ದಾವಣಗೆರೆ: ವಿಧಾನಸಭಾ ಕ್ಷೇತ್ರ ಚುನಾವಣೆಗೆ ಸ್ಪರ್ಧಿಸಲು ಜಿಲ್ಲೆಯ ಏಳು ಕ್ಷೇತ್ರಗಳಿಂದ ಉಮೇದುವಾರಿಕೆ ಸಲ್ಲಿಸಿದ್ದ ೨೨ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಹಿಂಪಡೆಯುವ ಮೂಲಕ ಕಣದಿಂದ ಹಿಂದೆ ಸರಿದಿದ್ದಾರೆ.
ಒಟ್ಟಾರೆ ೭ ಕ್ಷೇತ್ರಗಳಿಂದ ೧೬೪ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಹಿನ್ನೆಲೆಯಲ್ಲಿ ೭ ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳಿಂದ ಟಿಕೆಟ್ ಸಿಗದ ಕಾರಣ ಅಭ್ಯರ್ಥಿಗಳು ಪಕ್ಷದ ವಿರುದ್ಧ ಬಂಡಾಯವೆದ್ದಿದ್ದ ಮತ್ತು ಪಕ್ಷೇತರರಾಗಿ ಕಣಕ್ಕಿಳಿಯಲು ಇಚ್ಛಿಸಿ ಉಮೇದುವಾರಿಕೆ ಸಲ್ಲಿಸಿದ್ದ ಒಟ್ಟಾರೆ ೨೨ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದು, ಈಗ ೧೪೨ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಜಗಳೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಅಭ್ಯರ್ಥಿ ಎಸ್.ವಿ. ರಾಮಚಂದ್ರ ಪತ್ನಿ ಎಸ್.ಆರ್. ಇಂದಿರಾ ನಾಮಪತ್ರ ಹಿಂಪಡೆದಿದ್ದಾರೆ. ಹರಿಹರ ಕ್ಷೇತ್ರದಿಂದ ಕರಿಬಸಪ್ಪ ವಿ. ಮಠದ, ದಾವಣಗೆರೆ ಉತ್ತರದಿಂದ ಪಕ್ಷೇತರರಾದ ಶ್ರೀಕಾಂತ ಎಂ. ಕಾಕಿ, ಜಿ.ಆರ್. ನಾಗಾರ್ಜುನ, ಕೆ.ಜಿ. ಅಜ್ಜಪ್ಪ, ದಾವಣಗೆರೆ ದಕ್ಷಿಣದಿಂದ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಮಹಮದ್ ರಿಯಾಜ್, ಸುಭಾನ್ ಖಾನ್, ಬೀಡಿ ಎಂ. ರಾಜಾಸಾಬ್, ಎಂ.ಬಿ. ಪ್ರಕಾಶ್, ಅಫ್ಜಲ್ ಖಾನ್, ಬಿ. ನಾಗೇಶ್ವರ ರಾವ್, ಬರ್ಕಾತ್ ಅಲಿ, ದಿಲ್ ಜಾನ್ ಖಾನ್ ಉಮೇದುವಾರಿಕೆ ಹಿಂಪಡೆದಿದ್ದಾರೆ.
ಮಾಯಕೊಂಡದಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದು ಸ್ಪರ್ಧೆಗೆ ಇಳಿಯುವುದಾಗಿ ಘೋಷಣೆ ಮಾಡಿದ್ದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಆರ್.ಎಲ್. ಶಿವಪ್ರಕಾಶ್ ಮತ್ತು ಬಿಜೆಪಿ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದ ಜಿ.ಎಸ್. ಶ್ಯಾಮ್ ನಾಮಪತ್ರ ಹಿಂಪಡೆದಿದ್ದಾರೆ. ಮತ್ತು ಪಕ್ಷೇತರರಾಗಿದ್ದ ಆರ್. ಶಿವಾನಂದ ಕೂಡ ಉಮೇದುವಾರಿಕೆ ವಾಪಸ್ ತೆಗೆದುಕೊಂಡಿದ್ದಾರೆ.
ಚನ್ನಗಿರಿ ಕ್ಷೇತ್ರದಿಂದ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಕೆ. ಶಿವಲಿಂಗಪ್ಪ, ಬಿ. ರಂಗನಾಥ್, ವಿ. ಚಂದ್ರಪ್ಪ, ಹೊನ್ನಾಳಿಯಿಂದ ಎಲ್. ಕಿರಣ್ ಬಿ.ಜಿ. ಶಿವಮೂರ್ತಿ, ಎಂ. ರಂಗನಾಥಸ್ವಾಮಿ ಇವರುಗಳು ಕೂಡ ಕಣದಿಂದ ಹಿಂದೆ ಸರಿದಿದ್ದಾರೆ.