ಗಣೇಶ್ ರಾಣೆಬೆನ್ನೂರು
ಚಿತ್ರ: ಅಂದೊಂದಿತ್ತು ಕಾಲ
ನಿರ್ದೇಶನ: ಕೀರ್ತಿ ಕೃಷ್ಣಪ್ಪ
ನಿರ್ಮಾಣ: ಭುವನ್ ಸುರೇಶ್
ತಾರಾಗಣ: ವಿನಯ್ ರಾಜಕುಮಾರ್, ಅದಿತಿ ಪ್ರಭುದೇವ, ಅರುಣಾ ಬಾಲರಾಜ್ ಇತರರು.
ರೇಟಿಂಗ್ಸ್: 3
ಜೀವನದಲ್ಲಿ ಏನಾದರೂ ಸಾಧಿಸಬೇಕೆಂದರೆ ಛಲ ಮುಖ್ಯ. ಸರಿಯಾದ ಧ್ಯೇಯವೊಂದಿದ್ದರೆ, ಆತ್ಮಬಲ ದೃಢವಾಗಿದ್ದರೆ, ಯಾರೇನೇ ಅಂದರೂ ತಾನು ಅಂದುಕೊಂಡಿದ್ದನ್ನು ಸಾಧಿಸಬಹುದು ಎಂಬುದಕ್ಕೆ ಕುಮಾರನೇ (ವಿನಯ್ ರಾಜಕುಮಾರ್) ಸಾಕ್ಷಿ. ಪುಟ್ಟ ಹಳ್ಳಿಯೊಂದರ ಟೆಂಟ್‌ನಲ್ಲಿ ಸಿನಿಮಾ ಕನಸು ಟಿಸಿಲೊಡೆದು, ಶಾಲೆಯಲ್ಲಿ ಅದು ಮತ್ತಷ್ಟು ಬಲಿಯುತ್ತದೆ. ಅಷ್ಟರಲ್ಲಾಗಲೇ `ನಾನೂ ಡೈರೆಕ್ಟರ್ ಆಗ್ಬೇಕು’ ಎಂದು ಪಣ ತೊಟ್ಟಿರುತ್ತಾನೆ ಕುಮಾರ.
ಓದು ಒಂದು ಹಂತಕ್ಕೆ ಬರುವ ಹೊತ್ತಿಗೆ ಸಿನಿಮಾ ಸೆಳೆತ ಮತ್ತಷ್ಟು ಜೋರಾಗುತ್ತದೆ. ಆದರೆ ಮನೆಯ ಜವಾಬ್ದಾರಿ ಕೂಡ ಬೆನ್ನ ಹಿಂದೆಯೇ ಜೋತಾಡುತ್ತಿರುತ್ತದೆ. ಅಪ್ಪ-ಅಮ್ಮನನ್ನು ನೋಡಿಕೊಳ್ಳುವ, ಜೀವನವನ್ನು ರೂಪಿಸಿಕೊಳ್ಳುವ ಉಮೇದು ಹೆಚ್ಚಾದಾಗ ಕುಮಾರ ಯಾವ ದಾರಿ ಆರಿಸಿಕೊಳ್ಳುತ್ತಾನೆ ಎಂಬುದೇ `ಅಂದೊಂದಿತ್ತು ಕಾಲ’ದ ಮೊದಲಾರ್ಧ.
ಕುಮಾರನ ಅಚಲ ನಿರ್ಧಾರ ಎಲ್ಲರೂ ಆತನನ್ನು ಗುರುತಿಸುವಂತೆ ಆಗುವಲ್ಲಿ ಸಫಲವಾಗುತ್ತಾ ಇಲ್ಲವಾ ಎಂಬುದೇ ದ್ವಿತೀಯಾರ್ಧ ಮತ್ತು ಕ್ಲೈಮ್ಯಾಕ್ಸ್. ಆರಂಭದಲ್ಲಿ ಇದು ಕುಮಾರನ ಆಟೋಗ್ರಾಫ್‌ನಂತೆ ಭಾಸವಾದರೂ, ಆಗಾಗ `ಇದು ನಿಮ್ಮದೂ ಕಥೆ ಆಗಿರಬಹುದು’ ಎಂಬ ಸೂಚನೆಯನ್ನು ಬೇರೆ ರೀತಿಯಲ್ಲಿ ಪ್ರಸ್ತುತಪಡಿಸಿದ್ದಾರೆ ನಿರ್ದೇಶಕ ಕೀರ್ತಿ ಕೃಷ್ಣಪ್ಪ. ಇದು ಅವರ ಮೊದಲ ಅನುಭವ.
ಕುಮಾರನ ಜೀವನದ ನಾನಾ ಮಜಲುಗಳ ದರ್ಶನ ಮಾಡಿಸುತ್ತಲೇ `ಲೈಫು ಇಷ್ಟೇನೇ…’ ಎಂಬುದನ್ನು ಸೂಚ್ಯವಾಗಿ ತೆರೆಯ ಮೇಲೆ ಹರವಿಟ್ಟಿದ್ದಾರೆ ನಿರ್ದೇಶಕ. ಇನ್ನು ವಿನಯ್ ರಾಜಕುಮಾರ್ ಪಾತ್ರಕ್ಕೆ ಹೊಂದಿಕೊಂಡು ನಟಿಸುವ ಪ್ರಯತ್ನ ಮಾಡಿದ್ದಾರೆ. ಅದಿತಿ ಪ್ರಭುದೇವ, ಅರುಣಾ ಬಾಲರಾಜ್ ಗಮನ ಸೆಳೆಯುತ್ತಾರೆ. ರಾಘವೇಂದ್ರ.ವಿ ಸಂಗೀತದಲ್ಲಿ ಒಂದೆರಡು ಹಾಡು ಸಿನಿಮಾಕ್ಕೆ ಪೂರಕವಾಗಿದೆ.