ವಿಜಯಪುರ: ಮಹಾರಾಷ್ಟ್ರದ ನೀರು ನಿರ್ವಹಣೆ ಅವೈಜ್ಞಾನಿಕ ನೀತಿಯಿಂದಾಗಿ ಕರ್ನಾಟಕದಲ್ಲಿ ಪ್ರವಾಹ ಸ್ಥಿತಿಗೆ ಕಾರಣ, ಈ ಎಲ್ಲ ವಿಷಯಗಳನ್ನು ಕೇಂದ್ರ ಜಲ ಆಯೋಗದ ಗಮನಕ್ಕೆ ತರಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟೋರೇಜ್‌ಗಳ ಮೂಲಕ ಸುಮಾರು 50 ಟಿಎಂಸಿ ಹೆಚ್ಚುವರಿ ನೀರು ಬಳಕೆ ಮಾಡುತ್ತದೆ. ಅಲ್ಲಿನ ಸ್ಟೋರೇಜ್‌ಗಳು ಭರ್ತಿಯಾದ ನಂತರ ಒಮ್ಮೆಲೇ ನದಿಗೆ ನೀರು ಬಿಡುವುದರಿಂದ ಪ್ರವಾಹ ಎದುರಾಗಿದೆ ಎಂದರು.
ಸಾಮಾನ್ಯವಾಗಿ ಮಹಾರಾಷ್ಟ್ರದ ಉಜಣಿ ಜಲಾಶಯದಿಂದ ಡ್ಯಾಂ ನೀರು ಹರಿಬಿಡಲಾಗುತ್ತಿತ್ತು. ಈ ಸಲ ಸೀನಾ ನದಿಯಿಂದ 3.5 ಲಕ್ಷ ಕ್ಯೂಸೆಕ್‌ಗಳಷ್ಟು ನೀರು ಹರಿಬಿಟ್ಟಿರುವುದು ಕರ್ನಾಟಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿಗೆ ಕಾರಣವಾಗಿದೆ ಎಂದರು.
ಭೀಮಾ ನದಿ ವಿಷಯದಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ಸಮನ್ವಯತೆಯೇ ಇಲ್ಲದಿರುವುದರಿಂದ ಕರ್ನಾಟಕ ಜನತೆ ತೊಂದರೆ ಎದುರಿಸುವಂತಾಗಿದೆ ಎಂದರು. ಈ ಎಲ್ಲ ವಿಷಯಗಳ ಬಗ್ಗೆ ಈ ಬಗ್ಗೆ ಸರ್ಕಾರದ ವತಿಯಿಂದ ಕೇಂದ್ರ ಜಲ ಆಯೋಗದ ಗಮನಕ್ಕೆ ತರಲಾಗುವುದು ಎಂದರು.
ಮಾರ್ಗಸೂಚಿ ಬದಲಿಸಲು ಪ್ರಸ್ತಾವನೆ: ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿ ಬದಲಿಸುವಂತೆ ಸರ್ಕಾರ ಇನ್ನೊಮ್ಮೆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಬದ್ಧವಾಗಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು.
ಪ್ರಸ್ತುತ ಇರುವ ಎನ್‌ಡಿಆರ್‌ಎಫ್ ಮಾರ್ಗಸೂಚಿಗಳಿಂದ ಸಂತ್ರಸ್ತರಿಗೆ ಯಾವ ಪ್ರಯೋಜನವಾಗುತ್ತಿಲ್ಲ, ಅದರ ಅಡಿಯಲ್ಲಿ ನೀಡಲಾಗುವ ಪರಿಹಾರ ಪರಿಷ್ಕರಣೆಯಾಗಬೇಕಿದೆ, ನೊಂದ ಜನರಿಗೆ ಅನ್ಯಾಯವಾಗುತ್ತಿದೆ. ಎನ್‌ಡಿಆರ್‌ಫ್ ಮಾರ್ಗಸೂಚಿಗಳು ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕು, ಕೇಂದ್ರ ಸರ್ಕಾರಕ್ಕೆ ಹಿಂದೆಯೂ ಪತ್ರ ಬರೆದು ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆದಿತ್ತು. ಈಗ ಪುನಃ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಲಿದೆ ಎಂದು ಸಚಿವ ಪಾಟೀಲ ಹೇಳಿದರು.