ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿಗೆ ಗುಡ್ ನ್ಯೂಸ್. ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲುಗಳ ವಾಣಿಜ್ಯ ಸಂಚಾರಕ್ಕೆ ಮೆಟ್ರೊ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್) ಅಂತಿಮ ಒಪ್ಪಿಗೆ ನೀಡಿದ್ದಾರೆ.
ಮೆಟ್ರೋ ಸುರಕ್ಷತಾ ರೈಲು ಆಯುಕ್ತರ ನೇತೃತ್ವದ ತಂಡ ಜುಲೈ 22ರಿಂದ 25ರ ತನಕ ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವಿನ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಪರಿಶೀಲನೆ ನಡೆಸಿತ್ತು.
19.15 ಕಿ.ಮೀ.ಉದ್ದದ ಮಾರ್ಗ 16 ನಿಲ್ದಾಣಗಳನ್ನು ಒಳಗೊಂಡಿದೆ. ಈ ಮಾರ್ಗ ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ರೈಲು ಸಂಪರ್ಕವನ್ನು ಕಲ್ಪಿಸಲಿದೆ. ಆದ್ದರಿಂದ ಹಳದಿ ಮಾರ್ಗ ಬೆಂಗಳೂರು ನಗರದ ಬಹು ನಿರೀಕ್ಷಿತ ನಮ್ಮ ಮೆಟ್ರೋ ಮಾರ್ಗವಾಗಿದೆ.
ಸದ್ಯದ ಮಾಹಿತಿ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಪ್ರಧಾನಿಗಳ ದಿನಾಂಕ ಅಂತಿಮಗೊಂಡ ಬಳಿಕ ಯಾವಾಗ ಮೆಟ್ರೋ ಸಂಚಾರ ಆರಂಭ? ಎಂಬುದು ತಿಳಿಯಲಿದೆ.
ಬಿಎಂಆರ್‌ಸಿಎಲ್ ಹಳದಿ ಮಾರ್ಗದಲ್ಲಿ ಓಡಿಸಲು ರೈಲುಗಳ ಕೊರತೆ ಎದುರಿಸುತ್ತಿದೆ. ಈ ಹಿನ್ನಲೆಯಲ್ಲಿ 3 ರೈಲುಗಳನ್ನು 20 ನಿಮಿಷದ ಅಂತರದಲ್ಲಿ ಓಡಿಸಲು ನಿರ್ಧರಿಸಿದೆ.
ಹಳದಿ ಮಾರ್ಗದ ವಿಶೇಷತೆ ಎಂದರೆ ಇದರಲ್ಲಿ ಚಾಲಕ ರಹಿತ ನಮ್ಮ ಮೆಟ್ರೋ ರೈಲು ಓಡಲಿದೆ. ಅಲ್ಲದೇ ಡಬಲ್ ಡೆಕ್ಕರ್ ಫ್ಲೈ ಓವರ್ ಮೇಲೆ ರೈಲು ಸಂಚಾರವನ್ನು ನಡೆಸಲಿದೆ.
ನಿಲ್ದಾಣಗಳು: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಆರ್.ವಿ.ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ, ಹೊಂಗಸಂದ್ರ, ಕುಡ್ಲುಗೇಟ್, ಸಿಂಗಸಂದ್ರ, ಹೊಸ ರಸ್ತೆ, ಬೆರಟೇನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಇನ್ಫೋಸಿಸ್ ಫೌಂಡೇಶನ್ (ಕೋನಪ್ಪನ ಅಗ್ರಹಾರ), ಹುಸ್ಕೂರ್ ರಸ್ತೆ, ಹೆಬ್ಬಗೋಡಿ ಬಯೋಕಾನ್, ಬೊಮ್ಮಸಂದ್ರ ನಿಲ್ದಾಣಗಳಿವೆ.
ಆಗಸ್ಟ್ 15ರಿಂದ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲುಗಳ ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ಬಯಸಿತ್ತು. ಆದರೆ ಆ ದಿನಕ್ಕೆ ಪ್ರಧಾನಿ ಮೋದಿ ದಿನಾಂಕ ಸಿಗಲಿದೆಯೇ? ಎಂಬುದು ಪ್ರಶ್ನೆಯಾಗಿದೆ.
ನಮ್ಮ ಮೆಟ್ರೋ ರೈಲು ಉದ್ಘಾಟನಾ ಕಾರ್ಯಕ್ರಮಕ್ಕೆ ನರೇಂದ್ರ ಮೋದಿ ಬೆಂಗಳೂರು ನಗರಕ್ಕೆ ಭೇಟಿ ನೀಡದಿದ್ದರೂ ವಿಡಿಯೋ ಕಾನ್ಫರೆನ್ಸ್ ಮೂಲಕ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಿಸುವ ನಿರೀಕ್ಷೆ ಇದೆ.
ಈ ಮಾರ್ಗದಲ್ಲಿ ಸಂಚಾರ ನಡೆಸುವ 4ನೇ ರೈಲು ಪಶ್ಚಿಮ ಬಂಗಾಳದಿಂದ ಈಗಾಗಲೇ ಹೊರಟಿದೆ. ಆಗಸ್ಟ್ 8ಕ್ಕೆ ಬೆಂಗಳೂರು ನಗರಕ್ಕೆ ಆಗಮಿಸಲಿದೆ ಎಂದು ಅಂದಾಜಿಸಲಾಗಿದೆ. ರೈಲುಗಳ ಕೊರತೆ ಕಾರಣ 10, 15 ನಿಮಿಷಗಳ ಅಂತರದಲ್ಲಿ ಹಳದಿ ಮಾರ್ಗದಲ್ಲಿ ರೈಲು ಓಡಿಸಲು ಸಾಧ್ಯವಿಲ್ಲ.
ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ರೈಲು ಓಡಿಸಲು ಮೊದಲು ಪರೀಕ್ಷೆಗಳನ್ನು ನಡೆಸಿ ಪ್ರಮಾಣ ಪತ್ರ ನೀಡಲಾಗಿತ್ತು. ಬಳಿಕ ಜುಲೈ 22ರಿಂದ ಮೆಟ್ರೊ ರೈಲು ಸುರಕ್ಷತಾ ಆಯುಕ್ತರ ತಂಡ ಪರಿಶೀಲನೆ ನಡೆಸಿತ್ತು. ಈಗ ಅಂತಿಮ ಒಪ್ಪಿಗೆ ನೀಡಲಾಗಿದೆ.
ಈಗಾಗಲೇ ನಗರದಲ್ಲಿ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ರೈಲು ಸಂಚಾರ ನಡೆಸುತ್ತಿದೆ. ಪ್ರತಿದಿನ ಸುಮಾರು 8 ಲಕ್ಷ ಜನರು ಮೆಟ್ರೋ ಬಳಕೆ ಮಾಡುತ್ತಿದ್ದಾರೆ. ಹಳದಿ ಮಾರ್ಗದ ಸಂಚಾರ ಆರಂಭವಾದರೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ.