Home ನಮ್ಮ ಜಿಲ್ಲೆ ಕೊಪ್ಪಳ ಕುಷ್ಟಗಿಯಲ್ಲಿ ₹400 ಕೋಟಿ ಹೂಡಿಕೆ : ಪವನ ಶಕ್ತಿ ಕ್ಷೇತ್ರದಲ್ಲಿ ಹೊಸ ಸಂಚಲನ!

ಕುಷ್ಟಗಿಯಲ್ಲಿ ₹400 ಕೋಟಿ ಹೂಡಿಕೆ : ಪವನ ಶಕ್ತಿ ಕ್ಷೇತ್ರದಲ್ಲಿ ಹೊಸ ಸಂಚಲನ!

0

ಕುಷ್ಟಗಿ (ಕೊಪ್ಪಳ): ಪವನ ಶಕ್ತಿ ಕ್ಷೇತ್ರದಲ್ಲಿ ಹೊಸ ಚೈತನ್ಯ ಮೂಡಿಸಲು Inox Wind ಕಂಪನಿ ಕುಷ್ಟಗಿಯಲ್ಲಿ ಭಾರೀ ಹೂಡಿಕೆ ಮಾಡುತ್ತಿದೆ. ಸುಮಾರು ₹400 ಕೋಟಿ ಹೂಡಿಕೆ ಮಾಡಿ ವಿಂಡ್ ಬ್ಲೇಡ್ ಉತ್ಪಾದನಾ ಘಟಕ ಸ್ಥಾಪನೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಸಚಿವರು ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದು, “ಕುಷ್ಟಗಿ ತಾಲ್ಲೂಕಿನ ಕ್ಯಾದಿಗುಪ್ಪದ ಕೆಐಎಡಿಬಿ ಪ್ರದೇಶದ 70 ಎಕರೆ ವಿಸ್ತೀರ್ಣದಲ್ಲಿ ಈ ಘಟಕ ಸ್ಥಾಪನೆಗೊಳ್ಳಲಿದೆ. ಇದರೊಂದಿಗೆ ನೂರಾರು ಉದ್ಯೋಗಗಳ ಸೃಷ್ಟಿಯಾಗಲಿದೆ” ಎಂದು ತಿಳಿಸಿದ್ದಾರೆ.

Inox Wind – ಪವನ ಶಕ್ತಿಯಲ್ಲಿ ಪ್ರಮುಖ ಹೆಸರು: ಪವನ ವಿದ್ಯುತ್ ಉತ್ಪಾದನೆಗೆ ಅಗತ್ಯವಾದ ಬೃಹತ್ ಬ್ಲೇಡ್‌ಗಳು ಮತ್ತು ಗಾಳಿಗೋಪುರಗಳ (Wind Towers) ನಿರ್ಮಾಣದಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದೆ Inox Wind. ಕಂಪೆನಿಯ ಕಾರ್ಪೊರೇಟ್ ಕಾರ್ಯತಂತ್ರ ವಿಭಾಗದ ಅಧ್ಯಕ್ಷ ಸಂತೋಷ್ ಖೈರ್ನಾರ್ ಅವರು ಇಂದು ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡಿ ಹೂಡಿಕೆ ಯೋಜನೆ ಕುರಿತು ಚರ್ಚಿಸಿದರು.

ಹೂಡಿಕೆ ವಿವರಗಳು: ಆರಂಭಿಕ ಹಂತದಲ್ಲಿ ₹300 ಕೋಟಿ ಹೂಡಿಕೆ ಮಾಡಲಾಗುತ್ತಿದ್ದು, ಬಳಿಕ ಹೆಚ್ಚುವರಿಯಾಗಿ ₹100 ಕೋಟಿ ಹೂಡಿಕೆಯೊಂದಿಗೆ ಗಾಳಿಗೋಪುರಗಳ ನಿರ್ಮಾಣ ಚಟುವಟಿಕೆಗಳನ್ನೂ ಮುಂದುವರಿಸಲಾಗುವುದು. ಈ ಘಟಕದ ಕಾರ್ಯಾರಂಭವಾದ ಬಳಿಕ ಪ್ರಾದೇಶಿಕ ಮಟ್ಟದಲ್ಲಿ ಅನೇಕ ತಾಂತ್ರಿಕ ಮತ್ತು ಅತಾಂತ್ರಿಕ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಸರ್ಕಾರದ ಸಂಪೂರ್ಣ ಬೆಂಬಲ: ಈ ಹೂಡಿಕೆ ಯೋಜನೆಗೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ. “Inox Wind ಸಂಸ್ಥೆಯವರು ಶೀಘ್ರದಲ್ಲೇ ತಮ್ಮ ಕಾರ್ಯಚಟುವಟಿಕೆ ಪ್ರಾರಂಭಿಸುವ ನಿರೀಕ್ಷೆಯಿದೆ. ಇದು ಕುಷ್ಟಗಿ, ಕೊಪ್ಪಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಕೈಗಾರಿಕಾ ಬೆಳವಣಿಗೆಯ ಹೊಸ ಅಧ್ಯಾಯ” ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಪವನ ಶಕ್ತಿಯ ಬೆಳವಣಿಗೆಗೆ ಹೊಸ ವೇಗ: ಈ ಯೋಜನೆಯಿಂದ ಕರ್ನಾಟಕದಲ್ಲಿ ನವೀಕರಿಸಬಹುದಾದ ಶಕ್ತಿಯ (Renewable Energy) ಕ್ಷೇತ್ರಕ್ಕೆ ಹೊಸ ವೇಗ ಸಿಗಲಿದ್ದು, ರಾಜ್ಯದ ಪವನ ಶಕ್ತಿ ಸಾಮರ್ಥ್ಯ ವಿಸ್ತರಣೆಗೂ ಸಹಕಾರಿಯಾಗಲಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version