ಹುಬ್ಬಳ್ಳಿ: ಹುಬ್ಬಳ್ಳಿಯ ಕಿತ್ತೂರ ರಾಣಿ ಚನ್ನಮ್ಮ ಮೈದಾನ (ಈದ್ಗಾ)ದಲ್ಲಿ ಪ್ರತಿಷ್ಠಾಪಿಸಿರುವ ಶ್ರೀಕೃಷ್ಣ ರೂಪದ ಗಣೇಶ ಮೂರ್ತಿ ದರ್ಶನಕ್ಕೆ ಜನಸಾಗವೇ ಹರಿದುಬರುತ್ತಿದೆ.
ಬುಧವಾರ ಬೆಳಗ್ಗೆ 8 ಗಂಟೆಗೆ ಮೂರುಸಾವಿರ ಮಠದಿಂದ ಗಣಪತಿಯನ್ನು ಮೆರವಣಿಗೆಯ ಮೂಲಕ ಚೆನ್ನಮ್ಮ (ಈದ್ಗಾ) ಮೈದಾನಕ್ಕೆ ತಂದು ಪ್ರತಿಷ್ಠಾಪನೆ ಮಾಡಲಾಯಿತು. ಬೆಳಗ್ಗೆ 9 ಗಂಟೆಗೆ ಪ್ರತಿಷ್ಠಾಪನೆ, ಮಧ್ಯಾಹ್ನ 1ಕ್ಕೆ ಭಜನೆ, ಸಂಜೆ 5 ಗಂಟೆಗೆ ಗೋಂಧಳಿ, 7 ಗಂಟೆಗೆ ಮಂಗಳಾರತಿ ಹಾಗೂ 7:30ಕ್ಕೆ ಗಂಗಾರತಿ ನೆರವೇರಿತು.
ಗುರುವಾರ ಬೆಳಗ್ಗೆ 6:30 ರಿಂದ 7:30ರ ವರೆಗೆ ಯೋಗಪೂಜೆ, ಆರತಿ, ಬೆಳಗ್ಗೆ 9 ಗಂಟೆಯಿAದ 11ರ ವರೆಗೆ ಗಣ ಹೋಮ, 11 ರಿಂದ 12ರ ವರೆಗೆ ಗಣೇಶನ ಸ್ತೋತ್ರ. 12 ಗಂಟೆಯಿಂದ ಸಂಜೆ 5ರ ವರೆಗೆ ಭಜನೆ, 5:30 ರಿಂದ 7ರ ವರೆಗೆ ವಾರಕರಿ ಭಜನೆ, ಸಂಜೆ 7 ಗಂಟೆಗೆ ಗಣೇಶ ವಂದನ ಕಾರ್ಯಕ್ರಮ ಘೋಷವಾದಕರಿಂದ ರಾತ್ರಿ ಗಂಗಾ ಆರತಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಕೇಂದ್ರ ಸಚಿವ ಪಲ್ಲಾದ ಜೋಶಿ, ಸಂಸದ ಜಗದೀಶ ಶೆಟ್ಟರ್, ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ, ಎಂಎಲ್‌ಸಿ ಪ್ರದೀಪ ಶೆಟ್ಟರ್, ಮಾಜಿ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಸಂಜಯ ಬಡಾಸ್ಕರ್, ಉದ್ಯಮಿ ಡಾ.ವಿ.ಎಸ್.ವಿ. ಪ್ರಾಸಾದ, ಶ್ರೀರಾಮ ಸಏನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಸೇರಿದಂತೆ ಇತರ ಗಣ್ಯರು ಗಣೇಶನ ದರ್ಶನ ಪಡೆದರು.
ಹುಬ್ಬಳ್ಳಿ-ಧಾರವಾಡ ಸೇರಿ ಸುತ್ತಲಿನ ಜಿಲ್ಲೆಗಳ ಭಕ್ತರು ಕಿತ್ತೂರ ರಾಣಿ ಚನ್ನಮ್ಮ ಮೈದಾನದಲ್ಲಿ ಪ್ರತಿಷ್ಠಾಪಿಸಲಾದ ಗಣಪತಿಯ ದರ್ಶನ ಪಡೆದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸ್ವಾಗತ ಸಮಿತಿ ನೇತೃತ್ವದಲ್ಲಿ ಪ್ರತಿಷ್ಠಾಪನಾ ಸಮಿತಿ, ವಿಸರ್ಜನಾ ಸಮಿತಿ, ಮೆರವಣಿಗೆ ಸಮಿತಿ ಸೇರಿ 8 ಸಮಿತಿಗಳು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಬಂದೋಬಸ್ತಿಗಾಗಿ ಬರೊಬ್ಬರಿ 140 ಅರೆಸೇನಾ ಪಡೆ ಹಾಗೂ 75 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ವಿಸರ್ಜನಾ ಮೆರವಣಿಗೆ ಪ್ರತಾಪ ಸಿಂಹ ಚಾಲನೆ: ಕಿತ್ತೂರ ರಾಣಿ ಚನ್ನಮ್ಮ ಮೈದಾನ (ಈದ್ಗಾ)ದಲ್ಲಿ ಪ್ರತಿಷ್ಠಾಪಿಸಿರುವ ಶ್ರೀಕೃಷ್ಣ ರೂಪದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಶುಕ್ರವಾರ ನೆರವೇರಲಿದೆ. ಬೆಳಗ್ಗೆ 7 ರಿಂದ 8ರ ವರೆಗೆ ವಿಷ್ಣು ಸಹಸ್ರನಾಮ, 9 ಗಂಟೆಗೆ ಪೂಜೆ, 10 ಗಂಟೆಯಿಂದ ಲೀಲಾವು ಕಾರ್ಯಕ್ರಮದ ಬಳಿಕ 12ಕ್ಕೆ ಗಣೇಶ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಮೈಸೂರಿನ ಮಾಜಿ ಸಂಸದ ಪ್ರತಾಪ ಸಿಂಹ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಿ, ಮುಖ್ಯ ಭಾಷಣ ಮಾಡಿಲಿದ್ದಾರೆ. ಈ ಬಾರಿ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಹಚ್ಚದಂತೆ ನಿರ್ಧರಿಸಲಾಗಿದ್ದು, 300ಕ್ಕೂ ಹೆಚ್ಚು ಜಾನಪದ ಕಲಾವಿದರು ಮೆರವಣಿಗೆಗೆ ಮೆರಗು ನೀಡಲಿದ್ದಾರೆ.