ಹುಬ್ಬಳ್ಳಿ : ಸಾರಿಗೆ ಸಂಸ್ಥೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲೆಯಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಬಸ್ ರಸ್ತೆಗಿಳಿಯಲಿಲ್ಲ, ಹುಬ್ಬಳ್ಳಿ – ಧಾರವಾಡ ಅವಳಿನಗರದಲ್ಲಿ ಬೇಂದ್ರೆ ಖಾಸಗಿ ಬಸ್‌ಗಳಿಗೆ ಪ್ರಯಾಣಿಕರು ಮುಗಿಬಿದಿದ್ದಾರೆ. ಸರ್ಕಾರಿ ಬಸ್‌ಗಳು ನಿಲ್ದಾಣದಲ್ಲಿದ್ದು, ಹೊರಗೆ ಬರುತ್ತಿಲ್ಲ.
ದೂರ ಮಾರ್ಗ, ನಗರ ಸಾರಿಗೆ, ಬಿಆರ್‌ಟಿಎಸ್ ಬಸ್ ಸೇರಿದಂತೆ ಯಾವ ಬಸ್‌ಗಳು ಮಂಗಳವಾರ ಸಂಚಾರ ನಡೆಸುತ್ತಿಲ್ಲ. ಕೆಲಸಕ್ಕೆ ಹಾಜರಾದ ಡ್ರೈವರ್ ಮತ್ತು ಕಂಡಕ್ಟರ್‌ಗಳು ಡಿಪೋದಿಂದ ಹೊಸೂರು ಬಸ್ ನಿಲ್ದಾಣ, ಗೋಕುಲ ಬಸ್ ನಿಲ್ದಾಣಕ್ಕೆ ಬಸ್ ತಂದು ನಿಲ್ಲಿಸಿದರು. ಆದರೆ ನಿಲ್ದಾಣದಿಂದ ಮಾತ್ರ ಯಾವುದೇ ಬಸ್ ಹೊರಗೆ ಬರಲಿಲ್ಲ.
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿರುವ ಅನಿರ್ಧಿಷ್ಟಾವಧಿ ಮುಷ್ಕರದ ವಿಷಯ ಗೊತ್ತಿಲ್ಲದ ಜನರು ಬಸ್ ನಿಲ್ದಾಣಕ್ಕೆ ಬಂದು ಪರದಾಡಿದರು.
ಬಸ್ ನಿಲ್ದಾಣಗಳಲ್ಲಿ ಸಾರಿಗೆ ಸಿಬ್ಬಂದಿ ಗುಂಪಾಗಿ ನಿಂತು ಕಾಲ ಕಳೆದರು. ಹೊಸೂರು ಬಸ್ ನಿಲ್ದಾಣ, ಗೋಕುಲ ಬಸ್ ನಿಲ್ದಾಣ, ನಗರದ ಪ್ರಮುಖ ಸಿಟಿ ಬಸ್ ನಿಲ್ದಾಣ, ನಿಲ್ದಾಣಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಿದ್ದು ಕಂಡು ಬಂದಿತು.

ರೋಗಿಗಳ ಪರದಾಟ: ಕಿಮ್ಸ್ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ಪ್ರಯಾಣಿಕರು ಪರದಾಡಿದರು. ಹಳ್ಳಿಯಿಂದ ರಾತ್ರಿ ಬಸ್‌ಗಳಲ್ಲಿ ನಗರಕ್ಕೆ ಬೆಳಗ್ಗೆ ಬಂದ ಜನರು ಅಲ್ಲಿಂದ ಆಸ್ಪತ್ರೆಗೆ ತೆರಳಲು ಸಂಕಷ್ಟ ಅನುಭವಿಸಿದರು. ಆಟೋಗಳಿಗೆ ದುಪ್ಪಟ್ಟು ಬೆಲೆ ತೆರಬೇಕಾಯಿತು.
ಹೊಸೂರು ಬಸ್ ನಿಲ್ದಾಣದಿಂದ ಕಿಮ್ಸ್‌ಗೆ ಒಬ್ಬರಿಗೆ 25 ರೂ. ದರ ಫಿಕ್ಸ್ ಮಾಡಿ ಆಟೋ ಚಾಲಕರು ಸಂಚಾರ ನಡೆಸಿದರು. ವಿದ್ಯಾರ್ಥಿಗಳು, ಬೆಳಗ್ಗೆ ಕಚೇರಿ ಕೆಲಸಕ್ಕೆ ಹೋಗುವ ನೌಕರರು, ಕಾರ್ಮಿಕರು ಬಸ್ ಇಲ್ಲದೇ ಪರದಾಡಿದರು.
ಬಸ್‌ನಲ್ಲಿ ವಾಕರಸಾಸಂ ಎಂಡಿ ಪ್ರಯಾಣ: ಮುಷ್ಕರ ಹಿನ್ನೆಲೆಯಲ್ಲಿ ಬಸ್ ಸಂಚಾರ ಪರಿಶೀಲನೆಗೆ ಬೆಳಗ್ಗೆ ಹೊಸೂರು ಬಸ್ ನಿಲ್ದಾಣಕ್ಕೆ , ಗೋಕುಲ ಬಸ್ ನಿಲ್ದಾಣಕ್ಕೆ ಧಾವಿಸಿದ ವಾಕರಸಾಸಂ ಎಂಡಿ ಪ್ರಿಯಾಂಗ ಪರಿಶೀಲನೆ ನಡೆಸಿದರು.
ಪ್ರಯಾಣಿಕರ ದಟ್ಟಣೆ ಅನುಸಾರ ನಿರ್ದಿಷ್ಟ ಮಾರ್ಗದಲ್ಲಿ ಬಸ್ ಓಡಿಸಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು. ಅಲ್ಲದೇ, ನಗರ ಸಾರಿಗೆ ಬಸ್ಸಿನಲ್ಲಿ ಹುಬ್ಬಳ್ಳಿಯಿಂದ ಧಾರವಾಡಕ್ಕೆ ಪ್ರಯಾಣಿಸಿ ಪ್ರಯಾಣಿಕರ ದಟ್ಟಣೆ ಪರಿಶೀಲಿಸಿದರು.
ಇತ್ತ ಎಂಡಿ ಪರಿಶೀಲನೆ ನಡೆಸುತ್ತಿದ್ದರೂ ನಗರ ಸಾರಿಗೆ ಬಸ್ ರಸ್ತೆಯಲ್ಲಿ ಕಂಡು ಬರಲಿಲ್ಲ. ಬೆಳಗ್ಗೆ 11ರ ನಂತರ ಮುಷ್ಕರ ಮತ್ತಷ್ಟು ಬಿರುಸು ಪಡೆಯಲಿದ್ದು, ಬಿಸಿ ಪ್ರಯಾಣಿಕರಿಗೆ ತಟ್ಟಲಿದೆ.