ಕೊಪ್ಪಳ: ಅಪ್ರಾಪ್ತ ತಂಗಿ ಮೇಲೆ ಅಣ್ಣನೇ ಅತ್ಯಾಚಾರಗೈದು ಮಗು ಜನಿಸುವಂತಾಗಿ ಕೌಟುಂಬಿಕ ಸಂಬಂಧಗಳಿಗೆ ಕಳಂಕ ತಂದ ಅನಾಗರಿಕ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
21 ವಯಸ್ಸಿನ ದುರುಳ ಅಣ್ಣ 17 ವರ್ಷದ ಒಡಹುಟ್ಟಿದವಳ ಮೇಲೆಯೇ ನಿರಂತರ ಅತ್ಯಾಚಾರ ಮಾಡಿದ್ದಾನೆ. ಕೆಲ ದಿನದ ಹಿಂದೆ ಹೊಟ್ಟೆ ನೋವಿನಿಂದ ಅಪ್ರಾಪ್ತೆ ಬಳಲಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.
ವೈದ್ಯರು ತಪಾಸಣೆ ಮಾಡಿದಾಗ, ಬಾಲಕಿ ಗರ್ಭಿಣಿಯಾಗಿರುವುದು ಗೊತ್ತಾಗಿದೆ. ಆಸ್ಪತ್ರೆಯಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ. ಬಾಲಕಿಯ ಅವಸ್ಥೆ ಕಂಡು ಇಡೀ ಕುಟುಂಬ ಆತಂಕಕ್ಕೆ ಒಳಗಾಗಿದೆ. ಬಾಲಕಿ ಪ್ರಜ್ಞೆ ಬಂದ ನಂತರ ಪೊಲೀಸರ ಮುಂದೆ ಅಣ್ಣನೇ ಅತ್ಯಾಚಾರ ಮಾಡಿದ ವಿಷಯ ಹೇಳಿದ್ದಕ್ಕೆ ಇಡೀ ಕುಟುಂಬಕ್ಕೆ ಗರ ಬಡಿದಂತಾಗಿದೆ.
ಈ ಕುರಿತು ಮಕ್ಕಳ ರಕ್ಷಣೆ ಕಾಯ್ದೆ(ಪೋಕ್ಸೋ)ಯಡಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಪ್ರಕರಣವನ್ನು ಕೊಪ್ಪಳ ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಿ, ತನಿಖೆ ಮುಂದುವರೆಸಿದ್ದಾರೆ.