Home ಸಿನಿ ಮಿಲ್ಸ್ ‘ಕಾಂತಾರ’ ಪ್ರೇರಣೆಯ ವಿಚಿತ್ರ ವರ್ತನೆಗಳು: ರಿಷಬ್ ಶೆಟ್ಟಿಗೆ ತುಳುಕೂಟದ ಆತಂಕ!

‘ಕಾಂತಾರ’ ಪ್ರೇರಣೆಯ ವಿಚಿತ್ರ ವರ್ತನೆಗಳು: ರಿಷಬ್ ಶೆಟ್ಟಿಗೆ ತುಳುಕೂಟದ ಆತಂಕ!

0

ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಚಾಪ್ಟರ್ 1 ಸಿನಿಮಾ ಬಿಡುಗಡೆಯಾಗಿ ಭಾರಿ ಯಶಸ್ಸು ಗಳಿಸಿದೆ. ಆದರೆ, ಈ ಯಶಸ್ಸಿನ ಜೊತೆಗೇ ಕೆಲವೊಂದು ವಿಚಿತ್ರ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಸಿನಿಮಾ ವೀಕ್ಷಿಸಿದ ಕೆಲವರು ದೈವದ ಅನುಕರಣೆ ಮಾಡುತ್ತಾ ವಿಚಿತ್ರವಾಗಿ ವರ್ತಿಸುತ್ತಿರುವುದು ತುಳುಕೂಟದ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ರಿಷಬ್ ಶೆಟ್ಟಿಯವರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಪತ್ರ ಬರೆಯಲಾಗಿದೆ.

2022ರಲ್ಲಿ ತೆರೆಕಂಡ ‘ಕಾಂತಾರ’ ಚಿತ್ರ ಬಿಡುಗಡೆಯಾದಾಗಲೂ ಇದೇ ರೀತಿಯ ಘಟನೆಗಳು ವರದಿಯಾಗಿದ್ದವು. ಆರ್ಕೆಸ್ಟ್ರಾ ಕಾರ್ಯಕ್ರಮಗಳು, ಖಾಸಗಿ ಸಮಾರಂಭಗಳು ಮತ್ತು ಟಿವಿ ಶೋಗಳಲ್ಲಿ ದೈವದ ವೇಷಭೂಷಣಗಳನ್ನು ಧರಿಸಿ ಅನುಕರಣೆ ಮಾಡಲಾಗುತ್ತಿತ್ತು. ಈಗ ‘ಕಾಂತಾರ ಚಾಪ್ಟರ್ 1’ ಬಿಡುಗಡೆಯಾದ ನಂತರವೂ ಈ ಪ್ರವೃತ್ತಿ ಮುಂದುವರಿದಿದ್ದು, ದೈವ ನಂಬಿಕೆಗಳನ್ನು ಅಪಹಾಸ್ಯಕ್ಕೀಡು ಮಾಡುತ್ತಿದೆ ಎಂಬುದು ತುಳುಕೂಟದ ವಾದ.

ರಿಷಬ್ ಶೆಟ್ಟಿ ದೈವಗಳಲ್ಲಿ ಅಪಾರ ನಂಬಿಕೆ ಹೊಂದಿದ್ದಾರೆಂದು ಹಲವು ಬಾರಿ ಹೇಳಿಕೊಂಡಿದ್ದಾರೆ. ಆದರೆ, ಚಿತ್ರವನ್ನು ನೋಡಿದ ಅಭಿಮಾನಿಗಳು ದೈವದ ಕುರಿತು ಸರಿಯಾದ ಜಾಗೃತಿ ಇಲ್ಲದೆ ಅನುಕರಣೆ ಮಾಡುತ್ತಿರುವುದು ಆತಂಕಕಾರಿ. ಇತ್ತೀಚೆಗೆ, ವ್ಯಕ್ತಿಯೊಬ್ಬ ದೈವದ ವೇಷ ಧರಿಸಿ ಚಿತ್ರಮಂದಿರಕ್ಕೆ ಬಂದ ವಿಡಿಯೋ, ಸಿನಿಮಾ ವೀಕ್ಷಿಸುವಾಗಲೇ ಕೆಲವರು ದೈವ ಬಂದವರಂತೆ ವರ್ತಿಸಿದ ವಿಡಿಯೋಗಳು ಮತ್ತು ಚಿತ್ರಮಂದಿರದಿಂದ ಹೊರಬಂದ ನಂತರ ಅಸಹಜವಾಗಿ ಕೂಗಾಡಿದ ವಿಡಿಯೋಗಳು ವೈರಲ್ ಆಗಿವೆ.

ತಮಿಳುನಾಡಿನ ದಿಂಡಿಗಲ್‌ನಲ್ಲಿ ನಡೆದ ಇದೇ ರೀತಿಯ ಘಟನೆಗಳು ಈ ಸಮಸ್ಯೆಯ ಗಂಭೀರತೆಯನ್ನು ಎತ್ತಿ ಹಿಡಿದಿವೆ. ತುಳುಕೂಟವು ಈ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದು, ರಿಷಬ್ ಶೆಟ್ಟಿ ಮೌನದ ಬಗ್ಗೆ ಪ್ರಶ್ನಿಸಿದೆ. ಸಿನಿಮಾ ಪ್ರದರ್ಶನಕ್ಕೆ ಮುನ್ನ ಈ ಬಗ್ಗೆ ಸೂಕ್ತ ಡಿಸ್ಕ್ಲೇಮರ್ ಹಾಕುವಂತೆ ಈ ಹಿಂದೆಯೇ ಮನವಿ ಮಾಡಿದ್ದರೂ, ಅದನ್ನು ನಿರ್ಲಕ್ಷಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದೆ.

ದೈವಾರಾಧನೆ ಎಂಬುದು ನಮ್ಮ ಸಂಸ್ಕೃತಿ ಮತ್ತು ನಂಬಿಕೆಯ ಅವಿಭಾಜ್ಯ ಅಂಗ. ಅದನ್ನು ಕೇವಲ ಮನರಂಜನೆಗಾಗಿ ದುರುಪಯೋಗಪಡಿಸಿಕೊಳ್ಳುವುದು ಸರಿಯಲ್ಲ. ಆದ್ದರಿಂದ, ರಿಷಬ್ ಶೆಟ್ಟಿ ಕೂಡಲೇ ಸುದ್ದಿಗೋಷ್ಠಿ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಮತ್ತು ಚಿತ್ರಮಂದಿರಗಳಲ್ಲಿ ಸೂಕ್ತ ಡಿಸ್ಕ್ಲೇಮರ್ ಪ್ರಕಟಿಸಬೇಕು ಎಂದು ತುಳುಕೂಟ ಆಗ್ರಹಿಸಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version