Home ನಮ್ಮ ಜಿಲ್ಲೆ Namma Metro: ಹಳದಿ ಮಾರ್ಗದ ಪ್ರಯಾಣಿಕರ ಸಂಖ್ಯೆ, ಬಿಎಂಆರ್‌ಸಿಎಲ್ ಲೆಕ್ಕಾಚಾರ ಉಲ್ಟಾ!

Namma Metro: ಹಳದಿ ಮಾರ್ಗದ ಪ್ರಯಾಣಿಕರ ಸಂಖ್ಯೆ, ಬಿಎಂಆರ್‌ಸಿಎಲ್ ಲೆಕ್ಕಾಚಾರ ಉಲ್ಟಾ!

0

ಬೆಂಗಳೂರು: ಭಾನುವಾರ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸೋಮವಾರ ರೈಲುಗಳ ವಾಣಿಜ್ಯ ಸಂಚಾರ ಆರಂಭವಾಗಿದೆ. ಮೊದಲ ದಿನವೇ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 16 ನಿಲ್ದಾಣಗಳ 19.15 ಕಿ.ಮೀ. ಮಾರ್ಗದಲ್ಲಿ ಮೂರು ರೈಲುಗಳು ಮಾತ್ರ ಸಂಚಾರವನ್ನು ನಡೆಸುತ್ತಿವೆ.

ಹಳದಿ ನಮ್ಮ ಮೆಟ್ರೋ ಮಾರ್ಗ ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವೆ ಸಂಪರ್ಕವನ್ನು ಕಲ್ಪಿಸುತ್ತದೆ. 25 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚಾರ ನಡೆಸಿದರೂ ಸಹ ಮೊದಲ ದಿನವೇ ಪ್ರಯಾಣಿಕರ ಸಂಖ್ಯೆಯಲ್ಲಿ ದಾಖಲೆ ನಿರ್ಮಾಣವಾಗಿದೆ.

ಸೋಮವಾರ ನಮ್ಮ ಮೆಟ್ರೋ ರೈಲು ಏರಿಕದ ಪ್ರಯಾಣಿಕರು ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದರು. ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ಕೊನೆಯ ರೈಲು ರಾತ್ರಿ 10.42ಕ್ಕೆ ಮತ್ತು ಆರ್.ವಿ.ರೋಡ್ ನಿಲ್ದಾಣದಿಂದ ಕೊನೆ ರೈಲು ರಾತ್ರಿ 11.55ಕ್ಕೆ ಸಂಚಾರ ನಡೆಸಿದೆ.

ಎಷ್ಟು ಪ್ರಯಾಣಿಕರ ಸಂಚಾರ: ಬಿಎಂಆರ್‌ಸಿಎಲ್ ಈ ಮಾರ್ಗದಲ್ಲಿ ಮೂರು ರೈಲುಗಳಲ್ಲಿ ಪ್ರತಿದಿನ 25,000 ಪ್ರಯಾಣಿಕರು ಸಂಚಾರ ನಡೆಸಲಿದ್ದಾರೆ ಎಂದು ಅಂದಾಜಿಸಿತ್ತು. ಆದರೆ ಈ ಲೆಕ್ಕಾಚಾರ ಉಲ್ಟಾ ಆಗಿದೆ.

ಸಾಮಾಜಿಕ ಜಾಲತಾಣದ ಮಾಹಿತಿ ಅನ್ವಯ ಸೋಮವಾರ ರಾತ್ರಿ 9 ಗಂಟೆಯ ತನಕ 57,200 ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ರಾತ್ರಿ 12 ಗಂಟೆಯ ತನಕ ಈ ಸಂಖ್ಯೆ 60,000 ದಾಟಿರಬಹುದು ಎಂದು ಅಂದಾಜಿಸಲಾಗಿದೆ.

ಸೋಮವಾರ ಎಷ್ಟು ಪ್ರಯಾಣಿಕರು ಮೆಟ್ರೋದಲ್ಲಿ ಸಂಚಾರ ನಡೆಸಿದ್ದಾರೆ? ಎಂದು ಬಿಎಂಆರ್‌ಸಿಎಲ್ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಮೊದಲ ದಿನವೇ ಉತ್ತಮ ಸ್ಪಂದನೆ ಸಿಕ್ಕಿದೆ ಎಂಬುದು ತಿಳಿಯುತ್ತಿದೆ.

ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮೆಟ್ರೋದಲ್ಲಿ ಸಂಚಾರ ನಡೆಸಿ ಪ್ರಯಾಣಿಕರ ಜೊತೆ ಮಾತುಕತೆ ನಡೆಸಿದರು. ಅಲ್ಲದೇ ಅವರು ಮೆಟ್ರೋದಲ್ಲಿಯೇ ಸೋಮವಾರ ಕಲಾಪಕ್ಕಾಗಿ ವಿಧಾನಸೌಧಕ್ಕೆ ಆಗಮಿಸಿದರು.

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮೆಟ್ರೋದಲ್ಲಿ ಪ್ರಯಾಣ ಮಾಡಿದರು. ಪ್ರಯಾಣಿಕರ ಜೊತೆ ಮಾತುಕತೆ ನಡೆಸಿದರು. ಮೆಟ್ರೋ ಸೇವೆಯನ್ನು ಹೇಗೆ ಉತ್ತಮ ಪಡಿಸಬಹುದು? ಎಂದು ಚರ್ಚಿಸಿದರು.

ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ರೈಲು ಓಡಿಸುವುದಾಗಿ ಬಿಎಂಆರ್‌ಸಿಎಲ್ ಹೇಳಿದೆ. ಆದರೆ ಸದ್ಯ ಚಾಲಕ ಸಹಿತ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. ಸದ್ಯ ಇರುವುದು 3 ರೈಲುಗಳು ಮಾತ್ರ. ಆದ್ದರಿಂದ 25 ನಿಮಿಷಕ್ಕೊಂದು ರೈಲು ಸಂಚಾರ ನಡೆಸುತ್ತಿದೆ.

ಬಿಎಟಿಎಂ, ಸಿಲ್ಕ್ ಬೋರ್ಡ್ ಜಂಕ್ಷನ್ ಟ್ರಾಫಿಕ್ ಕಿರಿಕಿರಿ ಇಲ್ಲದೇ ಜನರು ಸೋಮವಾರ ನಮ್ಮ ಮೆಟ್ರೋ ಮೂಲಕ ಎಲೆಕ್ಟ್ರಾನಿಕ್ ಸಿಟಿಗೆ ತಲುಪಿದರು. ಮಂಗಳವಾರ ಎಷ್ಟು ಪ್ರಯಾಣಿಕರ ಸಂಚಾರ ನಡೆಸಲಿದ್ದಾರೆ? ಎಂದು ಕಾದು ನೋಡಬೇಕಿದೆ.

ಸದ್ಯದ ವೇಳಾಪಟ್ಟಿ ಅನ್ವಯ ಆರ್‌.ವಿ.ರಸ್ತೆ-ಬೊಮ್ಮಸಂದ್ರ ನಡುವೆ ಸೋಮವಾರದಿಂದ ಶನಿವಾರದ ತನಕ ಬೆಳಗ್ಗೆ 6.30ಕ್ಕೆ ರೈಲು ಸಂಚಾರ ಆರಂಭ. ಭಾನುವಾರ ಬೆಳಗ್ಗೆ 7ಕ್ಕೆ ರೈಲು ಪ್ರಾರಂಭವಾಗುತ್ತವೆ. ಒಟ್ಟು ಪ್ರಯಾಣ ಸಮಯ ಒಂದು ದಿಕ್ಕಿಗೆ ಸುಮಾರು 35 ನಿಮಿಷ. ಬೆಳಗ್ಗೆ 6.30ರಿಂದ ಡೆಲ್ಟಾ ಎಲೆಕ್ಟ್ರಾನಿಕ್ಸ್‌ ಬೊಮ್ಮಸಂದ್ರದಿಂದ ಹಾಗೂ ಬೆಳಗ್ಗೆ 7.10ರಿಂದ ಆರ್.ವಿ. ರಸ್ತೆ ಮೆಟ್ರೋ ನಿಲ್ದಾಣದಿಂದ ಪ್ರತಿ 25 ನಿಮಿಷಕ್ಕೊಮ್ಮೆ ರೈಲುಗಳು ಸಂಚರಿಸಲಿವೆ.

NO COMMENTS

LEAVE A REPLY

Please enter your comment!
Please enter your name here

Exit mobile version