ಬಳ್ಳಾರಿ: ಆಹಾರ ಉದ್ಯಮ ಆರಂಭಿಸಬೇಕು ಎಂಬುದು ನಗರ ಮತ್ತು ಗ್ರಾಮೀಣ ಪ್ರದೇಶದ ಹಲವು ಜನರ ಕನಸು. ಇದಕ್ಕೆ 9 ಲಕ್ಷಗಳಷ್ಟು ಬ್ಯಾಂಕ್ ಸಾಲ ದೊರೆಯುವ ಯೋಜನೆ ಒಂದಿದೆ. ಈ ಕುರಿತು ಜನರು ಹೆಚ್ಚಿನ ಮಾಹಿತಿಗಳನ್ನು ತಿಳಿದು ಕಿರು ಆಹಾರ ಉದ್ಯಮವನ್ನು ಆರಂಭಿಸಬಹುದು.
ಕೃಷಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಕೆಪೆಕ್ ಸಂಸ್ಥೆಯ ಸಹಯೋಗದಲ್ಲಿ ಬಳ್ಳಾರಿ ನಗರದ ಜಿಲ್ಲಾ ಪಂಚಾಯಿತಿ ನಜೀರ್ ಸಾಬ್ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ನಿಯಮಬದ್ದಗೊಳಿಸುವಿಕೆ ಯೋಜನೆಯ ಜಿಲ್ಲಾ ಮಟ್ಟದ ಅರಿವು ಕಾರ್ಯಾಗಾರ ನಡೆಯಿತು.
ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ (ಪಿಎಂಎಫ್ಎಂಇ)ಯೋಜನೆಯಡಿ ಕಿರು ಆಹಾರ ಸಂಸ್ಕಾರಣಾ ಉದ್ಯಮ ಪ್ರಾರಂಭಿಸಲು ಇಚ್ಛಿಸಿದಲ್ಲಿ ಫಲಾನುಭವಿಯು ಕೇವಲ 1 ಲಕ್ಷ ಬಂಡವಾಳ ಹೂಡಿದರೆ 10 ಲಕ್ಷ ಬಂಡವಾಳವುಳ್ಳ ಉದ್ಯಮ ಆರಂಭಿಸಬಹುದು.
ಬಳ್ಳಾರಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್ ಈ ಕುರಿತು ಮಾಹಿತಿ ನೀಡಿದರು. ಕಿರು ಆಹಾರ ಸಂಸ್ಕರಣಾ ಉದ್ಯಮ ಪ್ರಾರಂಭಿಸಲು 9 ಲಕ್ಷಗಳಷ್ಟು ಬ್ಯಾಂಕಿನ ಸಾಲ ದೊರೆಯುತ್ತದೆ. ಇದರಲ್ಲಿ 5 ಲಕ್ಷ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಹಾಯಧನ ದೊರೆಯುತ್ತದೆ ಎಂದರು.
ಕೇವಲ 1 ಲಕ್ಷ ಹೂಡಿ 10 ಲಕ್ಷ ಬಂಡವಾಳದ ಉದ್ಯಮ ಪ್ರಾರಂಭಿಸಲು ಇದು ಸುವರ್ಣ ಅವಕಾಶವಾಗಿದ್ದು, ದೊಡ್ಡ ಕನಸಿಗೆ ಚಿಕ್ಕ ಹೆಜ್ಜೆಯಾಗಿ ಅಡಿಗಲ್ಲು ಹಾಕಲು ಸಾಧ್ಯವಾಗುವುದರಿಂದ ಎಲ್ಲರೂ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್ ಮಾತನಾಡಿ, “ಪಿಎಂಎಫ್ಎಂಇ ಯೋಜನೆಯಡಿ ಆಹಾರ ಸಂಸ್ಕರಣೆಗೆ ಒತ್ತು ಕೊಡುವುದರಿಂದ ಮಹಿಳೆಯರು ತಮ್ಮ ಮನೆಯಿಂದಲೇ ಆಹಾರ ಸಂಸ್ಕರಣಾ ಪದಾರ್ಥಗಳಾದ ಜೋಳದ ರೊಟ್ಟಿ, ಚಕ್ಕುಲಿ, ಖಾರ, ಹಪ್ಪಳ, ಸಂಡಿಗೆ ಮತ್ತು ಇತರ ಪದಾರ್ಥಗಳನ್ನು ಆಹಾರ ಸಂಸ್ಕರಣೆ ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಬಹುದು” ಎಂದು ಹೇಳಿದರು.
ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಂಡಲ್ಲಿ ತಮ್ಮ ಆದಾಯ ದ್ವಿಗುಣಗೊಳಿಸಿಕೊಳ್ಳಬಹುದು. ಯೋಜನೆಯು ಕೇವಲ ಈ 1 ವರ್ಷ ಮಾತ್ರ ಅನುಷ್ಠಾನದಲ್ಲಿರುವುದರಿಂದ ರೈತರು ಮತ್ತು ರೈತ ಮಹಿಳೆಯರು ಹಾಗೂ ನಿರುದ್ಯೋಗಿ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಪಿಎಂಎಫ್ಎಂಇ ಯೋಜನೆಯು 5 ವರ್ಷಗಳ ಅವಧಿಯಲ್ಲಿ ಜಾರಿಯಲ್ಲಿರುತ್ತದೆ. 2020-21ನೇ ಸಾಲಿನಿಂದ 2024-25ನೇ ಸಾಲಿನವರೆಗೂ ಮಾತ್ರ ಯೋಜನೆ ಲಭ್ಯವಿದೆ. ಯೋಜನೆಯನ್ನು ಒಂದು ವರ್ಷದ ಅವಧಿಗೆ ವಿಸ್ತರಣೆ ಮಾಡಲಾಗಿದ್ದು, ಕರ್ನಾಟಕದಲ್ಲಿ 5 ಸಾವಿರ ಫಲಾನುಭವಿಗಳಿಗೆ ಸಹಾಯಧನ ಕಲ್ಪಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.
ಕಿರು ಉದ್ಯಮ ಆರಂಭಿಸಲು ಇದೊಂದು ಮಹತ್ವದ ಯೋಜನೆಯಾಗಿದೆ. ಕರ್ನಾಟಕದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲು ಕೃಷಿ ಇಲಾಖೆಯನ್ನು ನೋಡೆಲ್ ಇಲಾಖೆಯನ್ನಾಗಿ ನೇಮಿಸಲಾಗಿದೆ. ಕೆಪೆಕ್ ಸಂಸ್ಥೆಯನ್ನು ನೋಡೆಲ್ ಏಜೆನ್ಸಿಯಾಗಿ ನೇಮಿಸಲಾಗಿದೆ.