ಶಿವಮೊಗ್ಗ : ಆಗುಂಬೆ ಘಾಟಿಯ ಐದನೇ ತಿರುವಿನಲ್ಲಿ ಭಾರೀ ಪ್ರಮಾಣದಲ್ಲಿ ಧರೆ ಕುಸಿದಿದ್ದು, ವಾಹನದ ಮೇಲೆ ಮರ ಬಿದ್ದ ಪರಿಣಾಮ ವಾಹನ ಸಂಚಾರ ಸ್ಥಗಿತವಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯ ಐದನೇ ತಿರುವಿನಲ್ಲಿ ಭೂ ಕುಸಿತ ವಾಗಿದ್ದು, ರಸ್ತೆ ಮೇಲೆ ಧರೆಯ ಮಣ್ಣು ಕುಸಿದು ಬಿದ್ದಿದೆ.
ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಗೂಡ್ಸ್ ವಾಹನ ಮೇಲೆ ಮರ ಬಿದ್ದಿದೆ. ಅದೃಷ್ಟವಶಾತ್ ಚಾಲಕ ಪಾರಾಗಿದ್ದಾರೆ. ಇನ್ನು ಟ್ರಾಫಿಕ್ ಜಾಮ್ ಕೂಡ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಮಣ್ಣಿನ ತೆರವು ತಡವಾಗುವ ಕಾರಣದಿಂದ ರಾತ್ರಿ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ಬಂದ್ ಆಗಲಿದೆ. ತೆರವು ಕಾರ್ಯಾಚರಣೆಗೆ ಮಳೆ ಅಡ್ಡಿ ಮಾಡುತ್ತಿದ್ದು ಸಂಚಾರ ಸಂಪೂರ್ಣ ಬಂದ್ ಆಗುವ ಸಾಧ್ಯತೆ ಇದೆ.