ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹೊಂಗನೂರಿನಲ್ಲಿ ನಿರ್ಮಾಣಗೊಂಡಿರುವ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಉದ್ಘಾಟಿಸಿದ್ದಾರೆ. ವೈದ್ಯರೊಬ್ಬರು ಈ ಶಾಲೆಯ ನಿರ್ಮಾಣಕ್ಕೆ 14 ಕೋಟಿ ರೂ. ದೇಣಿಗೆಯನ್ನು ನೀಡಿದ್ದಾರೆ. ಖಾಸಗಿ ಶಾಲೆಗೆ ಪೈಪೋಟಿ ನೀಡುವಂತೆ ಈ ಸರ್ಕಾರಿ ಶಾಲೆಯನ್ನು ನಿರ್ಮಾಣ ಮಾಡಲಾಗಿದೆ.
ಶ್ರೀಮತಿ ಚೆನ್ನಮ್ಮ ಮಂಚೇಗೌಡ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಶನಿವಾರ ಲೋಕಾರ್ಪಣೆ ಮಾಡಲಾಗಿದೆ. 50 ಕೊಠಡಿಗಳಿರುವ ಶಾಲೆಯಲ್ಲಿ 40 ಕಂಪ್ಯೂಟರ್‌ಗಳಿವೆ. ಗಣಿತ ಮತ್ತು ವಿಜ್ಞಾನ ಲ್ಯಾಬ್, ಡಿಜಿಟಲ್ ಬೋರ್ಡ್, ಸುಸಜ್ಜಿತ ಗ್ರಂಥಾಲಯ ಮತ್ತು ಕ್ರೀಡಾ ಪರಿಕರಗಳನ್ನು ಶಾಲೆ ಹೊಂದಿದೆ.
ಶಾಲೆಯನ್ನು ಬದಲಾಯಿಸಿದ ವೈದ್ಯ: ಗ್ರಾಮೀಣ ಭಾಗದ ಎಲ್ಲಾ ಸರ್ಕಾರಿ ಶಾಲೆಯಂತಯೇ ಈ ಶಾಲೆ ಸಹ ಇತ್ತು. ಆದರೆ ಡಾ.ಹೆಚ್.ಎಂ.ವೆಂಕಟಪ್ಪ ಶ್ರಮ, ದೇಣಿಗೆಯಿಂದ ಸುಸಜ್ಜಿತ, ಅತ್ಯಾಧುನಿಕ ವ್ಯವಸ್ಥೆ ಇರುವ ಸರ್ಕಾರಿ ಶಾಲೆ ಸ್ಥಾಪನೆಯಾಗಿದೆ.
ಹೊಸ ಕಟ್ಟಡ ನಿರ್ಮಾಣ, ಪರಿಕರಗಳನ್ನು ಒದಗಿಸಲು ವೈದ್ಯರು 14 ಕೋಟಿ ರೂ. ದೇಣಿಗೆ ನೀಡಿದ್ದಾರೆ. 1949 ರಿಂದ 1957ರ ತನಕ ಡಾ.ಹೆಚ್.ಎಂ.ವೆಂಕಟಪ್ಪ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಇಂದು ನನ್ನ ಕೆಲಸಕ್ಕೆ ಭದ್ರ ಬುನಾದಿ ಹಾಕಿದ್ದು ಇಲ್ಲಿಯ ಶಿಕ್ಷಕರು ಎಂದು ಅವರು ಹೇಳಿದ್ದಾರೆ.
ಸಾಮಾನ್ಯ ಕೃಷಿ ಕುಟುಂಬದಿಂದ ಬಂದ ನಾನು ಎಂಬಿಬಿಎಸ್, ಎಂಡಿ ತನಕ ವ್ಯಾಸಂಗ ಮಾಡಿದೆ. ಮಹಾತ್ಮ ಗಾಂಧಿ ಅವರ ಚಿಂತನೆಗಳಿಂದ ಪ್ರಭಾವಿತಗೊಂಡ ನಾನು ಈ ಶಾಲೆಯನ್ನು ಅಭಿವೃದ್ಧಿಗೊಳಿಸಿ ಗ್ರಾಮೀಣ ಭಾಗದ ಬಡ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಸಹಕಾರಿಯಾಗಲಿ ಎಂದು ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.
ಸರ್ಕಾರಿ ಸೇವೆಯಲ್ಲಿದ್ದ ಡಾ.ಹೆಚ್.ಎಂ.ವೆಂಕಟಪ್ಪ ಬಳಿಕ ಕಣ್ವ ಡಯೋಗ್ನಾಸ್ಟಿಕ್ ಪ್ರಾರಂಭಿಸಿದರು. ಈಗ ಕಣ್ವ ಫೌಂಡೇಶನ್ ಮೂಲಕವೇ ಶಾಲೆಯನ್ನು ಅಭಿವೃದ್ಧಿಗೊಳಿಸಲಾಗಿದೆ. 2022ರ ಜೂನ್‌ನಲ್ಲಿ ನಾಲ್ಕೂವರೆ ಎಕರೆ ಪ್ರದೇಶದಲ್ಲಿದ್ದ ಹಳೆಯ ಕಟ್ಟಡವನ್ನು ಒಡೆದು ಹಾಕಲಾಗಿತ್ತು. ಬಳಿಕ ಸುಸಜ್ಜಿತ ಶಾಲೆಯನ್ನು ನಿರ್ಮಿಸಲಾಗಿದೆ.
ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಇದನ್ನು ಬದಲಾವಣೆ ಮಾಡಲಾಗಿದ್ದು ಎಲ್‌ಕೆಜಿ/ ಯುಕೆಜಿಯಿಂದ ದ್ವಿತೀಯ ಪಿಯುಸಿ ತನಕ ಇಲ್ಲಿ ಈಗ ವ್ಯಾಸಂಗ ಮಾಡಬಹುದು. ಈ ಶಾಲೆ ಕನ್ನಡ ಮತ್ತು ಇಂಗ್ಲಿಶ್ ಎರಡೂ ಮಾಧ್ಯಮವನ್ನು ಹೊಂದಿದೆ. ಈ ವರ್ಷದ ಶೈಕ್ಷಣಿಕ ವರ್ಷದಲ್ಲಿಯೇ ಶಾಲೆಯಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭವಾಗಿತ್ತು. ಇಂದು ಅಧಿಕೃತವಾಗಿ ಶಾಲೆಯನ್ನು ಲೋಕಾರ್ಪಣೆ ಮಾಡಲಾಗಿದೆ.
ಈ ಭಾಗದಲ್ಲಿ ಶ್ರೀಮತಿ ಚೆನ್ನಮ್ಮ ಮಂಚೇಗೌಡ ಕರ್ನಾಟಕ ಪಬ್ಲಿಕ್ ಶಾಲೆ ಈಗಾಗಲೇ ಖ್ಯಾತಿಯನ್ನು ಪಡೆದಿದೆ. ವಿದ್ಯಾರ್ಥಿಗಳ ಸಂಖ್ಯೆ 150 ರಿಂದ 200ಕ್ಕೆ ಏರಿಕೆಯಾಗಿದೆ. ಸರ್ಕಾರಿ ಶಾಲೆಯಲ್ಲಿನ ಮಕ್ಕಳ ದಾಖಲಾತಿ ಕುಸಿಯುತ್ತಿರುವಾಗ ಈ ಶಾಲೆಯಲ್ಲಿ ಒಟ್ಟು 800 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಕೇವಲ 14 ಕೋಟಿ ದೇಣಿಗೆಯನ್ನು ಡಾ.ಹೆಚ್.ಎಂ.ವೆಂಕಟಪ್ಪ ನೀಡಿರುವುದು ಮಾತ್ರವಲ್ಲ ವಾರ್ಷಿಕ 10 ಲಕ್ಷ ರೂ. ದೇಣಿಗೆಯನ್ನು ನೀಡುತ್ತೇನೆ ಎಂದು ಹೇಳಿದ್ದಾರೆ. ಶಾಲೆಯಲ್ಲಿನ ಶಿಕ್ಷಕರಿಗೆ ಮಾಸಿಕ ನೀಡುವ 12,500 ರೂ. ಗೌರವ ಧನದ ಜೊತೆಗೆ 5 ಸಾವಿರ ರೂ.ಗಳನ್ನು ವೈದ್ಯರ ಕಡೆಯಿಂದ ನೀಡಲಾಗುತ್ತದೆ.