Home ನಮ್ಮ ಜಿಲ್ಲೆ ಧಾರವಾಡ ಮಾರ್ಚ್ ಅಂತ್ಯಕ್ಕೆ ಹು-ಧಾ ಬೈಪಾಸ್ ರಸ್ತೆ ಕಾಮಗಾರಿ ಪೂರ್ಣ

ಮಾರ್ಚ್ ಅಂತ್ಯಕ್ಕೆ ಹು-ಧಾ ಬೈಪಾಸ್ ರಸ್ತೆ ಕಾಮಗಾರಿ ಪೂರ್ಣ

0

ಧಾರವಾಡ: ಹು-ಧಾ ಮಧ್ಯದಲ್ಲಿ ಷಟ್‌ಪಥ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಈಗಾಗಲೇ ಅವಧಿ ಪೂರ್ಣಗೊಂಡಿದ್ದು, ಇನ್ನೂ ಆರು ತಿಂಗಳ ಕಾಲಾವಕಾಶವನ್ನು ಗುತ್ತಿಗೆದಾರರು ಕೇಳಿದ್ದಾರೆ. ಮಾರ್ಚ್ ಅಂತ್ಯದವರೆಗೆ ಸಂಪೂರ್ಣ ಕಾಮಗಾರಿ ಮುಗಿಯಲಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಇಲ್ಲಿಯ ಹು-ಧಾ ಬೈಪಾಸ್ ರಸ್ತೆಯ ಕಾಮಗಾರಿ ಪರಿಶೀಲನೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯ 30.60 ಕಿ.ಮೀ. ಅಭಿವೃದ್ಧಿಪಡಿಸಿ, ರಸ್ತೆ ನಿರ್ಮಿಸಲು ಗುತ್ತಿಗೆದಾರರನಿಗೆ 2025ರ ಸಪ್ಟೆಂಬರ್‌ವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ ಇಲ್ಲಿಯವರೆಗೆ ಶೇ. 73.89 ರಷ್ಟು ಪ್ರಗತಿಯಾಗಿದ್ದು, ಉಳಿದ ಕಾಮಗಾರಿ ಪೂರ್ಣಗೊಳಿಸಲು ಮಾರ್ಚ್ 2026ರ ವರೆಗೆ ಕಾಲಾವಕಾಶ ಕೇಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಗುತ್ತಿಗೆದಾರರು ಮನವಿ ಸಲ್ಲಿಸಿದ್ದಾರೆ ಎಂದರು.

ಈ ಕಾಮಗಾರಿಯು 580 ಕೋಟಿ ರೂ. ಮೊತ್ತದ್ದಾಗಿದ್ದು, ಇದರಲ್ಲಿ ರಸ್ತೆಗಳ ಅಗಲೀಕರಣ, ಸೇತುವೆಗಳ ನಿರ್ಮಾಣ ಮತ್ತು ಮಳೆ ನೀರು ನಿರ್ವಹಣೆಯನ್ನು ಒಳಗೊಂಡಿದೆ. ಈ ಯೋಜನೆಯಡಿ ಈಗಾಗಲೇ 62 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಸಾರ್ವಜನಿಕರು, ರೈತರು ಮತ್ತು ಸ್ಥಳೀಯರ ಬೇಡಿಕೆಗಳನ್ನು ಪರಿಗಣಿಸಿ, ಕೆಲವು ಕಡೆಗಳಲ್ಲಿ ಸರ್ವಿಸ್ ರಸ್ತೆಗಳನ್ನು ಅಗಲೀಕರಣಗೊಳಿಸಲಾಗುವುದು. ಹೆಚ್ಚುವರಿಯಾಗಿ, ಮಳೆ ನೀರು ಹೆಚ್ಚಾಗಿ ಹರಿಯುವ ಪ್ರದೇಶಗಳನ್ನು ಗುರುತಿಸಿ, ಅಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸಲಾಗುವುದು. ಈ ಹೆಚ್ಚುವರಿ ಕಾಮಗಾರಿಗಳಿಗಾಗಿ ಸುಮಾರು 23 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಅಗತ್ಯವಿದೆ. ಸದ್ಯ ಈ ಭೂಸ್ವಾಧೀನ ಪ್ರಕ್ರಿಯೆಯು ನಡೆಯುತ್ತಿದೆ ಎಂದರು.

ಮಾರ್ಚ್ 2026ರ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಪ್ರಗತಿಯನ್ನು ಜಿಲ್ಲಾಡಳಿತವು ಸೂಕ್ಷ್ಮವಾಗಿ ಗಮನಿಸುತ್ತಿದೆ. ಮಾಸಿಕ ಪ್ರಗತಿ ವರದಿಗಳನ್ನು ಸಲ್ಲಿಸಲಾಗುತ್ತಿದ್ದು, ಕಾಮಗಾರಿಯ ವೇಗವನ್ನು ನಿರ್ಧರಿಸಲಾಗುತ್ತಿದೆ. ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಳ್ಳಲು ಮತ್ತು ಹಾನಿಗೊಳಗಾದ ಭಾಗಗಳನ್ನು ಸರಿಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಲಾಗಿದೆ. ರಸ್ತೆ ನಿರ್ಮಾಣದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ ಎಂದರು.

NO COMMENTS

LEAVE A REPLY

Please enter your comment!
Please enter your name here

Exit mobile version