಿತ ವಿರೋಧಿ ಅಲೆ ಇರುತ್ತದೆ. ಜಗದೀಶ ಶೆಟ್ಟರ್ ಬಗ್ಗೆಯೂ ಇದೇ ಸ್ಥಿತಿ ಇದೆ. ಅವರು ಸೋಲುವ ಸಾಧ್ಯತೆ ಇದ್ದುದರಿಂದ ಬೇರೆಯವರಿಗೆ ಬಿಟ್ಟುಕೊಡುವಂತೆ ವರಿಷ್ಠರು ಕೇಳಿದ್ದರು. ಆದರೆ, ಅವರು ಪಕ್ಷ ತೊರೆದು ಹೊರ ನಡೆದಿದ್ದಾರೆ ಎಂದರು.
ವರಿಷ್ಠರು ಹೇಳಿದಂತೆ ಶೆಟ್ಟರ್ ಅವರು ಹೊಸಬರಿಗೆ ಅವಕಾಶ ಮಾಡಿಕೊಡಬೇಕಾಗಿತ್ತು. ತಮ್ಮಿಂದಲೇ ಪಕ್ಷ ಎನ್ನುವ ತಪ್ಪು ತಿಳಿವಳಿಕೆ ಇರಬಾರದು. ಪಕ್ಷದಿಂದಲೇ ನಾಯಕರು ಇರುತ್ತಾರೆ. ಹೊರತು, ನಾಯಕರಿಂದ ಪಕ್ಷ ಇರುವುದಿಲ್ಲ ಎಂದು ನುಡಿದರು.