Home ನಮ್ಮ ಜಿಲ್ಲೆ ರಾಮನಗರ ರಾಮನಗರ: ಡಿಕೆ ಶಿವಕುಮಾರ್, ರೈತರ ನಡುವೆ ಮಾತಿನ ಚಕಮಕಿ!

ರಾಮನಗರ: ಡಿಕೆ ಶಿವಕುಮಾರ್, ರೈತರ ನಡುವೆ ಮಾತಿನ ಚಕಮಕಿ!

0

ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ ಶಿಪ್ ಸಭೆ ನಡೆಸಲು ಆಗಮಿಸುತ್ತಿರುವ ವಿಷಯ ತಿಳಿದು ಬಿಡದಿ ಉಪನಗರ ಯೋಜನೆ ವಿರೋಧಿಸಿ ಭೈರಮಂಗಲ, ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಬೈರಮಂಗಲ ಪಂಚಾಯಿತಿ ವ್ಯಾಪ್ತಿಯ ಬೈರಮಂಗಲ ಬನ್ನಿಗಿರಿ-ಮಂಡಲಹಳ್ಳಿ ಹಾಗೂ ಕಂಚುಗಾರನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕಂಚಗಾರನಹಳ್ಳಿ, ಕಂಚಗಾರನಹಳ್ಳಿ ಕಾವಲ್, ಕೆಂಪಯ್ಯಪಾಳ್ಯ, ಅರಳಾಳುಸಂದ್ರ, ಹೊಸೂರು, ಕೆಜಿ ಗೊಲ್ಲರಪಾಳ್ಯ, ಹಾಗೂ ಹಾರೋಹಳ್ಳಿ ತಾಲ್ಲೂಕು ಕಸಬಾ ಹೋಬಳಿಯ ವಡೆರಹಳ್ಳಿ ಗ್ರಾಮದ ಭಾಗಶಃ ಸೇರಿ ಒಟ್ಟು 9,600 ಎಕರೆ ಭೂಮಿಯನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೂ ಸಮಗ್ರ ಉಪನಗರ ನಿರ್ಮಾಣಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು.

ಎರಡು ಪಂಚಾಯಿತಿಯ ಜಮೀನಿನಲ್ಲಿ ಎರಡು ನದಿಗಳು ಋಷಭಾವತಿ ನದಿ ಮತ್ತು ಸುವರ್ಣಮುಕಿ ನದಿ ಹರಿಯುತ್ತಿರುತ್ತವೆ ಹಾಗೂ ಈ ಗ್ರಾಮಗಳಲ್ಲಿ 10ಕ್ಕೂ ಹೆಚ್ಚು ಕೆರೆಗಳನ್ನು ಹೊಂದಿರುತ್ತದೆ. ಈ ಜಮೀನು ಸಂಪೂರ್ಣ ಶೇಕಡ 90 ರಷ್ಟು ಭೂಮಿ ತೋಟಗಳಿಂದ ಕೂಡಿರುತ್ತದೆ ಮತ್ತು ಲಕ್ಷಾಂತರ ಮರ ಗಿಡಗಳನ್ನು ಹೊಂದಿದೆ.

ಇಲ್ಲಿ 2000 ಎಕರೆಗೂ ಹೆಚ್ಚು ಭೂಮಿಯಲ್ಲಿ ರೇಷ್ಮೆ ಬೆಳೆಯುತ್ತಿದ್ದಾರೆ ಹಾಗೂ ತಿಂಗಳಿಗೆ ಸುಮಾರು 6 ಲಕ್ಷಕ್ಕೂ ಅಧಿಕ ಲೀಟರ್ ಹಾಲನ್ನು ಬೆಂಗಳೂರು ಡೈರಿಗೆ ಸರಬರಾಜು ಮಾಡಲಾಗುತ್ತದೆ. ಇಲ್ಲಿನ ಜನರ ಮುಖ್ಯ ಉದ್ಯೋಗ ವ್ಯವಸಾಯ ಮತ್ತು ಹೈನುಗಾರಿಕೆಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ ಎಂದು ರೈತರು ಈ ವೇಳೆ ಆರೋಪಿಸಿದರು.

ಸ್ಥಳಕ್ಕೆ ಡಿಸಿಎಂ ಭೇಟಿ: ಇನ್ನು ಪ್ರತಿಭಟನಾ ಸ್ಥಳಕ್ಕೆ ಡಿ.ಕೆ.ಶಿವಕುಮಾರ್ ಆಗಮಿಸಿ ಪ್ರತಿಭಟನಾನಿರತರನ್ನು ಸಮಾಧಾನ ಪಡಿಸಲು ಮುಂದಾದರು. ಈ ವೇಳೆ ಮಾತನಾಡಿದ ಅವರು, “ಬಿಡದಿ ಟೌನ್ ಶಿಪ್ ನಿರ್ಮಾಣಕ್ಕೆ ತೀರ್ಮಾನ ಮಾಡಿದ್ದು ಕುಮಾರಸ್ವಾಮಿ ಅವರು. ಇದನ್ನು ನಾನು ಡಿನೋಟಿಫಿಕೇಷನ್ ಮಾಡಿ ಯಡಿಯೂರಪ್ಪ ಅವರಂತೆ ಜೈಲಿಗೆ ಹೋಗಲು ತಯಾರಿಲ್ಲ. ಕಾನೂನು ಚೌಕಟ್ಟಿನಲ್ಲಿ ರೈತರಿಗೆ ನೆರವಾಗಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ” ಎಂದು ಹೇಳಿದರು.

“ನಾನು ಹೊರಗಡೆಯಿಂದ ಬಂದವನಲ್ಲ. ನಾನು ಕೂಡ ನಿಮ್ಮ ಜಿಲ್ಲೆಯವನೇ. ಬಿಡದಿ ಕೈಗಾರಿಕಾ ಪ್ರದೇಶ ಮಾಡಿದಾಗ ಯಾವ ಸರ್ಕಾರ ಅಧಿಕಾರದಲ್ಲಿತ್ತು? ಎಂಬುದು ರೈತರಿಗೆ ತಿಳಿದಿದೆ. ಇದರಿಂದ 16 ಸಾವಿರ ಎಕರೆ ಭೂಮಿ ಹೋಯಿತು. ಟೊಯೋಟೊ ಸೇರಿದಂತೆ ಒಂದಷ್ಟು ಕಂಪನಿಗಳು ಈ ಭಾಗಕ್ಕೆ ಬಂದವು. ಈ ಹಿಂದೆ ಕೈಗಾರಿಕಾ ಪ್ರದೇಶವಾದಾಗ ನನ್ನದೂ ಸಹ 12 ಎಕರೆ ಜಮೀನು ಹೋಗಿದೆ. ಆಗ ಪರಿಹಾರವನ್ನು 8 ಲಕ್ಷಕ್ಕೆ ಮೀರಿ ನೀಡಿಯೇ ಇಲ್ಲ” ಎಂದರು.

“ನಿಮಗೆ ಉತ್ತಮ ಪರಿಹಾರ ನೀಡಲು ಸುಮಾರು 10 ಸಾವಿರ ಕೋಟಿ ರೂ. ಸಾಲ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ನಿಮ್ಮ ಒಂದು ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ. ಸ್ವಾಧೀನವಾಗಿರುವ ಭೂಮಿಯನ್ನು ಕಾನೂನು ಚೌಕಟ್ಟು ಮೀರಿ ಕೈ ಬಿಡುವ ಹಂತದಲ್ಲಿ ನಾನಿಲ್ಲ” ಎಂದು ತಿಳಿಸಿದರು.

ಶಾಸಕ ಬಾಲಕೃಷ್ಣ ಮಾತನಾಡಿ, “ಬಿಡದಿ ಉಪನಗರ ಯೋಜನೆಗೆ ರೂಪುಗೊಂಡಿದ್ದು 2007ರಲ್ಲಿ. ಆಗ ಯಾವುದೇ ಹೋರಾಟ ನಡೆಯಲಿಲ್ಲ. ಯೋಜನೆ ವ್ಯಾಪ್ತಿಯ 921 ಎಕರೆ ಭೂಮಿಯನ್ನು ಕೆಐಡಿಬಿಐ ಸ್ವಾಧೀನಪಡಿಸಿಕೊಂಡಾಗ, ನಾನು ಅದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದೆ. ಆಗ ನನಗೆ ರೈತರು ಸಾಥ್ ಕೊಡಲಿಲ್ಲ. ಈಗ ಯೋಜನೆ ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರಲ್ಲಿ ಎರಡು ಅಭಿಪ್ರಾಯವಿದೆ” ಎಂದರು.

“ಮಾಗಡಿ ತಾಲ್ಲೂಕು ವ್ಯಾಪ್ತಿಯ ಸೋಲೂರು ಹೋಬಳಿಯನ್ನು ನೆಲಮಂಗಲ ತಾಲ್ಲೂಕಿಗೆ ಸೇರಿಸಲು ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿರುವುದರಿಂದ ಯಾವುದೇ ಸಮಸ್ಯೆ ಇಲ್ಲ. ಅದು ಮಾಗಡಿ ತಾಲ್ಲೂಕಿನಲ್ಲಿದ್ದರೂ, ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿತ್ತು. ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸೋದು ಬೇಡ ಅಂತ ನಾನು ಹೇಳಿದ್ದೆ. ಆದರೆ, ಅಲ್ಲಿನ ಶಾಸಕರು ಸೇರಿಸುವಂತೆ ಒತ್ತಾಯ ಮಾಡಿದರು. ಆ ಮೇರೆಗೆ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ” ಎಂದು ತಿಳಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version