ದಾವಣಗೆರೆ: ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪತ್ನಿ, ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್‌ಗೆ ಕರ್ನಾಟಕ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. 2024ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಡಾ. ಪ್ರಭಾ ಮಲ್ಲಿಕಾರ್ಜುನ್ ಮೊದಲ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಿದ್ದಾರೆ.
ಡಾ. ಪ್ರಭಾ ಮಲ್ಲಿಕಾರ್ಜುನ್ ಆಯ್ಕೆಯನ್ನು ಅನೂರ್ಜಿತಗೊಳಿಸಬೇಕು ಎಂದು ಚುನಾವಣೆಯಲ್ಲಿ ಅವರ ಎದುರಾಳಿಯಾಗಿದ್ದ ಗಾಯತ್ರಿ ಸಿದ್ದೇಶ್ವರ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಏಕಸದಸ್ಯಪೀಠ ಅರ್ಜಿ ವಜಾಗೊಳಿಸಿದೆ. ಡಾ. ಪ್ರಭಾ ಮಲ್ಲಿಕಾರ್ಜುನ್ ಪರವಾಗಿ ವಕೀಲ ಪ್ರಶಾಂತ್ ಗೌಡರ್ ವಾದ ಮಂಡಿಸಿದ್ದರು.
ಅರ್ಜಿಯಲ್ಲಿನ ಮನವಿ ಏನು?: 2024ರ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಾ. ಪ್ರಭಾ ಮಲ್ಲಿಕಾರ್ಜುನ್ ಮತದಾರರಿಗೆ ಗ್ಯಾರಂಟಿ ಯೋಜನೆಗಳ ಆಮಿಷವೊಡ್ಡಿ ಚುನಾವಣಾ ಅಕ್ರಮ ನಡೆಸಿದ್ದಾರೆ. ಆದ್ದರಿಂದ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಿ ಎಂದು ಮನವಿ ಮಾಡಲಾಗಿತ್ತು.
ಡಾ. ಪ್ರಭಾ ಮಲ್ಲಿಕಾರ್ಜುನ್ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಿದ್ದಾರೆ. ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ. ನೀಡುವ ಭರವಸೆ ನೀಡಿದ್ದಾರೆ. ಇದು ಪ್ರಜಾಪ್ರತಿನಿಧಿ ಕಾಯ್ದೆ-1951ರ ಸೆಕ್ಷನ್ 123(1), 123(2), 123(4), 123(6)ಕ್ಕೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಆದರೆ ಡಾ. ಪ್ರಭಾ ಮಲ್ಲಿಕಾರ್ಜುನ್ ಪರ ವಕೀಲರು, ಪಕ್ಷದ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾದ ಅಂಶಗಳನ್ನು ಆಮಿಷ ಎಂದು ಪರಿಗಣಿಸಲಾಗದು. ಆದ್ದರಿಂದ ಅರ್ಜಿಯನ್ನು ವಜಾಗೊಳಿಸಬೇಕು ಎಂದು ವಾದ ಮಂಡಿಸಿದ್ದರು. ಈ ವಾದವನ್ನು ಕೋರ್ಟ್ ಮಾನ್ಯ ಮಾಡಿದೆ.
ಲೋಕಸಭೆ ಚುನಾವಣೆಯಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್ 633,059 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಎದುರಾಳಿಯಾಗಿದ್ದ ಬಿಜೆಪಿಯ ಗಾಯತ್ರಿ ಸಿದ್ದೇಶ್ವರ 606,965 ಮತಗಳನ್ನು ಪಡೆದು ಸೋಲು ಕಂಡಿದ್ದರು. ಬಳಿಕ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್‌ಗೆ ಸಲ್ಲಿಕೆ ಮಾಡಿದ್ದರು.
ದಾವಣಗೆರೆ ಕ್ಷೇತ್ರದಲ್ಲಿ 2024ರ ಲೋಕಸಭೆ ಚುನಾವಣೆ ಕುತೂಹಲಕ್ಕೆ ಕಾರಣವಾಗಿತ್ತು. ಬಿಜೆಪಿ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರಗೆ ಟಿಕೆಟ್ ನೀಡಲಿಲ್ಲ. ಬದಲಾಗಿ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅಭ್ಯರ್ಥಿಯಾದರು.
ಆಗ ಕಾಂಗ್ರೆಸ್ ಪಕ್ಷ ಶಾಮನೂರು ಶಿವಶಂಕರಪ್ಪ ಸೊಸೆ, ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಕಣಕ್ಕಿಳಿಸಿತು. ಮೊದಲ ಬಾರಿಗೆ ದಾವಣಗೆರೆ ಕ್ಷೇತ್ರ ಮಹಿಳಾ ಅಭ್ಯರ್ಥಿಗಳ ಮಖಾಮುಖಿಗೆ ಕಾರಣವಾಯಿತು.
ದಾವಣಗೆರೆ ಕ್ಷೇತ್ರದ ಚುನಾವಣೆ ಎಂದರೆ ಅದು ಶಾಮನೂರು ಶಿವಶಂಕರಪ್ಪ ಮತ್ತು ಜಿ.ಎಂ.ಸಿದ್ದೇಶ್ವರ ಕುಟುಂಬದ ನಡುವಿನ ಹೋರಾಟ. ಲೋಕಸಭೆ ಚುನಾವಣೆಯಲ್ಲಿ ಜಿ.ಎಂ.ಸಿದ್ದೇಶ್ವರ, ಎಸ್.ಎಸ್.ಮಲ್ಲಿಕಾರ್ಜುನ ಹಲವು ಬಾರಿ ಮುಖಾಮುಖಿಯಾಗಿ ಸೋಲು, ಗೆಲುವು ಕಂಡಿದ್ದಾರೆ.
ಆದರೆ 2024ರಲ್ಲಿ ಮೊದಲ ಬಾರಿಗೆ ಎರಡೂ ಕುಟುಂಬದಿಂದ ಮಹಿಳೆಯರು ಚುನಾವಣಾ ಕಣಕ್ಕಿಳಿದರು. ಇಬ್ಬರಿಗೂ ಇದು ಮೊದಲ ಚುನಾವಣೆ ಆಗಿತ್ತು. ಯಾರು ಗೆದ್ದರೂ ಸಹ ಇತಿಹಾಸ ನಿರ್ಮಾಣವಾಗುತ್ತಿತ್ತು.
ಗಾಯತ್ರಿ ಸಿದ್ದೇಶ್ವರ ಪರವಾಗಿ ಪ್ರಚಾರ ಮಾಡಲು ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು. ಶಾಮನೂರು ಶಿವಶಂಕರಪ್ಪ ಹಾಲಿ ಶಾಸಕರು, ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ಶಾಸಕರು, ಸಚಿವರು.
ದಾವಣಗೆರೆಯಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್ ಹಲವಾರು ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯರಾಗಿದ್ದರು. ಲೋಕಸಭೆ ಚುನಾವಣೆಯಲ್ಲಿ ಅವರು ಅಭ್ಯರ್ಥಿ ಎಂದು ಘೋಷಣೆಯಾದಾಗಲೇ ಗೆಲುವು ಸುಲಭ ಎಂಬ ಲೆಕ್ಕಾಚಾರವಿತ್ತು. ಚುನಾವಣೆಯಲ್ಲಿ ಅವರು ಜಯಗಳಿಸಿದರು.