ಬೆಂಗಳೂರು: ‘ಪದವಿಪೂರ್ವ’ ಚಿತ್ರದ ಮೂಲಕ ಸಿಲ್ವರ್ ಸ್ಕ್ರೀನ್‌ಗೆ ಪಾದಾರ್ಪಣೆ ಮಾಡಿದ ಪೃಥ್ವಿ ಶಾಮನೂರು, ಈಗ ತನ್ನ ಹೊಸ ಚಿತ್ರ ‘ಉಡಾಳ’ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾನೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ಯೋಗರಾಜ್ ಸಿನೆಮಾಸ್ ಮತ್ತು ರವಿ ಶಾಮನೂರು ಫಿಲಂಸ್ ಲಾಂಛನದಲ್ಲಿ ದಾವಣಗೆರೆಯ ಉದ್ಯಮಿ ರವಿ ಶಾಮನೂರು ಹಾಗೂ ಪ್ರಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಯೋಗರಾಜ್ ಭಟ್ ಅವರೊಂದಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅಮೋಲ್ ಪಾಟೀಲ್, ಈ ಚಿತ್ರದಿಂದ ನಿರ್ದೇಶಕರಾಗಿ ತನ್ನ ಚೊಚ್ಚಲ ಪ್ರಯತ್ನ ಮಾಡಿದ್ದಾರೆ.
ಟೀಸರ್‌ನಲ್ಲಿ ಉತ್ತರ ಕರ್ನಾಟಕದ ಶೈಲಿ, ಭಾಷಾ ಧಾಟಿ ಮತ್ತು ಸ್ಥಳೀಯ ಸೊಗಡು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಚಿತ್ರವು ಆ ಭಾಗದ ನೈಸರ್ಗಿಕ ಸೌಂದರ್ಯ ಮತ್ತು ಜೀವನಶೈಲಿಯನ್ನು ಮನರಂಜನೆಯ ರೂಪದಲ್ಲಿ ತೋರಿಸಲಿದೆ ಎಂಬ ನಿರೀಕ್ಷೆ ಮೂಡಿಸಿದೆ.
ಚಿತ್ರದ ಹಿನ್ನೆಲೆ ಮತ್ತು ತಾಂತ್ರಿಕ ತಂಡ: ‘ಉಡಾಳ’ ಚಿತ್ರವು ಸಂಪೂರ್ಣವಾಗಿ ವಿಜಯಪುರ ಜಿಲ್ಲೆಯಲ್ಲಿ ಚಿತ್ರೀಕರಿಸಲ್ಪಟ್ಟಿದೆ. ಪೃಥ್ವಿ ಶಾಮನೂರು ಈ ಚಿತ್ರದಲ್ಲಿ ಗೈಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹೃತಿಕ್ ಶ್ರೀನಿವಾಸ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಬಲ ರಾಜವಾಡಿ, ಮಾಳು ನಿಪ್ಪಾಳ್, ಹರೀಶ್ ಹಿರಿಯೂರು, ಬಿರಾದಾರ್, ಸುಮಿತ್ ಸಂಕೋಜಿ, ವಾದಿರಾಜ ಬಬ್ಲಾದಿ, ಪ್ರವೀಣ್ ಗಸ್ತಿ, ದಯಾನಂದ ಬೀಳಗಿ, ರೇಣುಕ, ಶ್ರೀಧರ್, ದಾನಪ್ಪ, ಶಿಲ್ಪ ಶಾಂತಕುಮಾರ್, ಸೋನಿಯಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ಚಿತ್ರದ ಛಾಯಾಗ್ರಹಣವನ್ನು ಶಿವಶಂಕರ್ ನೂರಂಬಡ ನಿರ್ವಹಿಸಿದ್ದು, ಮಧು ತುಂಬಕೆರೆ ಸಂಕಲನ ಮಾಡಿದ್ದಾರೆ. ಅರ್ಜುನ್ ರಾಜ್ ಮತ್ತು ವಿನೋದ್ ಸಾಹಸ ನಿರ್ದೇಶನ ವಹಿಸಿದ್ದು, ಭಜರಂಗಿ ಮೋಹನ್ ಹಾಗೂ ರಘು ನೃತ್ಯ ನಿರ್ದೇಶನ ಮಾಡಿದ್ದಾರೆ.
ಸಂಗೀತ, ಹಾಡುಗಳು ಮತ್ತು ಸಾಹಿತ್ಯ: ಚಿತ್ರದಲ್ಲಿ ಯೋಗರಾಜ್ ಭಟ್ ಬರೆದಿರುವ ಐದು ಹಾಡುಗಳಿದ್ದು, ಸಂಗೀತವನ್ನು ಚೇತನ್ ಡ್ಯಾವಿ ನೀಡಿದ್ದಾರೆ. ‘ದ್ವಾಪರ’ ಖ್ಯಾತಿಯ ಜಸ್ಕರಣ್ ಸಿಂಗ್, ಉತ್ತರ ಕರ್ನಾಟಕದ ಮಾಳು ನಿಪ್ಪಾಳ್, ಬಾಳು ಬೆಳಗುಂದಿ, ಕರಿಬಸವ, ಸೃಷ್ಟಿ ಶಾಮನೂರ್ ಮತ್ತು ಚೇತನ್ ಸೋಸ್ಕ ಅವರ ದ್ವನಿ ಹಾಡುಗಳಿಗೆ ಶೋಭೆ ತಂದಿದೆ. ಸಂಗೀತ ಹಾಗೂ ಸಾಹಿತ್ಯ ಎರಡೂ ಚಿತ್ರಕ್ಕೆ ಭಾವನಾತ್ಮಕ ಮತ್ತು ಸ್ಥಳೀಯ ಸೊಗಡಿನ ಪರಿಮಳವನ್ನು ನೀಡಿವೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಉತ್ತರ ಕರ್ನಾಟಕದ ಪಕ್ಕಾ ಕಮರ್ಷಿಯಲ್ ಚಿತ್ರ: ಚಿತ್ರತಂಡದ ಪ್ರಕಾರ, ‘ಉಡಾಳ’ ಉತ್ತರ ಕರ್ನಾಟಕದ ಹಿನ್ನೆಲೆಯಲ್ಲಿಯೇ ಮೂಡಿಬಂದ ಪಕ್ಕಾ ಕಮರ್ಷಿಯಲ್ ಎಂಟರ್ಟೈನರ್ ಆಗಿದ್ದು, ಪ್ರೇಕ್ಷಕರಿಗೆ ಲವ್, ಕಾಮಿಡಿ, ಆಕ್ಷನ್ ಮತ್ತು ಡ್ರಾಮಾ ಎಲ್ಲ ಅಂಶಗಳನ್ನು ಒದಗಿಸುತ್ತದೆ.
“ಚಿತ್ರದ ಪ್ರತಿಯೊಂದು ದೃಶ್ಯದಲ್ಲೂ ನಮ್ಮ ಭಾಗದ ಸಂಸ್ಕೃತಿ, ಭಾಷೆ, ಧಾಟಿ ಮತ್ತು ಹಾಸ್ಯ ತುಂಬಿಕೊಂಡಿದೆ. ಜನರು ತಮಗೆ ಹತ್ತಿರದ ಬದುಕನ್ನು ಪರದೆಯ ಮೇಲೆ ಕಾಣುವ ಅನುಭವ ಪಡೆಯುತ್ತಾರೆ” ಎಂದು ನಿರ್ದೇಶಕ ಅಮೋಲ್ ಪಾಟೀಲ್ ಹೇಳಿದ್ದಾರೆ.
ರಿಲೀಸ್ ಸಿದ್ಧತೆ ಪೂರ್ಣಗೊಳಿಸಿದ ಚಿತ್ರತಂಡ: ಚಿತ್ರದ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಹಂತ ಪೂರ್ಣಗೊಂಡಿದ್ದು, ಈಗ ಚಿತ್ರತಂಡ ರಿಲೀಸ್ ದಿನಾಂಕ ನಿಗದಿ ಮಾಡುವತ್ತ ಗಮನ ಹರಿಸಿದೆ. ದಾವಣಗೆರೆಯ ಶಾಮನೂರು ಕುಟುಂಬದಿಂದ ಮತ್ತೊಮ್ಮೆ ನಿರ್ಮಾಣವಾಗುತ್ತಿರುವ ಈ ಸಿನಿಮಾ, ಯುವ ನಟ ಪೃಥ್ವಿ ಶಾಮನೂರಿಗೆ ಮತ್ತೊಂದು ಶಕ್ತಿಯುತ ವೇದಿಕೆಯಾಗಲಿದೆ ಎನ್ನಲಾಗಿದೆ.
ಚಿತ್ರ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸಲಾಗುವ ನಿರೀಕ್ಷೆಯಿದೆ.