ಕಾರವಾರ ಕೆಡಿಪಿ ಸಭೆ ರಾಜಕೀಯ ಕದನಕ್ಕೆ ವೇದಿಕೆ: ಆಸ್ಪತ್ರೆಗಳ ಸಮಸ್ಯೆ ಚರ್ಚೆ ತಾರಕಕ್ಕೆ – ಸಚಿವ-ಶಾಸಕ ವಾಗ್ವಾದ
ಕಾರವಾರ: ಜಿಲ್ಲಾ ಮಟ್ಟದ ಕೆಡಿಪಿ (ಕೇಂದ್ರ-ರಾಜ್ಯ ಯೋಜನೆಗಳ ಪರಿಶೀಲನಾ) ಸಭೆ ಗದ್ದಲದ ನಡುವೆಯೇ ಅಂತ್ಯಗೊಂಡಿದ್ದು, ಆಸ್ಪತ್ರೆಗಳ ಸಮಸ್ಯೆ ಕುರಿತ ಚರ್ಚೆ ತಾರಕಕ್ಕೇರಿದ ಬಳಿಕ ಶಾಸಕ ಸತೀಶ್ ಸೈಲ್ ಸಭೆಯಿಂದ ಹೊರನಡೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿನ ಔಷಧಗಳ ಕೊರತೆ ಮತ್ತು ವೈದ್ಯರ ಅಭಾವ ಪ್ರಮುಖ ವಿಚಾರವಾಗಿ ಚರ್ಚೆಗೆ ಬಂದಿದೆ.
ಸಭೆಯಲ್ಲಿ ಅಧಿಕಾರಿಗಳು ಜಿಲ್ಲೆಯ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಇಲ್ಲ ಎಂದು ಮಾಹಿತಿ ನೀಡಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸತೀಶ್ ಸೈಲ್, “ಜಿಲ್ಲೆಯಲ್ಲಿ ವೈದ್ಯರ ಕೊರತೆ ಸ್ಪಷ್ಟವಾಗಿ ಎದ್ದುಕಾಣುತ್ತಿದೆ. ವೈದ್ಯರೇ ಇಲ್ಲದಿದ್ದ ಮೇಲೆ ರೋಗಿಗಳಿಗೆ ಔಷಧವನ್ನು ಯಾರು ನೀಡುತ್ತಾರೆ? ನೆಲದ ವಾಸ್ತವ್ಯ ಬೇರೆ ಇದ್ದಾಗ ಔಷಧ ಲಭ್ಯವಿದೆ ಎಂದು ಹೇಳುವುದು ತಪ್ಪು ಮಾಹಿತಿ” ಎಂದು ಆರೋಪಿಸಿದರು.
ಇದನ್ನೂ ಓದಿ: ಬಾಲ ಪ್ರತಿಭೆಯ ಸಾಧನೆ: AI ಏಜೆಂಟ್ ರಚಿಸಿದ 8 ವರ್ಷದ ಬಾಲಕ
ಸಭೆಯಲ್ಲಿ ವಾಗ್ವಾದ: ಶಾಸಕರ ಮಾತಿಗೆ ಪ್ರತಿಕ್ರಿಯಿಸಿದ ಸಚಿವ ಮಂಕಾಳ ವೈದ್ಯ ಅವರು, “ವೈದ್ಯರ ಕೊರತೆ ಇದ್ದರೆ ನೀವೇ ತರಬೇಕು” ಎಂದು ಹೇಳಿದರೆಂಬ ಮಾಹಿತಿ ಲಭ್ಯವಾಗಿದೆ. ಈ ಹೇಳಿಕೆ ಶಾಸಕ ಸೈಲ್ ಅವರನ್ನು ಇನ್ನಷ್ಟು ಕೆರಳಿಸಿತು. “ನೀವು ಹೇಳಿದ್ದನ್ನೆಲ್ಲಾ ಕೇಳಿಕೊಂಡು ಹೋಗಲು ನಾವೇನು ಹೆಬ್ಬೆಟ್ಟು ಗಿರಾಕಿಗಳಲ್ಲ. ಜನರು ಸಮಸ್ಯೆಗಳ ಬಗ್ಗೆ ನಮ್ಮನ್ನು ಪ್ರಶ್ನಿಸುತ್ತಾರೆ. ಅವರಿಗೆ ಉತ್ತರ ನೀಡುವ ಹೊಣೆಗಾರಿಕೆ ನಮ್ಮದಾಗಿದೆ,” ಎಂದು ಸೈಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ಮಟ್ಟದ ಗಂಭೀರ ಸಮಸ್ಯೆಗಳನ್ನು ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ ಚರ್ಚಿಸಬಾರದು ಎನ್ನುವುದಾದರೆ, “ನಾನು ಇಲ್ಲಿ ಕೂರುವ ಅಗತ್ಯವೇ ಇಲ್ಲ” ಎಂದು ಹೇಳಿದ ಅವರು, ಈ ರೀತಿಯ ಸಭೆಯಲ್ಲಿ ನಾನು ಇರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಸಭೆಯಿಂದ ಎದ್ದು ಹೊರನಡೆದರು.
ಇದನ್ನೂ ಓದಿ: ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಭಾರತ ಪ್ರವಾಸ : ವೇಳಾಪಟ್ಟಿ ಪ್ರಕಟ
ರಾಜಕೀಯ ವಲಯದಲ್ಲಿ ಚರ್ಚೆ: ಈ ಘಟನೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸಾರ್ವಜನಿಕ ಆರೋಗ್ಯ ಸೇವೆಗಳ ಸ್ಥಿತಿ ಮತ್ತು ಆಡಳಿತಾತ್ಮಕ ಜವಾಬ್ದಾರಿಗಳ ಕುರಿತು ಪ್ರಶ್ನೆಗಳು ಉದ್ಭವಿಸಿವೆ. ಸಭೆಯ ನಂತರ ಅಧಿಕಾರಿಗಳಿಂದ ಅಧಿಕೃತ ಸ್ಪಷ್ಟನೆ ಹೊರಬರುವ ನಿರೀಕ್ಷೆಯಿದೆ.