Home ನಮ್ಮ ಜಿಲ್ಲೆ ಧಾರವಾಡ ಧರ್ಮಸ್ಥಳದ ಅವಹೇಳನ: ಪ್ರತಿಭಟನೆಗೆ ಸಿದ್ಧವಾದ ಜೈನ ಸಮಾಜ

ಧರ್ಮಸ್ಥಳದ ಅವಹೇಳನ: ಪ್ರತಿಭಟನೆಗೆ ಸಿದ್ಧವಾದ ಜೈನ ಸಮಾಜ

0

ಹುಬ್ಬಳ್ಳಿ: “ಜೈನ ಸಮಾಜ ಹಾಗೂ ಜೈನ ಸಮಾಜದ ರಾಜರ ಕುರಿತು ಅವಹೇಳನಕಾರಿ ಹಾಗೂ ಅಪಪ್ರಚಾರ ಮಾಡುತ್ತಿರುವುದು ಖಂಡಿಸಿ ಸಮಾಜದ ವತಿಯಿಂದ ರಾಜ್ಯಾದ್ಯಂತ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ” ಎಂದು ವರೂರಿನ ನವಗ್ರತೀರ್ಥ ಕ್ಷೇತ್ರದ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜ ಸ್ವಾಮೀಜಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಆ. 5 ರಂದು ಹುಬ್ಬಳ್ಳಿ ಮಟ್ಟದ ಜೈನ್ ಸಮಾಜದ ಪ್ರಮುಖರ ಹಾಗೂ ಆ. 10 ರಂದು ರಾಜ್ಯಮಟ್ಟದ ಸಮಾಜ ಪ್ರಮುಖರ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟ ಮಾಡುವ ಬಗ್ಗೆ ನಿರ್ಧರಿಸಲಾಗುವುದು” ಎಂದು ತಿಳಿಸಿದರು.

“ಸಾಮಾಜಿಕ ಜಾಲತಾಣಗಳಲ್ಲಿ ಜೈನ ಸಮಾಜ ಹಾಗೂ ಸಮಾಜದ ರಾಜರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವುದು ನೋವನ್ನುಂಟು ಮಾಡಿದೆ. ಅಹಿಂಸೆ ಪರಿಪಾಲನಾ ಸಮಾಜದ ಬಗ್ಗೆ ಇಷ್ಟೊಂದು ಹಗುರವಾಗಿ ಮಾತನಾಡುವುದು ಸರಿಯಲ್ಲ. ನಮ್ಮ ರಾಜರು ದಬ್ಬಾಳಿಕೆ ಮಾಡಿಲ್ಲ. ಸಾಹಿತ್ಯ, ಧಾರ್ಮಿಕ, ಸಮಾಜಕ್ಕೆ, ಸ್ವಾತಂತ್ರ್ಯಕ್ಕಾಗಿ ಸಮಾಜ ಸಾಕಷ್ಟು ಕೊಡುಗೆ ನೀಡಿದೆ. ಆದರೆ, ಕೆಲವೊಂದು ಹಿತಾಸಕ್ತಿಗಳು ಸಮಾಜದ ಹಾಗೂ ಜೈನ ಧರ್ಮದ ಮೇಲೆ ಕಳಂಕ ತರುವ ಷಡ್ಯಂತ್ರ ಮಾಡುತ್ತಿವೆ” ಎಂದು ಆರೋಪಿಸಿದರು.

“ಅಹಿಂಸೆ ಪಾಲಿಸಿಕೊಂಡು ಬಂದರೂ ನಮ್ಮ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ಇನ್ನು ಮುಂದೆ ಇದನ್ನು ಸಹಿಸಿಕೊಂಡು ಹೋಗುವುದಿಲ್ಲ. ಇಂಥವರ ಮೇಲೆ ಕ್ರಮಕ್ಕೆ ಒತ್ತಾಯಿಸಿ ಹೋರಾಟ ನಡೆಸುತ್ತೇವೆ” ಎಂದು ಎಚ್ಚರಿಸಿದರು.

ಧರ್ಮಸ್ಥಳ ಕ್ಷೇತ್ರ ಜಗತ್ತಿಗೆ ಮಾದರಿ: “ಧರ್ಮಸ್ಥಳ ಕ್ಷೇತ್ರದ ಬಗ್ಗೆ ವಿನಾಕಾರಣ ಅಪಪ್ರಚಾರ ಮಾಡಲಾಗುತ್ತಿದೆ. ಧರ್ಮಸ್ಥಳ ಕ್ಷೇತ್ರ ಜಗತ್ತಿನ ಮಾದರಿ ಸ್ಥಳವಾಗಿದೆ. ಯೂಟ್ಯೂಬ್‌ಗಳಲ್ಲಿ ಸುಳ್ಳು ಸುದ್ದಿಗಳು ಹೆಚ್ಚಾಗಿವೆ. ಇಂಥವುಗಳಿಗೆ ಸರಕಾರ ಕಡಿವಾಣ ಹಾಗೂ ಕಟ್ಟುಪಾಡುಗಳನ್ನು ಹಾಕಬೇಕು” ಎಂದು ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜ ಸ್ವಾಮೀಜಿ ಹೇಳಿದರು.

ವೀರೇಂದ್ರ ಹೆಗ್ಗಡೆ ವಿರುದ್ಧ ಟೀಕೆ ಸಲ್ಲದು: “ಈ ಪ್ರಕರಣದ ಬಗ್ಗೆ ಸರಕಾರ ಹಾಗೂ ಎಸ್‌ಐಟಿ ನಡೆಸುತ್ತಿರುವ ತನಿಖೆ ಮೇಲೆ ನಮಗೆ ಯಾವುದೇ ಅನುಮಾನಗಳಿಲ್ಲ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಲಿ. ಆದರೆ, ಕೆಲವರು ಧರ್ಮಸ್ಥಳ ಕ್ಷೇತ್ರ ಹಾಗೂ ಡಾ. ವೀರೇಂದ್ರ ಹೆಗ್ಗಡೆ ಅವರ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಅವಹೇಳನಕಾರಿಯಾಗಿ ಮಾತನಾಡುವ ಕೆಲಸ ಆಗುತ್ತಿದೆ. ಇದನ್ನು ಇಡೀ ಸಮಾಜವು ಖಂಡಿಸುತ್ತದೆ. ಅವರು ಒಂದೇ ಒಂದು ಕೊಲೆ ಮಾಡಿದ್ದಾರೆ ಎಂಬುದು ತನಿಖೆಯಲ್ಲಿ ಸಾಬೀತಾದರೆ ನಾನು ಸನ್ಯಾಸತ್ವ ತಿರಸ್ಕಾರ ಮಾಡುತ್ತೇನೆ” ಎಂದು ಸ್ವಾಮೀಜಿ ಸವಾಲು ಹಾಕಿದರು.

“ಜೈನ ಸಮುದಾಯದವರು ಹಿಂದೂ ದೇವಸ್ಥಾನದ ಮುಖ್ಯಸ್ಥರಾಗಿದ್ದಾರೆ ಎಂಬುವುದು ಕೆಲವರಿಗೆ ಸಹಿಸಲಾಗುತ್ತಿಲ್ಲ. ಯಾವುದೇ ಸಾಕ್ಷಾಧಾರಗಳಿಲ್ಲದೇ ಮಾತನಾಡುವುದನ್ನು ಖಂಡಿಸುತ್ತೇವೆ. ಸರಕಾರ ಎಸ್‌ಐಟಿ ತನಿಖೆಯನ್ನು ತ್ವರಿತವಾಗಿ ಮುಗಿಸಿ ವರದಿ ಬಿಡುಗಡೆ ಮಾಡಬೇಕು” ಎಂದೂ ಒತ್ತಾಯ ಮಾಡಿದರು.

NO COMMENTS

LEAVE A REPLY

Please enter your comment!
Please enter your name here

Exit mobile version