Home ನಮ್ಮ ಜಿಲ್ಲೆ ಕೊಪ್ಪಳ ಅಂಗನವಾಡಿಗಳಲ್ಲೂ ಮಾಂಟೆಸ್ಸರಿ ಶಿಕ್ಷಣ, ವಿಶೇಷತೆಗಳು

ಅಂಗನವಾಡಿಗಳಲ್ಲೂ ಮಾಂಟೆಸ್ಸರಿ ಶಿಕ್ಷಣ, ವಿಶೇಷತೆಗಳು

0

ದೇವರಾಜ ದೊಡ್ಡಮನಿ

ಸಂ.ಕ.ಸಮಾಚಾರ ಯಲಬುರ್ಗಾ (ಕೊಪ್ಪಳ): ರಾಜ್ಯದ 10 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಅ.19ರಿಂದ ಎಲ್‌‌ಕೆಜಿ-ಯುಕೆಜಿ ತರಗತಿಗಳು ಪ್ರಾರಂಭವಾಗುತ್ತಿವೆ. ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿ ಖಾಸಗಿ ಕಾನ್ವೆಂಟ್‌ಗಳತ್ತ ಪೋಷಕರು ಹೆಚ್ಚೆಚ್ಚು ವಾಲುತ್ತಿರುವುದನ್ನು ತಪ್ಪಿಸುವ ಹಾಗೂ ಪ್ರಾಥಮಿಕ ಹಂತದಲ್ಲೇ ಉತ್ತಮ ಶಿಕ್ಷಣ ದೊರೆಯಬೇಕೆಂಬ ದಿಸೆಯಲ್ಲಿ ರಾಜ್ಯ ಸರ್ಕಾರ ಅಂಗನವಾಡಿಗಳಲ್ಲೂ ಮಾಂಟೆಸ್ಸರಿ ಶಿಕ್ಷಣ ನೀಡಲು ಮುಂದಾಗಿದೆ.

ಕೊಪ್ಪಳ ಜಿಲ್ಲೆಯ 1960 ಅಂಗನವಾಡಿ ಪೈಕಿ 100 ಅಂಗನವಾಡಿ ಕೇಂದ್ರಗಳಲ್ಲಿ ಈ ಸೇವೆ ದೊರೆಯಲಿದೆ. ಕರ್ನಾಟಕದಲ್ಲಿ ಅಂಗನವಾಡಿ ಕೇಂದ್ರಗಳು ಸ್ಥಾಪನೆಯಾಗಿ 50 ವರ್ಷ ಗತಿಸಿದ್ದು, ಅದರ ನೆನಪಿಗಾಗಿ ಅ. 19ರಿಂದ ಸಾಧಕ-ಬಾಧಕಗಳನ್ನು ಅರಿಯುವ ಸಲುವಾಗಿ ಮೊದಲ ಹಂತದಲ್ಲಿ ರಾಜ್ಯದ 10 ಸಾವಿರ ಅಂಗನವಾಡಿಯಲ್ಲಿ ವ್ಯವಸ್ಥೆ ಜಾರಿಯಾಗಲಿದೆ. ಬಳಿಕ ಉಳಿದ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ ಕೆಜಿ-ಯುಕೆಜಿ ತರಗತಿಗಳು ಆರಂಭವಾಗಲಿವೆ.

ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಇಲಾಖೆಯು ಪಠ್ಯಕ್ರಮವನ್ನು ವಿನ್ಯಾಸಗೊಳಿಸಿದೆ. ಮಕ್ಕಳಿಗೆ ಅಗತ್ಯವಾದ ಪಠ್ಯ-ಪುಸ್ತಕ ಬ್ಯಾಗ್, ಶೂ, ಸಾಕ್ಸ್ ಮತ್ತು ಸಮವಸ್ತ್ರ ಒದಗಿಸಲಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತರಗತಿಗಳ ದೈನಂದಿನ ನಿರ್ವಹಣೆ ನೋಡಿಕೊಳ್ಳಲಿದೆ.

4ರಿಂದ 5 ವರ್ಷದ ಮಕ್ಕಳನ್ನು ಎಲ್‌ಕೆ‌ಜಿಗೂ, 5-6 ವರ್ಷದ ಮಕ್ಕಳನ್ನು ಯುಕೆಜಿಗೂ ಸೇರಿಸಿಕೊಳ್ಳಲಾಗುತ್ತದೆ. ಮೂರರಿಂದ ನಾಲ್ಕು ವರ್ಷದ ಮಕ್ಕಳು ಹಿಂದಿನಂತೆ ಹಾಲಿ ಇರುವ ಅಂಗನವಾಡಿಗಳಲ್ಲಿ ಮುಂದುವರೆಯಲಿದ್ದಾರೆ.

ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಜಿ-ಯುಕೆಜಿ ತರಗತಿಗಳನ್ನು ಪ್ರಾರಂಭಿಸುತ್ತಿರುವ ಸರ್ಕಾರ ಅವುಗಳಿಗೆ ಅಗತ್ಯವಿರುವ ಮೂಲ ಸವಲತ್ತುಗಳನ್ನೂ ನೀಡುತ್ತಿದೆ. ಸ್ವಂತ ಕಟ್ಟಡವಿರುವ ಅಂಗನವಾಡಿಗಳಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್‌ ಕೆಜಿ-ಯುಕೆಜಿ ಶಿಕ್ಷಣಕ್ಕೆ ಆಯ್ಕೆಯಾದ ಅಂಗನವಾಡಿ ಕೇಂದ್ರಗಳಲ್ಲಿ ಸ್ಮಾರ್ಟ್ ಕ್ಲಾಸ್, ಆಧುನಿಕ ಕಲಿಕಾ ಸಾಮಗ್ರಿ ಹಾಗೂ ಪದವೀಧರ ಶಿಕ್ಷಕರ ಸೇವೆ ದೊರೆಯಲಿದೆ.

ಈ ಕುರಿತು ಮಾತನಾಡಿದ ಪರಶುರಾಮ ಶೆಟ್ಟೆಪ್ಪನವರ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, “ಯಾವುದೇ ಖಾಸಗಿ ಕಾನ್ವೆಂಟ್‌ಗಳಿಗೆ ಕಡಿಮೆ ಇಲ್ಲದಂತೆ ಪೋಷಕರನ್ನು ಆಕರ್ಷಿಸುವ ರೀತಿ ಅಗತ್ಯ ಸವಲತ್ತುಗಳೊಂದಿಗೆ ಆಧುನಿಕ ಕೇಂದ್ರಗಳು ಆರಂಭವಾಗುತ್ತಿವೆ. ಇಲ್ಲಿ ಪದವಿ ಶಿಕ್ಷಣ ಮುಗಿಸಿದ ಕಾರ್ಯಕರ್ತರಿಗೆ ಮೊದಲ ಆದ್ಯತೆ, ಸ್ಮಾರ್ಟ್ ಕ್ಲಾಸ್, ಟಿವಿ ಸೌಲಭ್ಯ, ಪೌಷ್ಟಿಕ ಆಹಾರದ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಲು ತಯಾರಿ ಮಾಡಿಕೊಳ್ಳಲಾಗಿದೆ” ಎಂದು ಹೇಳಿದ್ದಾರೆ.

“ಇಂಗ್ಲಿಷ್ ಗೀಳು ತಪ್ಪಿಸಿ ಸರ್ಕಾರಿ ಶಾಲಾ ಶಿಕ್ಷಣ ವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಸರ್ಕಾರಿ ಅಂಗನವಾಡಿ ಕೇಂದ್ರಗಳಲ್ಲಿ ಮಾಂಟೆಸ್ಸರಿ ಮಾದರಿಯಲ್ಲಿ ಎಲ್‌ಜಿ-ಯುಕೆಜಿ ತರಗತಿಗಳನ್ನು ಪ್ರಾರಂಭಿಸುತ್ತಿದೆ” ಎಂದು ಬೆಟ್ಟದಪ್ಪ ಮಾಳೆಕೊಪ್ಪ, ಸಿಡಿಪಿಓ, ಯಲಬರ್ಗಾ ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version