Home ನಮ್ಮ ಜಿಲ್ಲೆ ಧಾರವಾಡ ಧಾರವಾಡ: ಮಳೆ ಅಬ್ಬರ, ಅಂಗನವಾಡಿ, ಶಾಲೆ-ಕಾಲೇಜಿಗೆ ಮಂಗಳವಾರ ರಜೆ

ಧಾರವಾಡ: ಮಳೆ ಅಬ್ಬರ, ಅಂಗನವಾಡಿ, ಶಾಲೆ-ಕಾಲೇಜಿಗೆ ಮಂಗಳವಾರ ರಜೆ

0

ಧಾರವಾಡ: ಧಾರವಾಡ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಆಗಸ್ಟ್ 19ರ ಮಂಗಳವಾರ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ಜನ-ಜಾನುವಾರು ಹಾನಿಯಾಗದಂತೆ ಎಚ್ಚರಿಕೆ ವಹಿಸಿ. ನೀರಿನ ಹರಿವು ಹೆಚ್ಚಳದ ಬಗ್ಗೆ ನಿರಂತರ ನಿಗಾವಹಿಸಿ, ಜನರಲ್ಲಿ ಜಾಗೃತಿ ಮೂಡಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿದರು. ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆ ದೃಷ್ಟಿಯಿಂದ ಆಗಸ್ಟ್ 19ರಂದು ಜಿಲ್ಲೆಯ ಎಲ್ಲ ಅಂಗನವಾಡಿ ಕೆಂದ್ರಗಳಿಗೆ, ಪ್ರಾಥಮಿಕ ಶಾಲೆಗಳಿಗೆ, ಪ್ರೌಢಶಾಲೆಗಳಿಗೆ ಮತ್ತು ಪಿಯು ಕಾಲೇಜುಗಳಿಗೆ ಒಂದು ದಿನದ ರಜೆ ಘೋಷಿಸಲಾಗಿದೆ ಎಂದರು.

ಈ ಆಗಸ್ಟ್ 19ರ ರಜಾ ದಿನವನ್ನು ಮುಂದಿನ ಸಾರ್ವತ್ರಿಕ ರಜಾ ದಿನಗಳಲ್ಲಿ ತರಗತಿಗಳನ್ನು ನಡೆಸುವ ಮೂಲಕ ಹೊಂದಾಣಿಕೆ ಮಾಡಲು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದ್ದಾರೆ.

ಧಾರವಾಡದಲ್ಲಿ ನಿರಂತರ ಮಳೆ: ಧಾರವಾಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಮಳೆಯಿಂದಾಗಿ ಮಣ್ಣಿನ ಮನೆಗಳು ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಮತ್ತು ಸಂಬಂಧಿತ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಡಿಸಿ ಸೂಚಿಸಿದರು.

ಮಳೆಯಿಂದಾಗಿ ಜನ-ಜಾನುವಾರು ಜೀವ ಹಾನಿ ಆಗದಂತೆ ಅಗತ್ಯ ಕ್ರಮಕೈಗೊಳ್ಳಬೇಕು. ರಸ್ತೆ, ಸೇತುವೆ ಹಾನಿಯಾಗಿದ್ದಲ್ಲಿ ಪರಿಶೀಲಿಸಿ, ಸಾರ್ವಜನಿಕರ ಹಿತದೃಷ್ಟಿಯಿಂದ ಕ್ರಮಕೈಗೊಳ್ಳಬೇಕು. ಬೆಣ್ಣಿ ಹಳ್ಳ, ತುಪ್ಪರಿ ಹಳ್ಳ, ಬೆಡ್ತಿ ಹಳ್ಳ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಹರಿಯುತ್ತಿರುವ ಹಳ್ಳ ಕೊಳ್ಳಗಳು ತುಂಬಿ ಹರಿಯುವ ಸಾಧ್ಯತೆ ಇದೆ. ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ, ಜಲಮೂಲಗಳ ಸಮೀಪ ಸಂಚರಿಸದಂತೆ, ನೀರಿಗೆ ಇಳಿಯದಂತೆ ತಿಳಿಸಬೇಕು ಎಂದರು.

ತಹಶೀಲ್ದಾರ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಳ್ಳ, ಕೆರೆ ನೀರಿನ ಮಟ್ಟವನ್ನು ನಿರಂತರವಾಗಿ ಪರಿಶೀಲಿಸಬೇಕು. ಅಪಾಯಕಾರಿ ಮಟ್ಟ ತಲುಪಿದ ಸಂದರ್ಭದಲ್ಲಿ ತಕ್ಷಣ ಎಚ್ಚರಿಕೆ ನಾಮಫಲಕಗಳನ್ನು ಅಳವಡಿಸಬೇಕು. ತಗ್ಗು ಪ್ರದೇಶಗಳು, ಹಳ್ಳ, ಕೆರೆಗಳ ತೀರ ಪ್ರದೇಶಗಳನ್ನು ಗುರುತಿಸಿ ಅಲ್ಲಿ ವಾಸಿಸುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮವಹಿಸಬೇಕು ಎಂದು ಹೇಳಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಆಗಸ್ಟ್ 1 ರಿಂದ ಅಗಸ್ಟ್ 18ರ ತನಕ 81.5 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ ಈ ವರ್ಷ 122.4ರಷ್ಟು ಮಳೆಯಾಗಿದೆ. ಶೇ.50ರಷ್ಟು ಹೆಚ್ಚುವರಿ ಮಳೆಯಾಗಿದೆ.

ಸಹಾಯವಾಣಿ ಪ್ರಾರಂಭ: ಧಾರವಾಡ ಜಿಲ್ಲೆಯಲ್ಲಿ ಮಳೆಯಿಂದ ಸಮಸ್ಯೆ ಉಂಟಾದರೆ ಕರೆ ಮಾಡಲು ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗಿದೆ. ಸಹಾಯವಾಣಿ ಸಂಖ್ಯೆಗಳು 0836-2445508 ಹಾಗೂ 1077, ಧಾರವಾಡ ಉಪವಿಭಾಗಾಧಿಕಾರಿಗಳ ಕಚೇರಿ 0836-2233860.

ಧಾರವಾಡ ತಹಶೀಲ್ದಾರ್ ಕಾರ್ಯಾಲಯ 0836-2233822, ಅಳ್ಳಾವರ ತಹಶೀಲ್ದಾರ್ ಕಾರ್ಯಾಲಯ 0836-2385544, ಹುಬ್ಬಳ್ಳಿ ನಗರ ತಹಶೀಲ್ದಾರ್ ಕಾರ್ಯಾಲಯ 0836-2358035, ಹುಬ್ಬಳ್ಳಿ ತಹಶೀಲ್ದಾರ್ ಕಾರ್ಯಾಲಯ 0836-2233844.

ಕಲಘಟಗಿ ತಹಶೀಲ್ದಾರ್ ಕಾರ್ಯಾಲಯ 08370-284535, ಕುಂದಗೋಳ ತಹಶೀಲ್ದಾರ್ ಕಾರ್ಯಾಲಯ 08304-290239, ನವಲಗುಂದ ತಹಶೀಲ್ದಾರ್ ಕಾರ್ಯಾಲಯ 08380-229240, ಅಣ್ಣಿಗೇರಿ ತಹಶೀಲ್ದಾರ್ ಕಾರ್ಯಾಲಯ 8618442759 ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸಹಾಯವಾಣಿ ಕೇಂದ್ರ 0836-2213888, 0836-2213889, 0836-2213869.

ತೊಂದರೆಗೆ ಒಳಗಾದ ಜನರು ವಾಟ್ಸಪ್ ಸಂದೇಶದ ಮೂಲಕ ಸಹಾಯವಾಣಿ 8277803778ಗೆ ಫೋಟೋ, ವಿಡಿಯೋಗಳನ್ನು ಕಳಿಸುವ ಮೂಲಕ ಮಾಹಿತಿಯನ್ನು ನೀಡಬಹುದಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version