Home ನಮ್ಮ ಜಿಲ್ಲೆ ರಾಮನಗರ ರಾಮನಗರ: 36.2 ಎಕರೆ ಜಮೀನು, ನಿಖಿಲ್‌ಗೆ ಸವಾಲು!

ರಾಮನಗರ: 36.2 ಎಕರೆ ಜಮೀನು, ನಿಖಿಲ್‌ಗೆ ಸವಾಲು!

0

ರಾಮನಗರ ಎಚ್.ಡಿ.ಕುಮಾರಸ್ವಾಮಿ ಕುಟುಂಬದ ಕರ್ಮಭೂಮಿ. ಈಗ ಇಲ್ಲಿರುವ ಜಮೀನಿನ ವಿಚಾರದಲ್ಲಿ ಮಾಜಿ ಸಿಎಂ, ಹಾಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಸವಾಲು ಹಾಕಲಾಗಿದೆ.

“ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯಡಿ ಸ್ವಾದೀನಪಡಿಸಿಕೊಳ್ಳಲು ಉದ್ದೇಶಿಸಿರುವ ಪ್ರದೇಶದಲ್ಲಿ ತಮ್ಮ ಜಮೀನಿಲ್ಲ, ಇದ್ದರೆ ಬಡವರಿಗೆ ಹಂಚುತ್ತೇನೆ ಎಂದಿರುವ ನಿಖಿಲ್ ಕುಮಾರಸ್ವಾಮಿ ಅವರು ವಾಸ್ತವವಾಗಿ ತಮ್ಮ ಕುಟುಂಬದ ಒಡೆತನದಲ್ಲಿ 36.2 ಎಕರೆ ಜಮೀನು ಹೊಂದಿದ್ದಾರೆ, ಅದನ್ನು ನಮ್ಮ ಪ್ರಾಧಿಕಾರಕ್ಕೆ ನೀಡಿದರೆ ನಮ್ಮಿಂದಲೇ ಬಡವರಿಗೆ ಹಂಚಿಕೆ ಮಾಡುತ್ತೇವೆ” ಎಂದು ಗ್ರೇಟರ್ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್ ಸವಾಲು ಹಾಕಿದ್ದಾರೆ.

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, “ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಜಮೀನು ಬಿಡದಿ ಹೋಬಳಿಯ ಹೊಸೂರು ಹಾಗೂ ಬನ್ನಿಗಿರಿ ಗ್ರಾಮಗಳಲ್ಲಿ ಇರುವುದು ಸತ್ಯ. ಅವರು ತಮ್ಮ ಜಮೀನು ಭೂಸ್ವಾಧೀನವಾದಲ್ಲಿ ಕೇತಗಾನಹಳ್ಳಿ ನಿವಾಸಕ್ಕೆ ನೋಟೀಸ್ ಸೇರಿದಂತೆ ಎಲ್ಲ ದಾಖಲಾತಿಗಳನ್ನು ನೀಡುವಂತೆ ಪ್ರಾಧಿಕಾರಕ್ಕೆ ಮನವಿಯನ್ನೂ ಸಹ ಮಾಡಿದ್ದಾರೆ” ಎಂದರು.

“ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಹಾಗೂ ಅವರ ಮಗ ನಿಖಿಲ್ ಒಟ್ಟು 36.2 ಎಕರೆ ಜಮೀನು ಹೊಂದಿದ್ದಾರೆ. ಹೊಸೂರು ಗ್ರಾಮದ ಸರ್ವೆ ನಂ. 26ರಲ್ಲಿ ನಿಖಿಲ್ 4 ಎಕರೆ ಜಮೀನು ಹೊಂದಿದ್ದು, ಲಕ್ಷ್ಮಿದೇವಮ್ಮ ಎನ್ನುವರಿಂದ ನೋಂದಣಿ ಮಾಡಿಸಿಕೊಂಡಿರುವುದಾಗಿ ಹೇಳಿದ್ದಾರೆ” ಎಂದು ತಿಳಿಸಿದರು.

“ಅನಿತಾ ಕುಮಾರಸ್ವಾಮಿ ಅವರು ಬನ್ನಿಗಿರಿ ಗ್ರಾಮದ ಸರ್ವೆ ನಂ. 194/3ರಲ್ಲಿ 1.12 ಎಕರೆ, 195/2ರಲ್ಲಿ 2.4 ಎಕರೆ, 196/2ರಲ್ಲಿ 2.6 ಎಕರೆ, ಹೊಸೂರು ಗ್ರಾಮದ ಸರ್ವೆ ನಂ. 408ರಲ್ಲಿ 4 ಎಕರೆ, 440ರಲ್ಲಿ 3.24 ಎಕರೆ, 438ರಲ್ಲಿ 4 ಎಕರೆ, 362ರಲ್ಲಿ 7.34 ಎಕರೆ, 247ರಲ್ಲಿ 5.14 ಎಕರೆ, 361/2ರಲ್ಲಿ 2.36 ಎಕರೆ ಜಮೀನು ಹೊಂದಿದ್ದು, ವಿನಯ್‍ಗೌಡ ಎಂಬುವರಿಂದ ಎಸ್‍ಪಿಎ ಮೂಲಕ ಅಧಿಕಾರ ನೀಡಿ ಹಿಂಪಡೆದುಕೊಂಡಿದ್ದು, ಈ ಜಮೀನುಗಳು ಸ್ವಾಧೀನವಾದರೆ ತಮಗೆ ದಾಖಲಾತಿ ನೀಡುವಂತೆ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದಾರೆ” ಎಂದರು.

“ಬಿಡದಿಯ ಕೇತಗಾನಹಳ್ಳಿಯ ತೋಟದ ಮನೆ ವಿಳಾಸಕ್ಕೆ ನೀಡಬೇಕೆಂದು 2025ರ ಮಾರ್ಚ್ 25ರಂದೇ ನಿಖಿಲ್ ಹಾಗೂ ಅನಿತಾ ಕುಮಾರಸ್ವಾಮಿ ಅವರು, ಪ್ರಾಧಿಕಾರ ಮಾ.23ರಂದು ಪ್ರಾಧಿಕಾರ ಭೂಸ್ವಾಧೀನ ಅಧಿಸೂಚನೆ ಹೊರಡಿಸಿದ ಎರಡೇ ದಿನದಲ್ಲಿ ಮನವಿ ಸಲ್ಲಿಸಿದ್ದಾರೆ, ಭೂ ಸ್ವಾಧೀನಕ್ಕೆ ಆಕ್ಷೇಪಣೆಯನ್ನೂ ಸಹ ಅವರು ಸಲ್ಲಿಸಿಲ್ಲ ಎಂದರೆ ಪರಿಹಾರಕ್ಕೆ ಅರ್ಹರು ಎಂದೇ ಅರ್ಥ ಹಾಗಾಗಿ ಅವರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ” ಎಂದು ಟಾಂಗ್ ನೀಡಿದರು.

“ಯೋಜನೆಯ ವ್ಯಾಪ್ತಿಗೆ ಒಳಪಡುವ 9 ಗ್ರಾಮಗಳ 1142 ಭೂ ಮಾಲೀಕರು 3061 ಹಿಸ್ಸಾಗಳ 2248.38 ಎಕರೆ ಜಮೀನು ಭೂಸ್ವಾದೀನ ಕೈಬಿಡುವಂತೆ ಆಕ್ಷೇಪಣೆ ಸಲ್ಲಿಕೆ ಮಾಡಿದ್ದಾರೆ, ಇವರ ಪೈಕಿ ನಿಖಿಲ್ ಹಾಗೂ ಅನಿತಾ ಅವರುಗಳು ಆಕ್ಷೇಪಣೆ ಸಲ್ಲಿಕೆ ಮಾಡಿಲ್ಲ, ನಿಯಮಾನುಸಾರ ಆಕ್ಷೇಪಣೆ ಸಲ್ಲಿಕೆ ಮಾಡಿರುವ ರೈತರ ಅರ್ಜಿಗಳ ವಿಚಾರಣೆ ನಡೆಸಲಾಗಿದೆ, ಭೂಸ್ವಾಧೀನಕ್ಕೆ ಆಕ್ಷೇಪಣೆ ಇಲ್ಲವೆಂದೇ ಪರಿಗಣಿಸಿ, ಪರಿಹಾರದ ಮೊದಲನೇ ಚೆಕ್ ಅನ್ನು ನಿಖಿಲ್ ಹಾಗೂ ಅನಿತಾ ಕುಮಾರಸ್ವಾಮಿ ಅವರಿಗೆ ನೀಡುತ್ತೇವೆ” ಎಂದರು.

NO COMMENTS

LEAVE A REPLY

Please enter your comment!
Please enter your name here

Exit mobile version