ಮೈಸೂರು: ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ ಆಗಲೇಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದರು.
ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪೂಜ್ಯ ತಂದೆಯವರು (ಯಡಿಯೂರಪ್ಪ ಹೆಸರು ಹೇಳದೆ) ಹಿಂದೂಗಳನ್ನ ರಕ್ಷಣೆ ಮಾಡಿಲ್ಲ. ಹಿಂದೂಪರ ನಿರ್ಣಯ ತೆಗೆದುಕೊಳ್ಳಲಿಲ್ಲ, ಭ್ರಷ್ಟಾಚಾರ ಮಾಡಿದರು. ಈ ಫೈಲ್‌ಗಳನ್ನ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಇಟ್ಕೊಂಡು ಹೆದರಿಸಿದರು. ಪೂಜ್ಯ ತಂದೆಯವರ ಮಗ 2 ವರ್ಷಗಳ ಕಾಲ ಶಾಸಕರಾಗಿ ಸರ್ಕಾರದ ವಿರುದ್ಧ ಮಾತನಾಡಲಿಲ್ಲ. ಸಿದ್ದರಾಮಯ್ಯ ಹಿಂದೂ ವಿರೋಧಿ ಬಜೆಟ್ ಮಂಡಿಸಿದಾಗ ಸುದೀರ್ಘ ಬಜೆಟ್ ಕೊಟ್ಟರು ಅಂತ ಅಭಿನಂದನೆ ಸಲ್ಲಿಸಿದರು. ಆರ್‌ಸಿಬಿ ಕಾಲ್ತುಳಿತ ವಿಚಾರ ಬಂದಾಗ ಸದನದಲ್ಲಿ ಕೂರಲಿಲ್ಲ. ಡಿ.ಕೆ. ಶಿವಕುಮಾರ್ ಹೆದರಿಸಿದಾಗ ಇವರಿಬ್ಬರು ಮಾತನಾಡಲಿಲ್ಲ. ಈ ಕಾರಣಕ್ಕೆ ನಾಯಕತ್ವ ಬದಲಾಗಬೇಕು ಎಂದರು.
ರಾಜ್ಯದಲ್ಲಿರುವುದು ಮುಸ್ಲಿಂ ಪರವಾದ ಸರ್ಕಾರ. ಹಿಂದೂಗಳ ರಕ್ಷಣೆ, ಹಿಂದೂಗಳ ಅಭಿವೃದ್ಧಿಗೆ ಯೋಜನೆ ಇಲ್ಲ. ನಿರಂತರವಾಗಿ ಹಿಂದೂಗಳ ಮೇಲೆ ಹಲ್ಲೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರದಿಂದ ಬೀದರ್‌ವರೆಗೆ ಹಿಂದುತ್ವದ ಜಾಗೃತಿ ಮಾಡಲಾಗುವುದು ಎಂದು ಹೇಳಿದರು.
ಅಡ್ಜಸ್ಟ್ಮೆಂಟ್ ರಾಜಕಾರಣಿಗಳು ರಾಜ್ಯದಲ್ಲಿ ಮತ್ತೆ ಸಿಎಂ ಆದರೆ ಸಿದ್ದರಾಮಯ್ಯ ಸರ್ಕಾರಕ್ಕೆ ಯಾವುದೇ ವ್ಯತ್ಯಾಸವಿರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
