Home ನಮ್ಮ ಜಿಲ್ಲೆ ರಾಮನಗರ ರಾಮನಗರ: ಜೇಡಿ ಮಣ್ಣಿನ ಪರಿಸರ ಸ್ನೇಹಿ ಗಣಪನಿಗೆ ಭಾರೀ ಬೇಡಿಕೆ

ರಾಮನಗರ: ಜೇಡಿ ಮಣ್ಣಿನ ಪರಿಸರ ಸ್ನೇಹಿ ಗಣಪನಿಗೆ ಭಾರೀ ಬೇಡಿಕೆ

0

ಪಿ.ವೈ.ರವಿಂದ್ರ ಹೇರ್ಳೆ

ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನಲ್ಲಿ ಪರಿಸರ ಸ್ನೇಹಿ ಗಣಪನಿಗೆ ಭಾರೀ ಬೇಡಿಕೆ ಇದೆ. ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಂದಲೂ ಮಣ್ಣಿನ ಗಣಪತಿಯನ್ನು ಕೊಂಡು ವಿಶೇಷ ಪೂಜೆ ಸಲ್ಲಿಸಲಾಗುತ್ತಿದ್ದು ಜೇಡಿ ಮಣ್ಣಿನ ಪರಿಸರ ಸ್ನೇಹಿ ಗಣಪನಿಗೆ ಬೇಡಿಕೆ ಕಂಡುಬಂದಿದೆ.

ಆ.26 ಮತ್ತು 27 ರಂದು ಗೌರಿ ಮತ್ತು ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮಾಗಡಿ ಕಲಾವಿದರು ತಯಾರಿಸುವ ಮಣ್ಣಿನ ಗಣಪತಿಗೆ ಭಾರೀ ಬೇಡಿಕೆ ಇದ್ದು ಒಂದು ಅಡಿಯಿಂದ 15 ಅಡಿಯ ಬೃಹತ್ ಗಣೇಶ ಮೂರ್ತಿಯನ್ನು ಸಿದ್ಧಪಡಿಸಲಾಗುತ್ತಿದ್ದು 5 ತಲೆಮಾರುಗಳಿಂದ ಗಣಪತಿ ವಿಗ್ರಹ ತಯಾರಿಸುತ್ತಿರುವ ದಿ.ಎಂ.ಎನ್.ಮುದ್ದಣ್ಣನವರ ಕುಟುಂಬದವರು ಮುಂದುವರಿಸಿಕೊಂಡು ಬಂದಿದ್ದಾರೆ. ಕಲಾವಿದ ಎಂ.ಎಂ.ಉಮಾಶಂಕರ್ ಹಾಗೂ ಅವರ ಸಹೋದರರಾದ ನಟರಾಜು, ಸುರೇಶ್, ಮಲ್ಲಮ್ಮ ಹೇಮಲತಾ, ರೂಪ, ಸಹಾಯಕ ಲೋಕೇಶ್ ಸದಸ್ಯರುಗಳು ಬೇಡಿಕೆ ತಕ್ಕಂತೆ ವಿವಿಧ ಆಕೃತಿಯಲ್ಲಿ ಮಣ್ಣಿನ ಗಣಪತಿಯನ್ನು ತಯಾರಿಸುವ ಕಾಯಕವನ್ನು ಮುಂದುವರಿಸಿದ್ದಾರೆ.

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಇಲ್ಲಿಗೆ ಬಂದು ತಮಗೆ ಬೇಕಾದ ಆಕೃತಿಯಲ್ಲಿ ಮಣ್ಣಿನ ಗಣಪತಿಯನ್ನು ತಯಾರಿಸಿ ತೆಗೆದುಕೊಂಡು ಹೋಗುತ್ತಿರುವುದು ಇಲ್ಲಿನ ವಿಶೇಷವಾಗಿದೆ. ಬೇಡಿಕೆ ತಕ್ಕಂತೆ ವಿವಿಧ ಆಕೃತಿಯಲ್ಲಿ ಸುಂದರವಾದ ಗಣಪತಿಯನ್ನು ತಯಾರಿಸಿ ಕೊಡುವ ಕೆಲಸವನ್ನು ಮಾಡಿಕೊಂಡು ಬಂದಿದ್ದು ಈ ಬಾರಿ ರೂ. 500 ರೂಪಾಯಿಯಿಂದ ರೂ. 50 ಸಾವಿರ ಬೆಲೆ ಬಾಳುವ ಗಣಪತಿಗಳನ್ನು ತಯಾರಿ ಮಾಡಿ ಗಣಪತಿ ಹಬ್ಬಕ್ಕೆ ವಿಶೇಷ ಮೆರಗನ್ನು ಇಲ್ಲಿನ ಕಲಾವಿದರು ನೀಡುತ್ತಿದ್ದಾರೆ.

ಮೂರು ತಿಂಗಳಿಂದ ತಯಾರಿ: ಗಣಪತಿ ತಯಾರಿಸುವ ಮೂರು ತಿಂಗಳ ಮುಂಚಿತವಾಗಿಯೇ ಸಿದ್ಧತೆ ಆರಂಭಿಸಿ ಬಸವ ಜಯಂತಿಯಿಂದ ಮಣ್ಣನ್ನು ಸಿದ್ಧಪಡಿಸಿಕೊಳ್ಳುವ ಕೆಲಸ ಆರಂಭಿಸುತ್ತಾರೆ. ಮಾಗಡಿ ತಾಲ್ಲೂಕಿನ ವಿಶ್ವನಾಥಪುರ ಹಾಗೂ ಬಿಸ್ಕೂರು ಕೆರೆಯಿಂದ ಶುದ್ಧವಾದ ಜೇಡಿ ಮಣ್ಣನ್ನು ಹದಾ ಮಾಡಿಕೊಂಡು ಹುಲ್ಲುನಲ್ಲಿ ಬೇಕಾದ ಆಕೃತಿ ಮಾಡಿಕೊಂಡು ಗೋಣಿಚೀಲ, ಬಳಸಿಕೊಂಡು ಪರಿಸರ ಸ್ನೇಹಿ ಗಣಪತಿಯನ್ನು ತಯಾರಿ ಮಾಡಲಾಗುತ್ತಿದ್ದು ಪರಿಸರಕ್ಕೆ ಯಾವುದೇ ರೀತಿ ಹಾನಿಯಾಗದಂತೆ ಬಣ್ಣವನ್ನು ಬಳಸಲಾಗುತ್ತದೆ.

“ನೀರಿನಲ್ಲಿ ಮುಳುಗಿಸಿದ ಕೆಲವೇ ದಿನಗಳಲ್ಲಿ ಗಣಪತಿ ಕರಗಿ ಹೋಗುತ್ತದೆ ಇದರಿಂದ ಪರಿಸರಕ್ಕೂ ಮತ್ತು ಕೆರೆಗೂ ಯಾವುದೇ ಹಾನಿಯಾಗುವುದಿಲ್ಲ. ಪಿಒಪಿ ಗಣಪತಿ ತಯಾರಿ ಮಾಡುವುದರಿಂದ ಪರಿಸರಕ್ಕೆ ಹಾನಿಯಾಗಲಿದ್ದು ಗಣಪತಿ ನೀರಿನಲ್ಲಿ ಕರಗುವುದಿಲ್ಲ. ಅದನ್ನು ಒಡೆದು ಹಾಕುವ ಕೆಲಸ ಮಾಡಬೇಕು ನಾವು ಪರಿಸರ ಸ್ನೇಹಿ ಗಣಪತಿಯನ್ನೇ ತಯಾರಿ ಮಾಡುತ್ತಿದ್ದು ಯಾವುದೇ ಅಚ್ಚನ್ನು ಬಳಸದೆ ನಮಗೆ ಕೊಡುವ ಫೋಟೋ ನೋಡಿಯೇ ನಾವು ಇಲ್ಲಿಯವರೆಗೂ ಗಣಪತಿಯನ್ನು ತಯಾರು ಮಾಡುತ್ತಿದ್ದು ಮೂರು ತಿಂಗಳ ಮುಂಚಿತವಾಗಿ ಯಾರೂ ನಮಗೆ ಗಣಪತಿ ಬೇಡಿಕೆ ಕೊಡುತ್ತಾರೋ ಅವರಿಗೆ ಗಣಪತಿ ತಯಾರಿ ಮಾಡಿಕೊಡುತ್ತಿದ್ದೇವೆ” ಎಂದು ಕಲಾವಿದ ಉಮಾಶಂಕರ್ ತಿಳಿಸಿದ್ದಾರೆ.

ಕಲಾವಿದ ಉಮಾಶಂಕರ್ ಅವರ ಕೈಯಲ್ಲಿ ವಿವಿಧ ಆಕೃತಿಯ ಗಣಪತಿಗಳು ಅದರಲ್ಲಿ ವಿಶೇಷವಾಗಿ ಲಕ್ಷ್ಮೀ ನರಸಿಂಹ ಸ್ವಾಮಿ ಗಣಪ, ಮುದ್ಗಲ್ ಪುರಾಣ ಪ್ರಸಿದ್ಧ ಉಚ್ಚಿಷ್ಟ ಗಣಪತಿ. ಚಂದ್ರನ ಮೇಲೆ ಕುಳಿತಿರುವ ಗಣಪ, ಎಂಟು ಪ್ರಾಣಿಗಳನ್ನು ಒಳಗೊಂಡ ಗಣಪ, ವೆಂಕಟೇಶ್ವರ ಸ್ವಾಮಿ, ಬಸವಣ್ಣನ ಮೇಲೆ ಕುಳಿತಿರುವ ಗಣಪ, ಗರುಡನ ಮೇಲೆ ಕುಳಿತ ಗಣಪ, ಡಾ. ಶಿವಕುಮಾರ ಸ್ವಾಮೀಜಿ, ಶಿವ ಗಣಪ, ದುಷ್ಟರ ಸಂಹಾರ ಗಣಪ ಹೀಗೆ ಬೇಡಿಕೆ ತಕ್ಕಂತೆ ಗಣಪತಿಗಳನ್ನು ತಯಾರಿ ಮಾಡುತ್ತಿದ್ದು ವರ್ಷದಿಂದ ವರ್ಷಕ್ಕೆ ಮಣ್ಣಿನ ಗಣಪತಿಗೆ ಬೇಡಿಕೆ ಹೆಚ್ಚಾಗಿದ್ದು ಬೆಂಗಳೂರು, ರಾಮನಗರ, ತುಮಕೂರು ದೊಡ್ಡಬಳ್ಳಾಪುರ, ದೇವನಹಳ್ಳಿ, ಕೋಲಾರ, ಗೌರಿಬಿದನೂರು, ಆಂಧ್ರ ಪ್ರದೇಶಗಳು ಇಲ್ಲಿನ ಗಣಪತಿಗೆ ಹೆಸರುವಾಸಿಯಾಗಿದೆ.

ಆರೋಗ್ಯದ ಮೇಲೆ ಪರಿಣಾಮ: ಮಣ್ಣಿನ ಗಣಪತಿ ತಯಾರಿ ಮಾಡುವುದು ಅಷ್ಟು ಸುಲಭದ ವಿಷಯವಲ್ಲ. ಮಣ್ಣಿನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಆರೋಗ್ಯದ ಮೇಲು ಹೆಚ್ಚು ಪರಿಣಾಮ ಬೀರುತ್ತಿದ್ದು ಗಣಪತಿ ತಯಾರು ಮಾಡಲು ಕುಟುಂಬಸ್ಥರು ಬಿಟ್ಟರೆ ಬೇರೆ ಯಾರೂ ಕೂಡ ಈ ಕೆಲಸಕ್ಕೆ ಬರುತ್ತಿಲ್ಲ. ಮಣ್ಣಿನ ಉಷ್ಣತೆ ಹೆಚ್ಚು ಇರುವುದರಿಂದ ನಮ್ಮ ತಲೆಮಾರಿಗೆ ಈ ವೃತ್ತಿ ಮುಂದುವರಿಯಲಿದ್ದು ನಂತರ ನಮ್ಮ ಮಕ್ಕಳು ಇದನ್ನು ಮುಂದುವರಿಸಲು ಇಷ್ಟಪಡುತ್ತಿಲ್ಲ. ನಾವು ಆರೋಗ್ಯವಾಗಿ ಇರುವಷ್ಟು ದಿನ ಬೇಡಿಕೆ ತಕ್ಕಂತೆ ಗಣಪತಿ ತಯಾರಿ ಮಾಡುತ್ತಿದ್ದೇವೆ ಸರ್ಕಾರದಿಂದ ನಮಗೆ ಯಾವುದೇ ರೀತಿಯ ಸೌಲಭ್ಯವಾಗಲಿ ನಮ್ಮನ್ನು ಗುರುತಿಸುವ ಕೆಲಸವನ್ನು ಮಾಡುತ್ತಿಲ್ಲ. ತಾಲೂಕಿಗೆ ಹೆಸರು ಬರುವ ನಿಟ್ಟಿನಲ್ಲಿ ಗಣಪತಿ ತಯಾರಿ ಮಾಡುತಿದ್ದೇವೆ ಎಂದು ಕಲಾವಿದರಾದ ಉಮಾಶಂಕರ್ ನಟರಾಜು ಸುರೇಶ್ ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version