ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ ‘ಸರಿಗಮಪ’ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಗಾಯಕಿ ಸುಹಾನಾ ಸೈಯದ್ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಂಗಭೂಮಿ ಕಲಾವಿದ ನಿತೀನ್ ಶಿವಾಂಶ್ ಅವರೊಂದಿಗೆ ಸರಳ ಮತ್ತು ಅರ್ಥಪೂರ್ಣವಾದ ‘ಮಂತ್ರ ಮಾಂಗಲ್ಯ’ ಪದ್ಧತಿಯ ಮೂಲಕ ಸುಹಾನಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಈ ವಿವಾಹಕ್ಕೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಸುಹಾನಾ ಸೈಯದ್ ತಮ್ಮ ಗಾಯನ ಪ್ರತಿಭೆಯಿಂದ ‘ಸರಿಗಮಪ’ ವೇದಿಕೆಯಲ್ಲಿ ಗುರುತಿಸಿಕೊಂಡಿದ್ದರು. ಆದರೆ, ‘ಶ್ರೀಕೃಷ್ಣನೇ ಶ್ರೀನಿವಾಸನೇ’ ಎಂಬ ಭಜನೆಯನ್ನು ಹಾಡಿದಾಗ ಅನಿರೀಕ್ಷಿತವಾಗಿ ಟೀಕೆಗಳ ಸುಳಿಯಲ್ಲಿ ಸಿಲುಕಿದ್ದರು. ಮುಸ್ಲಿಂ ಧರ್ಮದ ಕೆಲವರಿಂದ ಇದು ವಿರೋಧಕ್ಕೆ ಕಾರಣವಾಗಿತ್ತು. ಆದರೆ, ಇಂತಹ ಎಲ್ಲ ಸವಾಲುಗಳನ್ನು ಎದುರಿಸಿ ಮುನ್ನಡೆದ ಸುಹಾನಾ, ಈಗ ತಮ್ಮ ಪ್ರೀತಿಯ ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ.
ಸುಹಾನಾ ಮತ್ತು ನಿತೀನ್ ಪ್ರೇಮಕಥೆ ಸುಮಾರು 16 ವರ್ಷಗಳ ಹಿಂದೆಯೇ ಶುರುವಾಯಿತು. ಇವರಿಬ್ಬರು ಪರಿಚಯವಾದ ಬಳಿಕ ಸ್ನೇಹ ಪ್ರೀತಿಗೆ ತಿರುಗಿತು. ತಮ್ಮ ಸಂಬಂಧದ ಬಗ್ಗೆ ಸುಹಾನಾ ಈ ಹಿಂದೆಯೇ ಸಾಮಾಜಿಕ ಜಾಲತಾಣಗಳಲ್ಲಿ ಸುಳಿವು ನೀಡಿದ್ದರು.
“ಪ್ರತಿ ಜೀವವೂ ಪ್ರೀತಿಗಾಗಿ ಹಾತೊರೆಯುತ್ತದೆ. ಪ್ರೀತಿಗೆ ಯಾವುದೇ ಗಡಿಗಳಿಲ್ಲ. ಅದು ದೂರ, ಅನುಮಾನ ಮತ್ತು ಭಯಗಳನ್ನು ಮೀರಿ ನಿಲ್ಲುವ ಪಯಣ. ಅಂತಹ ಅಪರಿಮಿತ ಪ್ರೀತಿಗೆ ನಾವು ಸಾಕ್ಷಿಗಳಾಗಿದ್ದೇವೆ. ಇಂದು ನಾವು ನಮ್ಮ ಪ್ರೀತಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ ಮತ್ತು ನಿಮ್ಮ ಆಶೀರ್ವಾದವನ್ನು ಕೋರುತ್ತೇವೆ,” ಎಂದು ಸುಹಾನಾ ತಮ್ಮ ಪ್ರೀತಿಯನ್ನು ಬಹಿರಂಗಪಡಿಸಿದ್ದರು.
ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ನಡೆದ ಇವರ ವಿವಾಹವು ಅನೇಕರಿಗೆ ಮಾದರಿಯಾಗಿದೆ. ಯಾವುದೇ ಆಡಂಬರಗಳಿಲ್ಲದೆ, ಸರಳವಾಗಿ ಪರಸ್ಪರ ಪ್ರೀತಿ ಮತ್ತು ವಿಶ್ವಾಸದೊಂದಿಗೆ ಒಂದಾಗುವ ಇವರ ನಿರ್ಧಾರ ಶ್ಲಾಘನೀಯ. ಸುಹಾನಾ ತಮ್ಮ ಧಾರ್ಮಿಕ ಮತ್ತು ವೈಯಕ್ತಿಕ ಆಯ್ಕೆಗಳ ಬಗ್ಗೆ ಧೈರ್ಯದಿಂದ ನಿಂತು, ಪ್ರೀತಿಗೆ ಯಾವುದೇ ಧರ್ಮ, ಜಾತಿ ಅಥವಾ ಸಮುದಾಯದ ಅಡೆತಡೆಗಳಿಲ್ಲ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಸುಹಾನಾ ಮತ್ತು ನಿತೀನ್ ದಂಪತಿಗೆ ಹೊಸ ಜೀವನಕ್ಕೆ ಶುಭ ಹಾರೈಸುತ್ತಾ, ದಾಂಪತ್ಯ ಸುಖಕರವಾಗಿರಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.