Home ನಮ್ಮ ಜಿಲ್ಲೆ ಸಿಂಗದೂರು ಕಾರ್ಯಕ್ರಮಕ್ಕೆ ಗೈರಾಗಿದ್ದ ಸಿಎಂ, ವಿಜಯಪುರದಲ್ಲಿ ಸಾವಿರಾರು ಕೋಟಿ ರೂ.ಗಳ ಶಂಕುಸ್ಥಾಪನೆ

ಸಿಂಗದೂರು ಕಾರ್ಯಕ್ರಮಕ್ಕೆ ಗೈರಾಗಿದ್ದ ಸಿಎಂ, ವಿಜಯಪುರದಲ್ಲಿ ಸಾವಿರಾರು ಕೋಟಿ ರೂ.ಗಳ ಶಂಕುಸ್ಥಾಪನೆ

0

ವಿಜಯಪುರ: ಐತಿಹಾಸಿಕ ಸಿಗಂದೂರು ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಗೈರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಜಯಪುರದಲ್ಲಿ ಸಾವಿರಾರು ಕೋಟಿ ರೂ.ಗಳ ಶಂಕುಸ್ಥಾಪನೆ, ಉದ್ಘಾಟನೆಯನ್ನು ನೆರವೇರಿಸಿದ್ದಾರೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿರುವ ಅವರು, “ನಮ್ಮದು ಅಭಿವೃದ್ಧಿ ಪರವಾದ ಸರ್ಕಾರ ಎನ್ನುವುದಕ್ಕೆ, ಒಂದೇ ದಿನ ಇಂಡಿಯಲ್ಲಿ 4,559 ಕೋಟಿ ರೂಪಾಯಿಗಳ ಶಂಕುಸ್ಥಾಪನೆ, ಉದ್ಘಾಟನೆಯನ್ನು ನಾನು ನೆರವೇರಿಸಿದ ಈ ಕ್ಷಣವೇ ಸಾಕ್ಷಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶಕ್ತಿ ಯೋಜನೆಯಡಿ 500 ಕೋಟಿ ಬಾರಿ ಮಹಿಳೆಯರು ಉಚಿತ ಪ್ರಯಾಣ ನಡೆಸಿದ ಹಿನ್ನೆಲೆಯಲ್ಲಿ ಕೆ.ಕೆ.ಆರ್.ಟಿ.ಸಿ ಬಸ್‌ಗೆ ಪೂಜೆ ನೆರವೇರಿಸಿ, ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್ ವಿತರಿಸಿ, ನಂತರ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿ, ಲಿಂಬೆ ಅಭಿವೃದ್ಧಿ ಮಂಡಳಿಯ ಲಾಂಛನವನ್ನು ಮುಖ್ಯಮಂತ್ರಿಗಳು ಬಿಡುಗಡೆಗೊಳಿಸಿದರು.

“4,157 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ, 401 ಕೋಟಿ ಮೊತ್ತದ ಕಾಮಗಾರಿ ಉದ್ಘಾಟನೆ ಮಾಡಿದ್ದೇನೆ. ಬಿಜೆಪಿಯವರು ಬಹಿರಂಗ ಚರ್ಚೆಗೆ ಬರಲಿ. ಅಭಿವೃದ್ಧಿಯಲ್ಲಿ ನಮ್ಮ ಸರ್ಕಾರದ ಸಾಧನೆ ಮತ್ತು ಬಿಜೆಪಿ ಸರ್ಕಾರದ ಸಾಧನೆ ಬಗ್ಗೆ ಸಾರ್ವಜನಿಕ‌ವಾಗಿ ದಾಖಲೆ ಸಮೇತ ಚರ್ಚೆ ನಡೆಸೋಣ” ಎಂದು ಸವಾಲು ಹಾಕಿದರು.

“ವಿಜಯಪುರ ಜಿಲ್ಲೆ ಮೊದಲು ಹೇಗಿತ್ತು? ನಮ್ಮ ಸರ್ಕಾರದಲ್ಲಿ ಮತ್ತು ಹಿಂದಿನ ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳ ಪಟ್ಟಿಯನ್ನು ಕೈಯಲ್ಲಿ ಹಿಡಿದು ನೋಡಿ. ವಿಜಯಪುರ ಜಿಲ್ಲೆಯಲ್ಲಿ ನೀರಾವರಿ ಈ ಮಟ್ಟಕ್ಕೆ ಅಭಿವೃದ್ಧಿಗೊಳಿಸಿ, ಬರದ ನಾಡಾಗಿದ್ದ ವಿಜಯಪುರವನ್ನು ಹಸಿರು ನಾಡು ಮಾಡಿದ್ದು ನಾವು” ಎಂದರು.

“ಹಿಂದೆ ಬರಗಾಲ ಬಂದಾಗ ಜನ ನಿಂಬೆ ಗಿಡ ಕಿತ್ತು ಹಾಕುತ್ತಿದ್ದರು. ಅದೇ ದಿನ‌ ನಾನು ಇಂಡಿಗೆ ಬಂದಿದ್ದೆ. ನಿಂಬೆ ಬೆಳೆಗಾರರಿಗೆ ಭರವಸೆ ನೀಡಿದ್ದೆ. ಇಂದು ನಿಂಬೆ ಅಭಿವೃದ್ಧಿ ಮಂಡಳಿಯ ಲಾಂಛನ ಬಿಡುಗಡೆ ಮಾಡಿ ನುಡಿದಂತೆ ನಡೆಯುವ ಕಾಂಗ್ರೆಸ್ಸಿನ ಪರಂಪರೆಯನ್ನು ಮುಂದುವರೆಸಿದ್ದೇವೆ” ಎಂದರು.

“500 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿರುವುದು, 1.23 ಕೋಟಿ ಕುಟುಂಬಗಳು ಗೃಹಲಕ್ಷ್ಮಿ ಹಣ ಪಡೆದಿರುವುದು, 1.64 ಕೋಟಿ ಮನೆಗಳಿಗೆ ಉಚಿತವಾಗಿ 200 ಯೂನಿಟ್ ಹಣ ಪಡೆಯುತ್ತಿರುವುದು, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳ ಮೂಲಕ ಕೋಟಿ ಕೋಟಿ ಕನ್ನಡಿಗರ ಬದುಕಿಗೆ ನೆರವಾಗಿರುವುದು ಅಭಿವೃದ್ಧಿ ಅಲ್ಲವೇ? ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಗ್ಯಾರಂಟಿಗಳಲ್ಲದೆ 83 ಸಾವಿರ ಕೋಟಿ ರೂಪಾಯಿ ಹಣ ಅಭಿವೃದ್ಧಿಗೆ ತೆಗೆದಿಟ್ಟುರುವುದು ನಮ್ಮ ಅಭಿವೃದ್ಧಿ ಪರವಾದ ಆಡಳಿತಕ್ಕೆ ಸ್ಪಷ್ಟ ನಿದರ್ಶನ. ಆದ್ದರಿಂದ ಬಿಜೆಪಿ-ಜೆಡಿಎಸ್‌ನ ಸುಳ್ಳು ಆರೋಪಗಳನ್ನು ನಂಬಬೇಡಿ. ನಿಮ್ಮ ಕಣ್ಣೆದುರಿಗೇ ಇರುವ ಅಭಿವೃದ್ಧಿ ಯೋಜನೆಗಳನ್ನು ಬಿಜೆಪಿಯವರ ಮುಖಕ್ಕೆ ಹಿಡಿದು ಉತ್ತರಿಸಿ” ಎಂದು ಕರೆ ನೀಡಿದರು.

NO COMMENTS

LEAVE A REPLY

Please enter your comment!
Please enter your name here

Exit mobile version