Anushree: ಆ್ಯಂಕರ್ ಅನುಶ್ರೀ ಮದುವೆ ಆಮಂತ್ರಣ ರಿವೀಲ್!

0
67

ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಮದುವೆ ಫಿಕ್ಸ್‌ ಆಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಕೊಡಗು ಮೂಲದ ರೋಷನ್ ಜೊತೆ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಕೆಲ ದಿನಗಳ ಹಿಂದೆಯೇ ಹೊರಬಿದಿತ್ತು.

ಸದ್ಯ ಅನುಶ್ರೀ ಅವರ ಮದುವೆಗೆ ದಿನಾಂಕ ನಿಗದಿಯಾಗಿದ್ದು, ಆಗಸ್ಟ್ 28ರಂದು ವಿವಾಹ ಮಹೋತ್ಸವ ನೆರವೇರಲಿದೆ. ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್​​ನಲ್ಲಿ ಮದುವೆ ಅನುಶ್ರೀ ಸಪ್ತಪದಿ ತುಳಿಯಲಿದ್ದಾರೆ.

ಈಗಾಗಲೇ ಮದುವೆಗೆ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಗಿದ್ದು, ಆಪ್ತರಿಗೆ ಆಮಂತ್ರಣ ನೀಡಲಾಗಿದೆ. ಕಿರುತೆರೆಯ ಅನೇಕ ಕಾರ್ಯಕ್ರಮಗಳ ಮೂಲಕ ಹೆಸರು ಪಡೆದುಕೊಂಡಿರುವ ಅನುಶ್ರೀ ಮದುವೆ ಆಮಂತ್ರಣ ಪತ್ರಿಕೆ ಮಾತ್ರ ಸರಳವಾಗಿ ಅತ್ಯಂತ ಸುಂದರವಾಗಿ ಮುದ್ರಿಸಿದ್ದಾರೆ.

ಆಮಂತ್ರಣ ಪತ್ರಿಕೆಯಲ್ಲೇನಿದೆ?: “ನೀವೆಲ್ಲ ಕೇಳುತ್ತಿದ್ದ ಏಕೈಕ ಪ್ರಶ್ನೆಗೆ ಈಗ ಉತ್ತರ ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿಯಾಗುವ ಹೊಸ ಮನ್ವಂತರ” ಎಂದು ಆಮಂತ್ರಣದಲ್ಲಿ ಬರೆದಿದ್ದಾರೆ.

“ಶ್ರೀಮತಿ ಶಶಿಕಲಾ ರವರ ಪುತ್ರಿ ಅನುಶ್ರೀ ಜೊತೆ ಶ್ರೀ ರಾಮಮೂರ್ತಿ ಮತ್ತು ಶ್ರೀಮತಿ ಸಿಸಿಲಿಯಾ ರವರ ಪುತ್ರ ರೋಷನ್‌ ಜತೆ ವಿವಾಹ. ಮುಹೂರ್ತ 28-08-2025ನೇ ಗುರುವಾರ ಬೆಳಗ್ಗೆ 10.56ಕ್ಕೆ” ನಡೆಯಲಿದೆ ಎಂದು ತಿಳಿಸಿದ್ದಾರೆ.

“ಸಂಭ್ರಮ ಬೈ ಸ್ಟಾನ್‌ಲೈನ್ಸ್ ಸ್ಟುಡಿಯೋಸ್ ತಿಟ್ಟಹಳ್ಳಿ, ಕಗ್ಗಲಪುರ, ಬೆಂಗಳೂರಿನಲ್ಲಿ ವಿವಾಹ ನಡೆಯಲಿದೆ. ನಿಮ್ಮ ಆಗಮನವೇ ಉಡುಗೊರೆ” ಎಂದು ಆಮಂತ್ರಣವನ್ನು ಸರಳವಾಗಿ ಮಾಡಿಸಿದ್ದಾರೆ.

ಅಪಾರ ಅಭಿಮಾನಿಗಳು: ಮಂಗಳೂರಿನ ಸುರತ್ಕಲ್ ಮೂಲದ ಅನುಶ್ರೀ, ಕನ್ನಡ ಕಿರುತೆರೆಯಲ್ಲಿ ತಮ್ಮದೆಯಾದ ಹವಾ ಸೃಷ್ಟಿಸಿದ್ದಾರೆ. ಖಾಸಗಿ ಟಿವಿಯ ವಿವಿಧ ಕಾರ್ಯಕ್ರಮ, ಚಲನಚಿತ್ರ ರಂಗದ ಅನೇಕ ಕಾರ್ಯಕ್ರಮದಲ್ಲಿ ತಮ್ಮ ನಿರೂಪಣೆ, ಮಾತಿನ ಶೈಲಿ ಮೂಲಕ ಹಲವಾರು ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ. ಕಾರ್ಯಕ್ರಮ ಎಷ್ಟು ಬೇಗ ಜನರ ಮನಸ್ಸಿಗೆ ನಾಟುತ್ತದೆಯೋ ಅನುಶ್ರೀ ಅವರ ನಿರೂಪಣೆಯೂ ಜನರಿಗೆ ಹತ್ತಿರವಾಗಿದೆ.

ಅನುಶ್ರೀ ನಿರೂಪಣೆ ಮಾಡುತ್ತಿದ್ದ ಹಲವು ಕಾರ್ಯಕ್ರಮಗಳಲ್ಲಿ ತಮಾಷೆಗಾಗಿ ಅವರ ಮದುವೆ ವಿಚಾರ ಪ್ರಸ್ತಾಪ ಆಗುತ್ತಿತ್ತು. ಈ ವರ್ಷ “ನನ್ನ ಮದುವೆ ಗ್ಯಾರಂಟಿ” ಎಂದು ಹೇಳಿದ್ದ ಕನ್ನಡದ ಖ್ಯಾತ ನಿರೂಪಕಿ ಇದೇ ತಿಂಗಳು 28ರಂದು ಹಸೆಮಣೆ ಏರಲಿದ್ದಾರೆ ಎಂಬುದು ಸದ್ಯದ ಸುದ್ದಿ.

ಮದುವೆ ಆಗುವ ಹುಡುಗನ ಬಗ್ಗೆಯೂ ಮಾತನಾಡಿದ್ದ ನಿರೂಪಕಿ, “ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಲೈಫ್‌ ಬಗ್ಗೆ ಅಲ್ಲದಿದ್ರೂ ಅವನ ಲೈಫ್ ಪರವಾಗಿ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಆದರೆ, ಅವನೂ ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು” ಎಂದಿದ್ದರು.

ವೈಯಕ್ತಿಕ ಬದುಕಿನೊಂದಿಗೆ ವೃತ್ತಿ ಜೀವನದಲ್ಲೂ ಅನೇಕ ನೋವುಗಳ ಜತೆಗೆ ಹೋರಾಡಿ ಇಂದು ಸಿನಿಮಾ ಸ್ಟಾರ್‌ ನಟ-ನಟಿಯರೊಂದಿಗೆ ಗುರುತಿಸಿಕೊಳ್ಳುವ ಮಟ್ಟಿಗೆ ನಿರೂಪಕಿ ಅನುಶ್ರೀ ಬೆಳೆದು ನಿಂತಿದ್ದಾರೆ. ಕನ್ನಡ ಚಿತ್ರಗಳಲ್ಲಿ ನಟಿಸುವ ಮೂಲಕ ಬೆಳ್ಳಿ ತೆರೆಯಲ್ಲಿಯೂ ಅವರು ಅದೃಷ್ಟ ಪರೀಕ್ಷಿಸಿದ್ದಾರೆ.

ಮದುವೆಯಾದ್ರೆ ಮಳೆ-ಬೆಳೆ ಕಡಿಮೆಯಾಗುತ್ತೆ…
“ನಾನು ಮದುವೆಯಾದ್ರೆ ಮಳೆ-ಬೆಳೆ ಎಲ್ಲಾ ಕಡಿಮೆ ಆಗುತ್ತೆ” ಎಂದು ನಿರೂಪಕಿ ಅನುಶ್ರೀ ಅವರು ನಟ ಶಿವರಾಜ್‌ಕುಮಾರ ಎದುರಿಗೆ ವರ್ಷದ ಹಿಂದೆಯೇ ನಗೆ ಚಟಾಕಿ ಹಾರಿಸಿದ್ದರು.

ಕಾರ್ಯಕ್ರಮವೊಂದರಲ್ಲಿ ನಟ ಶಿವರಾಜ್‌ ಕುಮಾರ್ ಅನುಶ್ರೀ ಮದುವೆ ಬಗ್ಗೆ ನೇರವಾಗಿಯೇ ಮಾತನಾಡಿದ್ದರು, “ನಿನ್ನ ಮನಸ್ಸಲ್ಲಿ ಯಾರಾನಾ ಇದ್ರೆ ನನಗೆ ಹೇಳು, ಮದುವೆ ಮಾತುಕತೆ ಮುಗಿಸಿಯೇ ಬಿಡೋಣ” ಎಂದಿದ್ದಕ್ಕೆ ಅನುಶ್ರೀ “ಯಾರನ್ನೂ ಮನಸ್ಸಲ್ಲಿ ಬಚ್ಚಿಟ್ಟಿಲ್ಲ. ಮುಂದಿನ ವರ್ಷ ಮದುವೆಯಾಗುವುದು ಗ್ಯಾರಂಟಿ, ನಾನು ಮದುವೆಯಾದ್ರೆ ಮಳೆ-ಬೆಳೆ ಎಲ್ಲಾ ಕಡಿಮೆ ಆಗುತ್ತೆ” ಎಂದು ತಮಾಷೆ ಮಾಡಿದ್ದರು.

ವೇದಿಕೆಯಲ್ಲಿಯೇ ಮದುವೆ ಮುಂದಿನ ವರ್ಷ ಮದುವೆ ಫಿಕ್ಸ್‌ ಎಂದು ಶಿವರಾಜ್‌ಕುಮಾರ್ ಎದುರಿನಲ್ಲಿಯೇ ಅನುಶ್ರೀ ಕನ್ಫರ್ಮ್‌ ಮಾಡಿದ್ದು, ಅಂದಿನಿಂದ ಅವರ ಅಭಿಮಾನಿಗಳಲ್ಲಿ ಹುಡುಗ ಯಾರು? ಶಿವಣ್ಣನೇ ಹುಡುಗನನ್ನು ಹುಡುಕುತ್ತಾರಾ? ಎನ್ನುವ ಪ್ರಶ್ನೆಯನ್ನಂತೂ ಹುಟ್ಟಿಹಾಕಿತ್ತು.

Previous articleಅಮೆರಿಕದಿಂದ ತೈಲ ದಂಡ: ರಷ್ಯಾದಲ್ಲಿ ಜೈ ಶಂಕರ್ ಕಿಡಿ
Next articleಮಹಿಳಾ ವಿಶ್ವಕಪ್ ಕ್ರಿಕೆಟ್‌: ಬೆಂಗಳೂರಿನ ಪಂದ್ಯಗಳು ಸ್ಥಳಾಂತರ!

LEAVE A REPLY

Please enter your comment!
Please enter your name here