ಹುಬ್ಬಳ್ಳಿ: ರಾಜ್ಯದ ಕಬ್ಬು ಬೆಳೆಗಾರರ ಸಂಕಷ್ಟ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವ ವಿಚಾರದಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಆದೇಶವಿದ್ದರೂ ಸಕ್ಕರೆ ಕಾರ್ಖಾನೆ ಮಾಲೀಕರು ಬೆಲೆ ನೀಡಲು ಮುಂದಾಗದೇ ಹಠ ಹಿಡಿದಿದ್ದು, ರೈತರ ಹೋರಾಟ ಮತ್ತಷ್ಟು ಉಗ್ರವಾಗಲು ಕಾರಣವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, “ಕಬ್ಬಿನ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚುವುದು ಸಮರ್ಥನೀಯ ವಿಧಾನವಲ್ಲ. ಆದರೆ ಇಂತಹ ಸ್ಥಿತಿ ಉಂಟಾಗಲು ಕಾರಣ ಸರ್ಕಾರದ ವೈಫಲ್ಯವೇ,” ಎಂದರು.
ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆಯ ಬಳಿ ಹಿಂಸಾಚಾರ: ಕಳೆದ 15 ದಿನಗಳಿಂದ ಕಬ್ಬಿನ ಬೆಲೆ ಪರವಾಗಿ ಮುಧೋಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ರೈತರು ಮಹಾಪ್ರತಿಭಟನೆ ನಡೆಸುತ್ತಿದ್ದರು. ಗುರುವಾರ (ನ. 14) ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆಯ ಬಳಿ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿತು. ಕಾರ್ಖಾನೆ ಆವರಣದಲ್ಲಿ ನೂರಾರು ಟ್ರ್ಯಾಕ್ಟರ್‌ಗಳಲ್ಲಿ 40–50 ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ ಘಟನೆ ನಿನ್ನೆ ನಡೆಯಿತು.
ಲಕ್ಷಾಂತರ ರೂಪಾಯಿ ನಷ್ಟ: ಬೆಂಕಿಗಾಹುತಿಯಾದ ಟ್ರ್ಯಾಕ್ಟರ್‌ಗಳಲ್ಲಿ ತುಂಬಿದ್ದ ಕಬ್ಬೂ ಸಹ ಸುಟ್ಟುಹೋದ ಪರಿಣಾಮ, ರೈತರು ಅಪಾರ ನಷ್ಟಕ್ಕೆ ಗುರಿಯಾಗಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಸ್ಥಳೀಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪೂರ್ವನಿಯೋಜಿತ ದಾಳಿ? – ADGP ಹಿತೇಂದ್ರ : ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್. ಹಿತೇಂದ್ರ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತಾಡುತ್ತಾ, “ಈ ಕೃತ್ಯ ರೈತರಿಂದ ಆಗಿಲ್ಲ. ಇದು ಪೂರ್ವನಿಯೋಜಿತ ಕೃತ್ಯ ಎನ್ನುವ ಶಂಕೆ ಗಾಢವಾಗಿದೆ. ಸುಮಾರು 15 ಮಂದಿ ಕಿಡಿಗೇಡಿಗಳ ಬಗ್ಗೆ ಸಂಶಯಿಸಲಾಗಿದೆ. ಸೂಕ್ತ ತನಿಖೆ ನಡೆಯಲಿದೆ,” ಎಂದು ಹೇಳಿದರು.
ರಾಜ್ಯ ಸರ್ಕಾರ – ಸಕ್ಕರೆ ಕಾರ್ಖಾನೆ ಮಾಲೀಕರು – ರೈತರು ಎಂಬ ತ್ರಿಕೋನದಲ್ಲಿ, ರೈತರ ಸಂಕಷ್ಟ ಮಾತ್ರ ಹೆಚ್ಚಾಗುತ್ತಿದೆ. ಸರ್ಕಾರದ ನಿರ್ಧಾರಗಳನ್ನು ಜಾರಿಗೆ ತರಲು ವಿಫಲವಾದ ಅಧಿಕಾರ ಯಂತ್ರಾಂಗ ಹಾಗೂ ಕಾರ್ಖಾನೆಗಳ ಅಹಂಕಾರಿ ನಿಲುವೇ ಸಂಘರ್ಷಕ್ಕೆ ಕಾರಣವಾಗಿದ್ದು, ಈಗ ತನಿಖೆಯಿಂದ ನಿಜವಾದ ಕಾರಣ ಹೊರಬೀಳಬೇಕಿದೆ.
