Home ಸಂಪಾದಕೀಯ ಖಜಾನೆ ತುಂಬ ಝಣಝಣ ಕಾಮಗಾರಿ ಮಾತ್ರ ಬಣಬಣ

ಖಜಾನೆ ತುಂಬ ಝಣಝಣ ಕಾಮಗಾರಿ ಮಾತ್ರ ಬಣಬಣ

0

ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯ ಬುಧವಾರದ ಸಂಪಾದಕೀಯ

ರಾಜ್ಯದ ಖಜಾನೆ ತುಂಬ ಹಣ ಇದೆ. ಕಾಮಗಾರಿ ಮಾತ್ರ ಅಮೆವೇಗದಲ್ಲಿ ಸಾಗುತ್ತಿದೆ. ಇದಕ್ಕೆ ಕಾರಣ ಏನು ಎಂದು ಹುಡುಕುವ ಅಗತ್ಯವಿಲ್ಲ. ಅಂಗೈ ಹುಣ್ಣಿಗೆ ಕನ್ನಡಿ ಏಕೆ ಎಂಬಂತೆ ಆಡಳಿತದಲ್ಲಿ ಹಿಡಿತ ಕಡಿಮೆಯಾಗಿದೆ. ಉತ್ತರದಾಯಿತ್ವ ಇಲ್ಲವಾಗಿದೆ. ಕೆಡಿಪಿ ಸಭೆ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುತ್ತದೆ. ಅದರಲ್ಲಿ ನೀಡಿದ ಅಂಕಿ-ಅಂಶಗಳ ಪ್ರಕಾರ ಶೇ. 13.92 ರಷ್ಟು ಆರ್ಥಿಕ ಪ್ರಗತಿಯಾಗಿದೆ. ಅಂದರೆ ವರ್ಷದ ಕೊನೆಗೆ ಶೇ. 60 ಪ್ರಗತಿ ದಾಟಲಾರದು. ಬಜೆಟ್‌ನಲ್ಲಿ ಆಶಾಗೋಪುರಗಳನ್ನು ಕಟ್ಟುತ್ತೇವೆ. ಅದಕ್ಕೆ ತಕ್ಕಂತೆ ಸಂಪನ್ಮೂಲ ಕ್ರೋಡೀಕರಣ ಆಗೋಲ್ಲ. ಆಗ ವರ್ಷದ ಕೊನೆಯಲ್ಲಿ ಹಾಸಿಗೆ ಇದ್ದಷ್ಟು ಕಾಲು ಚಾಚುವ ನಿರ್ಧಾರಕ್ಕೆ ಬರುತ್ತೇವೆ. ಇದು ವಾಸ್ತವ ಸಂಗತಿ. ಇದನ್ನು ಯಾವ ಜನಪ್ರತಿನಿಧಿಗಳು ಒಪ್ಪಿಕೊಳ್ಳುವುದಿಲ್ಲ. ಒಟ್ಟು ಬಜೆಟ್ 4.09 ಲಕ್ಷ ಕೋಟಿ ರೂ. ಅಂದಾಜು. ಇದರಲ್ಲಿ ಗ್ಯಾರಂಟಿಗೆ 51,034 ಕೋಟಿ ರೂ. ಅಭಿವೃದ್ಧಿಗೆ ಇರುವುದು 71,336 ಕೋಟಿ ರೂ. ಈಗ ಏಪ್ರಿಲ್‌ನಿಂದ ಜೂನ್‌ವರೆಗೆ ಕಾಮಗಾರಿಗೆ ಅನುದಾನ 3,53,341 ಕೋಟಿ ರೂ. ಇದರಲ್ಲಿ ಬಿಡುಗಡೆ 49,188 ಕೋಟಿ ರೂ. ಆಗಿರುವ ವೆಚ್ಚ 26,966 ಕೋಟಿ ರೂ. ಮಾತ್ರ.

ಇದು ಏನನ್ನು ಸೂಚಿಸುತ್ತದೆ? ಆಡಳಿತದಲ್ಲಿ ನೆಲೆಸಿರುವ ಸೋಮಾರಿತನ, ಅದಕ್ಷತೆ, ಆಮೆ ವೇಗದ ಬೆಳವಣಿಗೆಯನ್ನು ತೋರಿಸುತ್ತದೆ. ಬಹುತೇಕ ಕಡೆ ಪ್ರತಿ ಯೋಜನೆಗೂ ಸವಿವರ ಯೋಜನೆ ಸಿದ್ಧಪಡಿಸುವುದಿಲ್ಲ. ಹಣ ಬಂದ ಮೇಲೆ ಎಲ್ಲ ಕೆಲಸ ಆರಂಭವಾಗುತ್ತದೆ. ಟೆಂಡರ್ ಪ್ರಕ್ರಿಯೆ ಕೂಡ ಆಗಿರುವುದಿಲ್ಲ. ಹೀಗಾಗಿ ಸರ್ಕಾರ ಹಣ ಬಿಡುಗಡೆ ಮಾಡಿದರೂ ಅದನ್ನು ಬಳಸಲು ಬೇಕಾದ ಕಾನೂನು ಪರಿಪಾಲನೆ ಆಗಿರುವುದಿಲ್ಲ. ಕೆಲವರು ಎಲ್ಲಿ ಅಕ್ರಮ ನಡೆದು ಹೋಗುತ್ತದೊ ಎಂದು ಕಾಮಗಾರಿಯನ್ನು ಅನಗತ್ಯವಾಗಿ ಮುಂದೂಡುತ್ತಾರೆ. ಕಾಮಗಾರಿಯಲ್ಲಿ ಅನಗತ್ಯ ವಿಳಂಬವಾದರೆ ಅದಕ್ಕೆ ಶಿಕ್ಷೆ ಇಲ್ಲ. ಅಕ್ರಮಗಳಿಗೆ ಮಾತ್ರ ಶಿಕ್ಷೆ ಇದೆ

ಅತಿ ಕಡಿಮೆ ಎಂದರೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯಲ್ಲಿ ಶೇ. 6.58 ರಷ್ಟು ಬೆಳವಣಿಗೆ ಕಂಡು ಬಂದಿದೆ. ಐಟಿಬಿಟಿ ಇಲಾಖೆಯಲ್ಲಿ ಶೇ. 0.33 ಮಾತ್ರ ಪ್ರಗತಿಯಾಗಿದೆ ಎಂದರೆ ಆಶ್ಚರ್ಯವಾಗುವುದು ಸಹಜ. ಕೃಷಿ ಇಲಾಖೆಗೆ ಬಜೆಟ್‌ನಲ್ಲಿ ನೀಡಿರುವುದು 5,147 ಕೋಟಿ ರೂ. ಬಿಡುಗಡೆಯಾಗಿರುವುದು 992 ಕೋಟಿ ರೂ. ಆಗಿರುವ ವೆಚ್ಚ 643 ಕೋಟಿ ರೂ. ಇದೇ ಹಣೆಬರಹ ಇತರ ಇಲಾಖೆಗಳದೂ ಹೌದು. ಸರ್ಕಾರಿ ಕೆಲಸ ತ್ವರಿತವಾಗಿ ನಡೆಯಬೇಕು ಎಂದರೆ ನ್ಯಾಯಾಲಯದಲ್ಲಿ ಪಿಐಎಲ್ ಹಾಕಿ ಎಂದು ಕೇಂದ್ರ ಸಚಿವರೇ ಹೇಳಿದ್ದಾರೆ. ಶಾಲೆಯಲ್ಲಿ ಶೂನ್ಯ ಫಲಿತಾಂಶ ಬಂದರೆ ಶಿಕ್ಷಕರು ಕಾರಣ ಎನ್ನುತ್ತೇವೆ. ಅದೇ ಮಾನದಂಡವನ್ನು ಅನುಸರಿಸಿದರೆ ಸಂಬಂಧಪಟ್ಟ ಸಚಿವರನ್ನು ಹೊಣೆಗಾರರನ್ನಾಗಿ ಮಾಡುವುದು ಅಗತ್ಯ. ಕಡಿಮೆ ಸಾಧನೆ ಮಾಡಿರುವ ಇಲಾಖೆಗಳ ಹೊಣೆ ಹೊತ್ತ ಸಚಿವರು ಪರಿಶೀಲನೆ ನಡೆಸಿ ಜನರ ಮುಂದೆ ಕಾರಣಗಳನ್ನು ಮಂಡಿಸುವುದು ಅಗತ್ಯ.

ಈಗ ಪ್ರತಿ ಗಂಟೆಗೂ ವಿವಿಧ ಇಲಾಖೆಗಳ ಕಾಮಗಾರಿಯ ಪ್ರಗತಿಯನ್ನು ರಿಯಲ್ ಟೈಮ್ ಪರಿಶೀಲಿಸಲು ಅವಕಾಶವಿದೆ. ಹಣ ಮತ್ತು ಸಮಯ ಸರ್ಕಾರ ನಡೆಸುವವರಿಗೆ ಅಮೂಲ್ಯ. ಸಮಯ ಹೋದಂತೆ ಪ್ರತಿಯೊಂದು ಕಾಮಗಾರಿಯ ವೆಚ್ಚ ಅಧಿಕಗೊಳ್ಳುತ್ತದೆ. ಅಲ್ಲದೆ ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳಬೇಕು. ಪ್ರತಿ ಯೋಜನೆಗೂ ಮೂರನೇ ವ್ಯಕ್ತಿಯಿಂದ ಗುಣಮಟ್ಟದ ಪರಿಶೀಲನೆ ನಡೆಸಬೇಕು. ಒಂದುವೇಳೆ ಕಾಮಗಾರಿ ಕಳಪೆ ಎಂದು ಕಂಡು ಬಂದಲ್ಲಿ ಕೈಗೊಂಡ ಗುತ್ತಿಗೆದಾರ ಮತ್ತು ಕಾಮಗಾರಿ ಉತ್ತಮ ಎಂದು ಸರ್ಟಿಫಿಕೇಟ್ ನೀಡಿದ ಅಧಿಕಾರಿ ಅಥವ ಸಂಸ್ಥೆಯನ್ನು ನ್ಯಾಯಾಲಯದ ವಿಚಾರಣೆಗೆ ಒಳಪಡಿಸಬೇಕು.

NO COMMENTS

LEAVE A REPLY

Please enter your comment!
Please enter your name here

Exit mobile version