ಸಾಹಸಸಿಂಹ ದಿ.ಡಾ.ವಿಷ್ಣುವರ್ಧನ್‌ಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವಂತೆ ಒತ್ತಾಯಗಳು ಕೇಳಿ ಬರುತ್ತಿವೆ.
ಈ ಕುರಿತು ಶನಿವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರನ್ನು ಗೃಹ ಕಚೇರಿಯಲ್ಲಿ ಖ್ಯಾತ ನಟಿಯರಾದ ಜಯಮಾಲಾ, ಶೃತಿ ಹಾಗೂ ಮಾಳವಿಕಾ ಅವಿನಾಶ್ ಭೇಟಿಯಾದರು.
ದಿವಂಗತ ನಟ ಸಾಹಸಸಿಂಹ ವಿಷ್ಣುವರ್ಧನ್‌ಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಹಾಗೂ ಅವರ ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಟಿಯರು ಮನವಿ ಸಲ್ಲಿಸಿದರು.
ಈ ಹಿಂದೆ ನಟಿಯರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಇದೇ ಮನವಿಯನ್ನು ನಟಿಯರು ಸಲ್ಲಿಸಿದ್ದರು.
ಪ್ರಮುಖ ಮನವಿಗಳು
- ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಮನವಿ.
- ಬಿ. ಸರೋಜಾದೇವಿ ಹೆಸರು ಮಲ್ಲೇಶ್ವರ ರಸ್ತೆಗೆ ನಾಮಕರಣಕ್ಕೆ ಮನವಿ.
ಕೆಲವು ದಿನಗಳ ಹಿಂದಷ್ಟೇ ಡಾ.ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್ ಹಾಗೂ ಅಳಿಯ ಅನಿರುದ್ಧ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾಗಿ ಮನವಿ ಸಲ್ಲಿಸಿದ್ದರು.
ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಕನಿಷ್ಠ 10 ಗುಂಟೆ ಜಾಗವನ್ನು ರಾಜ್ಯ ಸರ್ಕಾರ ನೀಡಬೇಕೆಂದು ಲಿಖಿತ ಮನವಿ ಸಲ್ಲಿಸಿದ್ದರು. ಜೊತೆಗೆ, ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಬೇಕೆಂದೂ ಮನವಿ ಮಾಡಿದ್ದರು.
ಇದರ ಬೆನ್ನಲ್ಲೇ ಇಂದು ಡಿಕೆಶಿ ಅವರನ್ನು ಭೇಟಿಯಾದ ಖ್ಯಾತ ನಟಿಯರಾದ ಜಯಮಾಲಾ, ಶೃತಿ ಹಾಗೂ ಮಾಳವಿಕಾ ಅವಿನಾಶ್ ಮೇರು ನಟ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಹಾಗೂ ಅವರ ಸ್ಮಾರಕ ನಿರ್ಮಾಣ ಸಂಬಂಧಪಟ್ಟಂತೆ ಮನವಿ ಸಲ್ಲಿಸಿದರು.
ಇತ್ತೀಚೆಗಷ್ಟೇ ನಿಧನರಾದ ನಟಿ ಬಿ. ಸರೋಜಾದೇವಿ ನಿವಾಸ ಮಲ್ಲೇಶ್ವರದಲ್ಲಿದೆ. ಆದ್ದರಿಂದ ಆ ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡುವಂತೆಯೂ ನಟಿಯರು ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿಯೇ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಯಾವುದೇ ತೀರ್ಮಾನ ಕೈಗೊಂಡಿಲ್ಲ.
ಈ ತಿಂಗಳು ಡಾ.ವಿಷ್ಣುವರ್ಧನ್ ಹುಟ್ಟುಹಬ್ಬವಿದ್ದು, ಅಷ್ಟರಲ್ಲಿ ಸರ್ಕಾರ ಕರ್ನಾಟಕ ರತ್ನದ ಕುರಿತು ತೀರ್ಮಾನ ಮಾಡಲಿದೆಯೇ? ಎಂದು ಕಾದು ನೋಡಬೇಕಿದೆ.