ರಾಮನಗರ ಜಿಲ್ಲೆಯಲ್ಲಿ ಕಳೆದ 18 ವರ್ಷಗಳ ನಿರಂತರ ಹೋರಾಟಕ್ಕೆ ಜಯ ದೊರೆತಿದೆ. ಇಂಟಿಗ್ರೇಟೆಡ್ ಸ್ಮಾರ್ಟ್ ಸಿಟಿ ಯೋಜನೆಗೆ ಭೂ ಸ್ವಾಧೀನಗೊಂಡ ರೈತರ ಭೂಮಿಗೆ ಫಲಸಿಕ್ಕಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ನ್ಯಾಯಕೊಟ್ಟಿದ್ಧಾರೆ. ಬೈರಮಂಗಲ ಮತ್ತು ಕಂಚಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರ ಪರವಾಗಿ ಇದನ್ನು ಸ್ವಾಗತಿಸುತ್ತೇವೆ ಎಂದು ರೈತ ಮುಖಂಡ ಹೊಸೂರು ರಾಜಣ್ಣ ತಿಳಿಸಿದರು.
ಬಿಡದಿ ಹೊರವಲಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “2006ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಈ ಯೋಜನೆಯನ್ನು ಘೋಷಿಸಿದರು. ಅವರು ಯಾಕೆ ಘೋಷಣೆ ಮಾಡಿದರು ಗೊತ್ತಿಲ್ಲ. ಅಂದು ಬೆಂಗಳೂರಿಗೆ ದೂರದಲ್ಲಿತ್ತು. ನಾವು ಹೋರಾಟ ನಡೆಸಿ ನ್ಯಾಯಾಲಯದ ಮೆಟ್ಟಿಲೇರಿದೆವು” ಎಂದರು.
“ಬಳಿಕ ಇದ್ದಕ್ಕಿದ್ದಂತೆ ಯೋಜನೆ ಕೈ ಬಿಟ್ಟು ಭೂಮಿ ರೆಡ್ ಜೋನ್ ಎಂದು ಹೇಳಿ ಹೋದರು. ನಂತರ ನಾವು ಸಾಕಷ್ಟು ಹೋರಾಟ ಮಾಡಿದರೂ ಪ್ರಯೋಜನವಾಗಲಿಲ್ಲ. ಬೈರಮಂಗಲ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಆಗಲಿಲ್ಲ. ಮತ್ತೆ ಕುಮಾರಸ್ವಾಮಿ ಸಿಎಂ ಆದಾಗ ಯೋಜನೆ ಮಾಡುತ್ತೇನೆ ಎಂದಿದ್ದರು. ಯಾರೂ ಯೋಜನೆಗೆ ಪೂರ್ಣರೂಪ ನೀಡಲು ಮುಂದಾಗಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ 1 ಸಾವಿರ ಎಕರೆ ಭೂ ಸ್ವಾಧೀನ ಮಾಡಿಕೊಂಡಾಗ ಸರಿಯಾದ ಪರಿಹಾರ ನೀಡಲಿಲ್ಲ. ಈ ಬಗ್ಗೆ ಹೋರಾಟ ನಡೆಸಿದೆವು. ಬಾಲಕೃಷ್ಣ ಚುನಾವಣೆ ಸಮಯದಲ್ಲಿ ಈ ಯೋಜನೆಯ ಸಮಸ್ಯೆ ಪರಿಹರಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದರು. ಇದೀಗ ಅದನ್ನು ಪೂರ್ಣಗೊಳಿಸಿದ್ದಾರೆ” ಎಂದು ಶಾಸಕ ಎಚ್.ಸಿ.ಬಾಲಕೃಷ್ಣಗೆ ಕೃತಜ್ಞತೆ ಸಲ್ಲಿಸಿದರು.
“ಸರ್ಕಾರದ ಗಮನ ಸೆಳೆಯುವ ಹೋರಾಟ ನನ್ನ ನೇತೃತ್ವದಲ್ಲಿ ರೈತರು ಮಾಡಿದ್ದರು. ಡಿ.ಕೆ.ಶಿವಕುಮಾರ್, ಎಚ್.ಸಿ.ಬಾಲಕೃಷ್ಣ ಎಲ್ಲರೂ ನ್ಯಾಯ ಕೊಡಿಸುವುದಾಗಿ ತಿಳಿಸಿದರು, ಮಾಜಿ ಸಂಸದ ಡಿ.ಕೆ.ಸುರೇಶ್ ಸಹ ನಮಗೆ ಸ್ಪಂದಿಸಿದ್ದಾರೆ. ನಮ್ಮ 18 ವರ್ಷದ ಹೋರಾಟಕ್ಕೆ ನ್ಯಾಯ ದೊರಕಿದೆ. ಸಣ್ಣಪುಟ್ಟ ಲೋಪ ಬಂದರೆ ಮಾತಾಡಿ ಸರಿಪಡಿಸುತ್ತೇವೆ. ಹೋರಾಟಗಾರರು ಗೊಂದಲ ಮಾಡಿದರು. ರೈತರಲ್ಲಿ ಸುಳ್ಳು ಸುದ್ದಿ ಹಬ್ಬಿಸಿದರು. ನಾವು ಅವರ ತಂತ್ರಗಳಿಗೆ ಹೆದರದೆ ಸರ್ಕಾರದ ಗಮನ ಸೆಳೆಯುವ ಹೋರಾಟ ಮಾಡಿದೆವು ಅದಕ್ಕೆ ಜಯ ದೊರೆತಿದೆ. ಸ್ಥಳೀಯರಿಗೆ ಉದ್ಯೋಗ ದೊರೆಯಲಿದೆ” ಎಂದರು.
“ಶೇ.35ರಷ್ಟು ರೈತರು ಜಮೀನು ಮಾರಿ ಕೊಂಡಿದ್ದಾರೆ. ರಿಯಲ್ ಎಸ್ಟೇಟ್‍ನವರು ಬೇಕಾಬಿಟ್ಟಿ ಬೆಲೆಗೆ ಭೂಮಿ ಖರೀದಿ ಮಾಡುತ್ತಿದ್ದರು ಆದರೆ, ಇದೀಗ ನ್ಯಾಯ ದೊರೆತಿದೆ. ಕಳೆದುಕೊಂಡ ಭೂಮಿಗೆ ಒಳ್ಳೆಯ ಬೆಲೆ ಸಿಗುತ್ತಿದೆ ಇದಕ್ಕೆ ಕಾರಣವಾದ ಡಿಸಿಎಂ ಡಿ.ಕೆ.ಶಿವಕುಮಾರ್, ಶಾಸಕ ಬಾಲಕೃಷ್ಣ, ಮಾಜಿ ಸಂಸದ ಡಿ.ಕೆ.ಸುರೇಶ್, ಜಿಬಿಡಿಎ ಅಧ್ಯಕ್ಷ ಗಾಣಕಲ್‍ನಟರಾಜು ಸೇರಿದಂತೆ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ” ತಿಳಿಸಿದರು.
ರೈತರಿಗೆ ಮಾಲೀಕರಾಗುವ ಅವಕಾಶ: “ಈ ಯೋಜನೆ ಸಂಪೂರ್ಣ ರೈತ ಪರವಾಗಿದೆ. ಯೋಜನೆಯಲ್ಲಿ ರೈತರಿಗೆ ಶೇ.50ರಷ್ಟು ಭೂಮಿ ಸಿಗಲಿದೆ. ಪರಿಹಾರ ಬೇಡ ಎನ್ನುವ ಭೂ ಮಾಲೀಕರಿಗೆ ಅಭಿವೃದ್ಧಿ ಹೊಂದಿದ ಭೂಮಿಯಲ್ಲಿ ಶೇಕಡ 50-50 ಹಾಗೂ ರಸ್ತೆ ಪಕ್ಕದಲ್ಲಿ ನಿರ್ಮಾಣಗೊಳ್ಳುವ ವಾಣಿಜ್ಯ ಕಟ್ಟಡಗಳಲ್ಲಿ ಶೇಕಡ 45-55ರ ಅನುಪಾತದಷ್ಟು ರೈತರಿಗೆ ಮಾಲೀಕರಾಗುವ ಅವಕಾಶವನ್ನು ಕಲ್ಪಿಸಿರುವುದು ನಿಜಕ್ಕೂ ಸಂತಸದ ಕೆಲಸ” ಎಂದರು.
“ನಾವು ಹೋರಾಟ ಮಾಡುವವರನ್ನು ತಡೆಯುವುದಿಲ್ಲ. ನಾವು 18 ವರ್ಷದಿಂದ ಹೋರಾಟ ಮಾಡುತ್ತಾ ಬಂದಿದ್ದೆವು. ಆಗ ಸುಮ್ಮನಿದ್ದವರು ಇದೀಗ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಅಭಿವೃದ್ಧಿ ಯೋಜನೆ ಘೋಷಣೆಯಾಗುತ್ತಿದ್ದಂತೆ ವಿರುದ್ಧವಾಗಿ ಹೋರಾಟ ಮಾಡುತ್ತಿದ್ದಾರೆ. ಕೆಲವರು ಮಾಡುತ್ತಿರುವ ಈ ಹೋರಾಟಕ್ಕೆ ಅರ್ಥವಿಲ್ಲ” ಎಂದು ಹೇಳಿದರು.