ಬಾಗಲಕೋಟೆ: ಟಿಪ್ಪು ಜಯಂತಿ ಕಾರ್ಯಕ್ರಮ ಹಿನ್ನಲೆ ತಾಲೂಕಿನ ಹೊಸೂರು ಗ್ರಾಮದಲ್ಲಿ ಮಂಗಳವಾರದಂದು ಕಟ್ಟಿದ್ದ ಹಸಿರು ರಿಬ್ಬನ್ ಹರಿದು ಹಾಕಿದ್ದಕ್ಕೆ ಒಂದೇ ಕೋಮಿನ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದ ಘಟನೆ ಪರಿಣಾಮ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ 40 ಜನರ ಮೇಲೆ ಸ್ವಯಂ ಪ್ರಕರಣ ದಾಖಲಿಸಿಕೊಂಡ ವರದಿಯಾಗಿದೆ.
ಪ್ರತಿ ವರ್ಷದಂತೆ ಹೊಸೂರಿನಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲಾಗುತ್ತಿತ್ತು. ಎರಡು ಗುಂಪುಗಳಾಗಿ ಜಯಂತಿ ಆಚರಣೆ ಇಲ್ಲಿ ನಡೆಯುತ್ತಿದ್ದವು. ರಿಬ್ಬನ್ ಹರಿದ ಪರಿಣಾಮ ಒಂದು ಗುಂಪಿನ ವ್ಯಕ್ತಿಯೇ ಕಾರಣವೆಂದು ತಿಳಿದು ಮಂಗಳವಾರ ರಾತ್ರಿ 10.30ರ ಸುಮಾರಿಗೆ ಹೊಸೂರಿನ ಬನಶಂಕರಿ ದೇವಸ್ಥಾನ ಹತ್ತಿರದ ರಸ್ತೆಯಲ್ಲಿ ಒಂದೇ ಕುಟುಂಬದ ಮೂವರು ಸೇರಿದಂತೆ ಕೆಲವರ ಮೇಲೆ ಹಲ್ಲೆ ನಡೆದಿದೆ.
ಕಾರಣ: ಮೂರ‍್ನಾಲ್ಕು ವರ್ಷಗಳಿಂದ ಅಂಜುಮನ್ ಸಂಸ್ಥೆಯ ಲೆಕ್ಕಪತ್ರ ಕೇಳಿದ ವಿಚಾರಕ್ಕೆ ಮನಸ್ತಾಪ ಆರಂಭವಾಗಿತ್ತು. ಇದರ ಪರಿಣಾಮ ಎರಡು ಗುಂಪುಗಳ ಮಧ್ಯೆ ಹೊಡೆದಾಟ ನಡೆಯುವಲ್ಲಿ ಕಾರಣವಾಗಿದೆ.
40 ಜನರ ಮೇಲೆ ಪ್ರಕರಣ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಗುಂಪುಗಳ ಮಧ್ಯೆ 40 ಜನರ ಮೇಲೆ ಶಾಂತಿ ಕದಡುವ ಕಾರಣಕ್ಕೆ ಸ್ವಯಂ ಪ್ರಕರಣ ದಾಖಲು ಮಾಡಿಕೊಂಡಿರುವ ಬನಹಟ್ಟಿ ಪೊಲೀಸ್ ಠಾಣೆಯು ಪ್ರಕರಣದ ಕುರಿತು ಅತ್ಯಂತ ಸೂಕ್ಷ್ಮವಾಗಿ ಹೆಜ್ಜೆಯಿಡುತ್ತಿದೆ. ಪಿಎಸ್‌ಐ ಶಾಂತಾ ಹಳ್ಳಿ ಸೇರಿದಂತೆ ಪೊಲೀಸ್ ತಂಡ ಹೊಸೂರಿನಲ್ಲಿಯೇ ಬಿಡಾರ ಹೂಡಿದ್ದು, ಶಾಂತಿ ಭಂಗ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ಯಥಾಸ್ಥಿತಿಯಲ್ಲಿದ್ದು, ದೈನಂದಿನ ಕಾರ್ಯದಲ್ಲಿ ಜನರಿದ್ದಾರೆ.
