ನಾನು ರಿಟೈರ್ಡ್‌ ಆಗಿಲ್ಲ

0
367

ಗಣೇಶ್ ರಾಣೆಬೆನ್ನೂರು
ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಕಳೆದ ವಾರ ಬಿಡುಗಡೆಯಾಗಿ ಅದ್ಧೂರಿ ಓಪನಿಂಗ್ ಪಡೆದುಕೊಂಡು ದೇಶಾದ್ಯಂತ ಸದ್ದು ಮಾಡುತ್ತಿದೆ. ಮಾಸ್-ಕ್ಲಾಸ್ ಅಂಶಗಳನ್ನೊಳಗೊಂಡಿರುವ ವಿಕ್ರಾಂತ್ ಬಗ್ಗೆ ಮೆಚ್ಚುಗೆ, ಟೀಕೆ, ವಿಮರ್ಶೆ ಎಲ್ಲವೂ ಹರಿದಾಡುತ್ತಿದೆ. ಸ್ಟಾರ್ ನಟರಾಗಿ ಹೊಸ ಮಜಲಿಗೆ ಮುಖ ಮಾಡಿರುವ ಸುದೀಪ್ ಪಾತ್ರದ ಬಗ್ಗೆಯೂ ಸಾಕಷ್ಟು ಪ್ರಶಂಸೆ ವ್ಯಕ್ತವಾದರೂ ಕೆಲವು ಮಂದಿಯಿಂದ ಅಪಸರ ಕೇಳಿಬಂದಿದೆ. ಇದಕ್ಕೆಲ್ಲಾ ಸುದೀಪ್ ನೇರಾನೇರ ಉತ್ತರ ಕೊಟ್ಟಿದ್ದಾರೆ.
ಓವರ್ ಟು ಸುದೀಪ್…
`ಸಿನಿಮಾ ಬಿಡುಗಡೆಯಾದ ಮೊದಲೆರಡು ದಿನ ಯಾವ ಸೋಶಿಯಲ್ ಮೀಡಿಯಾ ಕಡೆಗೂ ತಲೆ ಹಾಕದೇ, ನಮ್ಮ ಪಾಡಿಗೆ ನಾವಿದ್ದೇವು. ದೇಶಾದ್ಯಂತ ಸಿನಿಮಾ ಪಡೆದುಕೊಂಡ ಓಪನಿಂಗ್ ಬಗ್ಗೆ ಕೇಳಿ ಇಡೀ ತಂಡ ಖುಷಿಯಾಗಿದ್ದೇವೆ. ತುಂಬಾ ನಿಸ್ವಾರ್ಥವಾಗಿ, ಪ್ರಾಮಾಣಿಕವಾಗಿ ಮಾಡಿರುವ ಸಿನಿಮಾವಿದು. ಅನಾವಶ್ಯಕವಾಗಿ ನಾನಿಲ್ಲಿ ಆವರಿಸಿಕೊಂಡಿಲ್ಲ. ಪ್ರತಿಯೊಬ್ಬ ನಟರಿಗೂ ಅವರದ್ದೇ ಆದ ಸ್ಕ್ರೀನ್ ಸ್ಪೆಸ್ ಇಲ್ಲಿ ಸಿಕ್ಕಿದೆ. ನಾನು ಸ್ಕ್ರಿಪ್ಟ್‌ಗೆ ಏನು ನ್ಯಾಯ ಸಲ್ಲಿಸಬೇಕಿತ್ತೋ, ಅದನ್ನು ಸಲ್ಲಿಸಿದ್ದೇನೆ. ನಾನು ಕಮರ್ಷಿಯಲ್, ಮಾಸ್ ಹೀರೋ ಎಂದುಕೊಂಡು ಅನಾವಶ್ಯಕವಾಗಿ ಫೈಟ್, ಅಭಿಮಾನಿಗಳಿಗಾಗಿ ಮಾಸ್ ಡೈಲಾಗ್ ಸೇರಿಸಿಲ್ಲ. ಅವೆಲ್ಲವನ್ನೂ ಸೇರಿಸೋದು ನನಗೆ ಕಷ್ಟವೇನೂ ಅಲ್ಲ. ಹಾಗೆ ಮಾಡಿದರೆ ಒಬ್ಬ ನಿರ್ದೇಶಕನ ದೃಷ್ಟಿಕೋನಕ್ಕೆ ನನ್ನಿಂದ ಧಕ್ಕೆಯಾಗುತ್ತದೆ. ನಾನಿನ್ನೂ ರಿಟರ‍್ಡ್ ಆಗಿಲ್ಲ, ಕಮರ್ಷಿಯಲ್ ಸಿನಿಮಾಗಳನ್ನು ಯಾವಾಗ ಬೇಕಿದ್ರೂ ಮಾಡಬಹುದು. ಈ ಥರದ ಪಾತ್ರ, ಕಥೆ, ಸಿನಿಮಾ ಸಿಗೋದು ತುಂಬಾ ಅಪರೂಪ.

ಇಂಡಸಿಗೆ ಬಂದು ೨೬ ವರ್ಷವಾಯ್ತು. ಪ್ರಾರಂಭದಿಂದಲೂ ನಾನು ಬೇರೆ ಬೇರೆ ರೀತಿಯ ಸಿನಿಮಾಗಳಲ್ಲೇ ಕಾಣಿಸಿಕೊಂಡು ಬಂದಿದ್ದೇನೆ. ಕಮರ್ಷಿಯಲ್ ಸಿನಿಮಾಗಳ ಜೊತೆಗೆ ಪ್ರಯೋಗಕ್ಕೂ ಒಗ್ಗಿಕೊಂಡಿದ್ದೇನೆ. ಒಂದೇ ರೀತಿಯ ಸಿನಿಮಾ ಮಾಡ್ತಿದ್ರೆ ನಾವು ಬೆಳೆಯೋದು ಯಾವಾಗ..? ಹೊಸತನಕ್ಕೆ, ಪ್ರಯೋಗಕ್ಕೆ ಮುಂದಾಗೋದು ಯಾವಾಗ..? ಹೀಗೆ ಅನೇಕ ಪ್ರಶ್ನೆಗಳನ್ನು ನನಗೆ ನಾನೇ ಹಾಕಿಕೊಳ್ಳುತ್ತೇನೆ. ಇವೆಲ್ಲವನ್ನೂ ಮೀರಿ, ನಾನು ಒಂದು ಸ್ಕ್ರಿಪ್ಟ್ ಓಕೆ ಮಾಡಿರೆ, ಅದಕ್ಕೆ ಬಲವಾದ ಕಾರಣವೂ ಇರುತ್ತದೆ.
ಯಾರೇನೇ ಅಂದರೂ, ನನ್ನ ಸಿನಿ ಕೆರಿಯರ್‌ನಲ್ಲಿ ತುಂಬಾ ಖುಷಿ ಕೊಟ್ಟ ಸಿನಿಮಾ. ಇಷ್ಟು ವರ್ಷಗಳಲ್ಲಿ ರಾಜಮೌಳಿ ನನ್ನ ಸಿನಿಮಾ ನೋಡಿ ಟೀಟ್ ಮಾಡಿಲ್ಲ. ಆದರೆ, ಈ ಸಿನಿಮಾಕ್ಕೆ ಮಾಡಿದ್ದಾರೆ. ಇದನ್ನೆಲ್ಲಾ ಹೇಳಿ ಮಾಡಿಸೋಕೆ ಆಗಲ್ಲ. ಬಜೆಟ್ ಬಗ್ಗೆ ಚಿಂತೆ ಮಾಡದೇ ಕೋಟಿಗಟ್ಟಲೇ ಸುರಿದಿದ್ದೇವೆ. ಹಾಗೆಯೇ ವಾಪಾಸ್ ಬಂದಿದೆ. ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಇಡೀ ತಂಡಕ್ಕೆ ಖುಷಿಯಿದೆ. ಪರಭಾಷೆಗಳಲ್ಲೂ ಅದ್ಭುತವಾದ ರೆಸ್ಪಾನ್ಸ್ ಇದೆ. ಕೆಲವರು ಸಿನಿಮಾದ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದಾಕ್ಷಣ ಅದಕ್ಕೆ ಹೊಡೆತ ಬೀಳುವುದಿಲ್ಲ. ಪ್ರಕೃತಿ ಮತ್ತು ಅಭಿಮಾನಿಗಳು, ಪ್ರೇಕ್ಷಕರು ಇಂದು ಕೈ ಹಿಡಿದಿದ್ದಾರೆ. “ಈಗ’ ನಂತರ ಎರಡ್ಮೂರು ಬಾರಿ ನೋಡುತ್ತಿರುವ ಸಿನಿಮಾವಿದು’ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಇದಕ್ಕಿಂತ ಖುಷಿ ಇನ್ನೇನಿದೆ..?’
ಎಂದು ಮಾತು ಮುಗಿಸಿದರು ಕಿಚ್ಚ.

Previous articleವಿಂಟೇಜ್‌ ಸಿನಿಮಾಕ್ಕೆ ವಿಶೇಷ ನಾಮಕರಣ
Next articleಗಾಳಿಪಟ ಜತೆ ಗಣೇಶ ಹಬ್ಬ