Home ನಮ್ಮ ಜಿಲ್ಲೆ ರಾಮನಗರ ರಾಮನಗರ ಹೆಸರು ಬಲಾದರೂ ಸಾರಿಗೆ ಸಮಸ್ಯೆ ಬದಲಾಗಿಲ್ಲ!

ರಾಮನಗರ ಹೆಸರು ಬಲಾದರೂ ಸಾರಿಗೆ ಸಮಸ್ಯೆ ಬದಲಾಗಿಲ್ಲ!

0

ಪಿ.ವೈ. ರವಿಂದ್ರ ಹೇರ್ಳೆ

ರಾಮನಗರ: ರಾಮನಗರ ಜಿಲ್ಲೆಯ ಹೆಸರನ್ನು ‘ಬೆಂಗಳೂರು ದಕ್ಷಿಣ ಜಿಲ್ಲೆ’ ಎಂದು ಬದಲಾಯಿಸಿದರೂ ಜಿಲ್ಲಾ ಕೇಂದ್ರಕ್ಕೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ಮತ್ತು ಜನಪ್ರತಿನಿಧಿಗಳು ವಿಫಲವಾಗಿದ್ದಾರೆ. ರಾಜಧಾನಿ ಬೆಂಗಳೂರಿಗೆ ಸಮೀಪದ ರಾಮನಗರದಿಂದ ಪ್ರತಿನಿತ್ಯ ಸಾವಿರಾರು ಮಂದಿ ಪ್ರಯಾಣ ಮಾಡುತ್ತಾರೆ. ಆದರೆ ಸಮರ್ಪಕ ಸಾರಿಗೆ ಬಸ್‌ ವ್ಯವಸ್ಥೆ ಇಲ್ಲದೇ ಪ್ರತಿನಿತ್ಯ ಪರದಾಡುವ ದುಸ್ಥಿತಿ ಇದೆ.

ರಾಮನಗರ, ಚನ್ನಪಟ್ಟಣ, ನಗರ ಮತ್ತು ಗ್ರಾಮೀಣರಿಗೆ ಸಾರಿಗೆ ಬಸ್‌ಗಳದ್ದೇ ದೊಡ್ಡ ಸಮಸ್ಯೆ ಆಗಿದೆ. ಎನ್.ಹೆಚ್- 275ರಲ್ಲಿ ಮೈಸೂರು, ಮಂಡ್ಯ, ಮದ್ದೂರಿನಿಂದ ಹೊರಟ ಬಸ್‌ಗಳು ಬಿಡದಿವರೆಗೆ ಹೆದ್ದಾರಿಯಲ್ಲಿ ಸಂಚರಿಸುತ್ತವೆ. ಇಲ್ಲಿ ಯಾವುದೇ ಟೋಲ್‌ ಪಾವತಿ ಇಲ್ಲ, ಕಣಮಿಣಕ್ಕಿ ಬಳಿ ಟೋಲ್‌ ಇರುವುದರಿಂದ ದಾಸಪ್ಪನದೊಡ್ಡಿ ಬಳಿ ಸರ್ವಿಸ್ ರಸ್ತೆಗೆ ಇಳಿದು ಬಿಡದಿ ಮಾರ್ಗವಾಗಿ ಸರ್ವಿಸ್ ರಸ್ತೆಯಲ್ಲೇ ಬಸ್‌ಗಳು ಸಂಚರಿಸುತ್ತವೆ. ಇದರಿಂದ ಚನ್ನಪಟ್ಟಣ, ರಾಮನಗರದ ಪ್ರಯಾಣಿಕರು ಗಂಟೆಗಟ್ಟಲೇ ನಿಲ್ದಾಣದಲ್ಲಿ ಬಸ್ಸಿಗೆ ಕಾಯಬೇಕು ಎಂಬುದು ನಾಗರೀಕರ ಅಳಲಾಗಿದೆ.

ನಾನ್ ಸ್ಟಾಪ್ ಉಪಟಳ: ಒಂದೆಡೆ ಬೈಪಾಸ್‌ ನಿಂದ ತೊಂದರೆಯಾಗುತ್ತಿದ್ದರೆ, ಮತ್ತೊಂದೆಡೆ ಬೆಂಗಳೂರು-ಮೈಸೂರು ನಡುವೆ ಪ್ರತಿನಿತ್ಯ ಸುಮಾರು 200ಕ್ಕೂ ಅಧಿಕ ತಡೆ ರಹಿತ ಸಾರಿಗೆ ಬಸ್‌ಗಳನ್ನು ಓಡಿಸುತ್ತಿದೆ. ಈ ಬಸ್‌ಗಳಲ್ಲಿ ಸಾರ್ವಜನಿಕರಿಂದ ಟೋಲ್ ಹಣ ವಸೂಲಿ ಮಾಡಿದರೂ ಬೈಪಾಸ್‌ನಲ್ಲಿಯೇ ಸಂಚರಿಸುತ್ತವೆ!

ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ವೇಗದೂತ ಬಸ್‌ಗಳಲ್ಲಿ ಸೀಟುಗಳು ಇರುವಷ್ಟು ಮಂದಿ ಮಾತ್ರ ಪ್ರಯಾಣ ಮಾಡುತ್ತಾರೆ. ಬೆಂಗಳೂರು ಬಿಟ್ಟರೆ ಮೈಸೂರುವರೆಗೂ ಪ್ರಯಾಣಿಕರು ಬಸ್ ಹತ್ತುವುದಾಗಲೀ ಇಳಿಯುವುದಾಗಲಿ ಇಲ್ಲ. ಇದರಿಂದ ಮಾರ್ಗ ಮಧ್ಯದ ಪ್ರಯಾಣಿಕರಿಗೂ ಅನುಕೂಲವಿಲ್ಲ, ಸಾರಿಗೆ ಸಂಸ್ಥೆಗೂ ಲಾಭವಿಲ್ಲ.

ಬೆಂಗಳೂರು- ಮೈಸೂರು ನಡುವೆ ಪ್ರತಿನಿತ್ಯ 30ಕ್ಕೂ ಹೆಚ್ಚು ರಾಜಹಂಸ, ಇವಿ ಪ್ಲಸ್, ಐರಾವತ ಬಸ್‌ಗಳು ಬೈಪಾಸ್‌ನಲ್ಲಿ ಸಂಚರಿಸುತ್ತವೆ. ಆದರೆ ಈ ಬಸ್‌ಗಳು ಸಹ ಖಾಲಿಯಾಗಿ ಸಂಚರಿಸಲು ಸಾರಿಗೆ ಸಂಸ್ಥೆಯೇ ಕಾರಣ ಎನ್ನಲಾಗುತ್ತಿದೆ. ತುರ್ತು ಕೆಲಸ ಇರುವವರು ಈ ಐಷಾರಾಮಿ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ಇದರಿಂದ ಸಾರಿಗೆ ಸಂಸ್ಥೆಗೂ ನಷ್ಟವಾಗುತ್ತಿದೆ. ಸಾರ್ವಜನಿಕರ ಅಭಿಪ್ರಾಯವಾಗಿದೆ.

ಇನ್ನೂ ಬಾರದ ಬಿಎಂಟಿಸಿ: ರಾಮನಗರ ಜನರ ಪಾಲಿಗೆ ಸಾರಿಗೆ ಬಸ್ ಸಮಸ್ಯೆ ಬಗೆಹರಿಯುವ ಯಾವುದೇ ಲಕ್ಷಣವಿಲ್ಲ. ರಾಮನಗರಕ್ಕೆ ಬಿಎಂಟಿಸಿ ಬಸ್ ಸಂಚಾರ ಬೇಕು ಎಂಬ ಬಹುದಿನಗಳ ಬೇಡಿಕೆ ಈವರೆಗೂ ಈಡೇರಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಗೆ ಮಾತ್ರ ಈ ಸೌಲಭ್ಯ ಕಲ್ಪಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಹೊತ್ತಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಬಿಎಂಟಿಸಿ ರಾಮನಗರಕ್ಕೆ ಬರಲೇ ಇಲ್ಲ. ಈಗಲಾದರೂ ಘಟಾನುಘಟಿ ನಾಯಕರು ಎಚ್ಚೆತ್ತು ರಾಮನಗರಕ್ಕೆ ಬಿಎಂಟಿಸಿ ಸಂಚಾರ ಆರಂಭಿಸಿ, ಜಿಲ್ಲೆಯ ಬಸ್‌ಗಳ ಸಮಸ್ಯೆ ಬಗೆಹರಿಸುವರೇ ಕಾದು ನೋಡಬೇಕಾಗಿದೆ.

ಕರ್ನಾಟಕದ ಸರ್ಕಾರ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಮರು ನಾಮಕರಣ ಮಾಡಿದೆ. ಬೆಂಗಳೂರು ನಗರದ ಅಕ್ಕಪಕ್ಕದ ಜಿಲ್ಲೆಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ಕೈಗೊಳ್ಳಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version